More

    ಬಂಡೀಪುರದಲ್ಲಿ ಪ್ರವೇಶ ಶುಲ್ಕ ವಸೂಲಿ

    ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಂಚರಿಸುವ ಪ್ರವಾಸಿ ವಾಹನಗಳಿಂದ ಪ್ರವೇಶ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಬಂಡೀಪುರ ಟೈಗರ್ ಕನ್ಸರ್ವೇಷನ್ ಫೌಂಡೇಷನ್‌ಗೆ ಭಾರಿ ಆದಾಯ ತಂದುಕೊಡುತ್ತಿದೆ.

    ಈವರೆಗೆ ಬಂಡೀಪುರ ಟೈಗರ್ ಕನ್ಸರ್ವೇಷನ್ ಫೌಂಡೇಷನ್‌ಗೆ ಬಂಡೀಪುರದ ಸಫಾರಿ, ಅತಿಥಿಗೃಹಗಳು, ಗೋಪಾಲಸ್ವಾಮಿಬೆಟ್ಟ ತಪ್ಪಲಿನ ಪಾರ್ಕಿಂಗ್ ಮುಂತಾದ ಮೂಲಗಳಿಂದ ಸಂಗ್ರಹವಾಗುತ್ತಿದ್ದ ಆದಾಯಕ್ಕಿಂತ ನೆರೆರಾಜ್ಯಗಳ ವಾಹನಗಳಿಂದ ಸಂಗ್ರಹವಾಗುತ್ತಿರುವ ಪ್ರವೇಶ ಶುಲ್ಕವೇ ದೊಡ್ಡ ಆದಾಯದ ಮೂಲವಾಗುತ್ತಿದೆ.

    ನೆರೆಯ ಮುದುಮಲೈ ಅರಣ್ಯ ಪ್ರದೇಶದ ಮಾರ್ಗವಾಗಿ ತಮಿಳುನಾಡಿನತ್ತ ಸಾಗುವ ವಾಹನಗಳಿಂದ ಊಟಿಯ ಜಿಲ್ಲಾಡಳಿತ ಹಸಿರು ಶುಲ್ಕ ಸಂಗ್ರಹಿಸಿ ಪರಿಸರ ಸಂಬಂಧಿತ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿದೆ. ಬಂಡೀಪುರದಲ್ಲಿಯೂ ಪ್ರವೇಶ ಶುಲ್ಕ ವಸೂಲಾತಿಗೆ ಅನುಮತಿ ನೀಡುವಂತೆ ಅರಣ್ಯಾಧಿಕಾರಿಗಳು ಮನವಿ ಮಾಡಿದ್ದರು. ಇದಕ್ಕೆ ಅಂದಿನ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಪ್ರಸ್ತಾವನೆ ಯನ್ನು ತಿರಸ್ಕರಿಸಿದ್ದರು.

    ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದ ಮೇರೆಗೆ 2023ರ ಏಪ್ರಿಲ್ ತಿಂಗಳಿನಿಂದ ನೆರೆಯ ಕೇರಳ ಹಾಗೂ ತಮಿಳುನಾಡುಗಳಿಂದ ಬಂಡೀಪುರದ ಮೂಲಕ ಸಂಚರಿಸುವ ಪ್ರವಾಸಿ ವಾಹನಗಳಿಂದ (ಮೈಸೂರು ಹಾಗೂ ಚಾಮರಾಜನಗರ ಸ್ಥಳೀಯ ಪ್ರವಾಸಿಗರನ್ನು ಹೊರತುಪಡಿಸಿ) ಅರಣ್ಯ ಇಲಾಖೆ ಪ್ರವೇಶ ಶುಲ್ಕ ವಸೂಲಿಗೆ ಅನುಮತಿ ನೀಡಿದೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಂದ ತಮಿಳುನಾಡು ರಸ್ತೆಯ ಮೇಲುಕಾಮನಹಳ್ಳಿ ಹಾಗೂ ಕೆಕ್ಕನಹಳ್ಳ ಚೆಕ್‌ಪೋಸ್ಟ್, ಕೇರಳ ರಸ್ತೆಯ ಮದ್ದೂರು ಹಾಗೂ ಮೂಲೆಹೊಳೆಗಳ ಚೆಕ್‌ಪೋಸ್ಟ್‌ಗಳಲ್ಲಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ರಸ್ತೆಗಳಲ್ಲಿ ಪ್ರತಿದಿನವೂ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಲಘು ವಾಹನಗಳಿಗೆ 20 ರೂ. ಹಾಗೂ ಭಾರಿ ವಾಹನಗಳಿಂದ 50 ರೂ. ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಈ ಆದಾಯವೇ ಹತ್ತು ತಿಂಗಳಲ್ಲಿ ನಾಲ್ಕೂವರೆ ಕೋಟಿ ರೂ. ಸಂಗ್ರಹವಾಗಿದೆ.

    ಹತ್ತು ತಿಂಗಳ ಹಿಂದೆ ಬಂಡೀಪುರ ಮಾರ್ಗವಾಗಿ ಸಂಚರಿಸುವ ಪ್ರವಾಸಿ ವಾಹನಗಳಿಂದ ಸಂಗ್ರಹಿಸಿದ ಪ್ರವೇಶ ಶುಲ್ಕದಿಂದ ಈವರೆಗೆ 4.5 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಸಫಾರಿ, ಅತಿಥಿಗೃಹ ಹಾಗೂ ಪಾರ್ಕಿಂಗ್‌ನಿಂದ ಸಂಗ್ರಹವಾಗುತ್ತಿದ್ದ 1.5 ರಿಂದ 2 ಕೋಟಿ ರೂ. ಆದಾಯಕ್ಕಿಂತ ಪ್ರವೇಶ ಶುಲ್ಕದಿಂದಲೇ ಮಾರ್ಚ್ ಅಂತ್ಯದವರೆಗೆ 5 ಕೋಟಿ ರೂ. ತಲುಪುವ ನಿರೀಕ್ಷೆಯಿದೆ.
    ಡಾ.ಪಿ.ರಮೆಶ್ ಕುಮಾರ್ ಬಂಡೀಪುರ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts