2.5 ಲಕ್ಷ ರೂ. ಲಂಚ ಹಂಚಿಕೆ ವಿವಾದ: ಮಹಿಳಾ ಇನ್​ಸ್ಪೆಕ್ಟರ್​ ಆತ್ಮಹತ್ಯೆ ಯತ್ನ, ಠಾಣೆಯ ಎಲ್ಲ ಸಿಬ್ಬಂದಿಗೂ ಅಮಾನತು ಶಿಕ್ಷೆ

ಲಕ್ನೋ: ಅದು ಮಹಿಳಾ ಪೊಲೀಸ್​ ಠಾಣೆ. ಯಾವುದೋ ಒಂದು ಪ್ರಕರಣದಲ್ಲಿ ಆ ಠಾಣೆಗೆ 2.5 ಲಕ್ಷ ರೂ. ಲಂಚ ಬಂದಿತ್ತು. ಇದನ್ನು ಹಂಚಿಕೊಳ್ಳುವ ವಿಷಯವಾಗಿ ಠಾಣೆಯ ಸಬ್​ ಇನ್​ಸ್ಪೆಕ್ಟರ್​ ಮತ್ತು ಠಾಣಾಧಿಕಾರಿ ನಡುವೆ ವಿವಾದ ಏರ್ಪಟ್ಟಿತ್ತು. ಇದು ತಾರಕಕ್ಕೆ ಹೋಗಿದ್ದರಿಂದ ಸಬ್​ ಇನ್​ಸ್ಪೆಕ್ಟರ್​ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವಿಷಯ ಎಸ್​ಎಸ್​ಪಿವರೆಗೂ ಹೋಗಿತ್ತು. ಇದೀಗ ಅವರು, ಠಾಣೆಯ ಎಲ್ಲ ಸಿಬ್ಬಂದಿಯನ್ನೂ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇದು ಲಕ್ನೋ ಬಳಿಯ ಮುಜಾಫರ್​ನಗರ ಜಿಲ್ಲಾ ಮಹಿಳಾ ಪೊಲೀಸ್​ ಠಾಣೆಯ ಕಥೆ. ಸಬ್​ ಇನ್​ಸ್ಪೆಕ್ಟರ್​ ಸೀಮಾ ಯಾದವ್​ ಆತ್ಮಹತ್ಯೆಗೆ ಯತ್ನಿಸಿದವರು. ಸದ್ಯ ಇವರು ಜೀವನ್ಮರಣದ ನಡುವೆ ಹೊಡೆದಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಮುಜಾಫರನಗರ ಜಿಲ್ಲಾ ಮಹಿಳಾ ಪೊಲೀಸ್​ ಠಾಣೆಯ ಠಾಣಾಧಿಕಾರಿಯಾಗಿ ಪ್ರೀತಾ ಯಾದವ್​ ನೇಮಕಗೊಂಡ ನಂತರದಲ್ಲಿ ಈ ಠಾಣೆ ಲಂಚಾವತಾರ ಬೀಡಾಗಿತ್ತು. ಈ ಕುರಿತು ಸೀನಿಯರ್​ ಸೂಪರಿಂಟೆಂಡೆಂಟ್​ ಆಫ್​ ಪೊಲೀಸ್​ (ಎಸ್​ಎಸ್​ಪಿ) ಅಭಿಷೇಕ್​ ಯಾದವ್​ ಅವರಿಗೆ ಸಾಕಷ್ಟು ದೂರುಗಳು ಹೋಗಿದ್ದವು. ಕೆಲವು ಪ್ರಕರಣಗಳ ಕುರಿತು ಸೂಪರಿಂಟೆಂಡೆಂಟ್​ ಆಫ್​ ಪೊಲೀಸ್​ ಮೂಲಕ ತನಿಖೆ ನಡೆಸಲು ಎಸ್​ಎಸ್​ಪಿ ಮುಂದಾಗಿದ್ದರು. ಆದರೆ ಇತ್ತೀಚೆಗೆ ಠಾಣೆಗೆ 2.5 ಲಕ್ಷ ರೂ. ಲಂಚ ಬಂದಿತ್ತು. ಇದನ್ನು ಹಂಚಿಕೊಳ್ಳುವ ವಿಚಾರವಾಗಿ ಠಾಣಾಧಿಕಾರಿ ಪ್ರೀತಾ ಯಾದವ್​, ಎಸ್​ಐ ಸೀಮಾ ಯಾದವ್​ ಅಲ್ಲದೆ ಠಾಣೆಯ ಇತರೆ ಸಿಬ್ಬಂದಿ ನಡುವೆ ಭಾರಿ ಜಗಳ ಏರ್ಪಟ್ಟಿತ್ತು.

ಇದರಿಂದ ಬೇಸತ್ತ ಸೀಮಾ ಯಾದವ್​ ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಕುರಿತು ಎಸ್​ಎಸ್​ಪಿಗೆ ದೂರು ಹೋಗಿತ್ತು. ತಕ್ಷಣವೇ ಅವರು ಠಾಣೆಗೆ ಬಂದು ಜಿಲ್ಲಾ ಮಹಿಳಾ ಪೊಲೀಸ್​ ಠಾಣೆಯ ಎಲ್ಲ ಸಿಬ್ಬಂದಿಯನ್ನೂ ಸೇವೆಯಿಂದ ಅಮಾನತುಗೊಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *