ಕಳವು ಆರೋಪಿ ಲಾಕಪ್‌ ಡೆತ್‌: ಇಡೀ ಪೊಲೀಸ್ ಠಾಣೆ ವಿರುದ್ಧ ಪ್ರಕರಣ ದಾಖಲು

ಆಗ್ರಾ: ಆಗ್ರಾದ ಸಿಕಂದರಾ ಬಾದ್‌ ಪೊಲೀಸ್‌ ಠಾಣೆಯಲ್ಲಿ ಕಳ್ಳತನದ ಆರೋಪದ ಮೇಲೆ ಪೊಲೀಸ್ ವಶದಲ್ಲಿದ್ದಾಗಲೇ 32 ವರ್ಷದ ವ್ಯಕ್ತಿ ಮೃತಪಟ್ಟ ಸಂಬಂಧ ಇಡೀ ಪೊಲೀಸ್ ಠಾಣೆ ವಿರುದ್ಧವೇ ಪ್ರಕರಣ ದಾಖಲಾಗಿದೆ. ಈಗಾಗಲೇ ಇನ್ಸ್‌ಪೆಕ್ಟರ್‌ ಮತ್ತು ಇಬ್ಬರು ಸಬ್‌ ಇನ್ಸ್‌ಪೆಕ್ಟರ್‌ಗಳನ್ನು ಅಮಾನತುಗೊಳಿಸಲಾಗಿದೆ.

55 ವರ್ಷದ ತಾಯಿಯ ಎದುರೇ ಪೊಲೀಸರಿಂದ ಚಿತ್ರಹಿಂಸೆಗೊಳಗಾದ ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮೃತನನ್ನು ಹೇಮಂತ್‌ ಕುಮಾರ್ ಅಲಿಯಾಸ್‌ ರಾಜು ಗುಪ್ತಾ ಎಂದು ಗುರುತಿಸಲಾಗಿದ್ದು, ನೆರೆಮನೆಯಾತ ನೀಡಿದ ದೂರಿನ ಆಧಾರದ ಮೇಲೆ 7 ಲಕ್ಷ ಮೌಲ್ಯದ ಚಿನ್ನಾಭರಣಗಳ ಕಳ್ಳತನದ ಆರೋಪದ ಮೇಲೆ ಗೈಲಾನ ರಸ್ತೆಯ ಬಾಡಿಗೆ ಮನೆಯಿಂದ ಪೊಲೀಸರು ಬುಧವಾರ ಸಂಜೆ ಬಂಧಿಸಿ ಕರೆತಂದಿದ್ದರು.

ರಾಜು ತಾಯಿ ರೀನು ಲತಾ ಮಾತನಾಡಿ, ನನ್ನ ಮಗ ಮಾನಸಿಕ ಅಸ್ವಸ್ಥನಾಗಿದ್ದು, ಅನ್ಶುಲ್‌ ಎಂಬವರ ಕೆಮಿಕಲ್‌ ಶಾಪ್‌ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಬುಧವಾರ ಮಧ್ಯಾಹ್ನ ಅನ್ಶುಲ್‌ ಮನೆಯಿಂದ ನನ್ನ ಮಗ ಒಡವೆಗಳನ್ನು ಕದ್ದಿದ್ದ ಎಂದು ಪೊಲೀಸರಿಗೆ ಒಪ್ಪಿಸಿದ್ದ. ನಾನು ಎಷ್ಟೇ ಬೇಡಿಕೊಂಡರೂ ಕೇಳದೆ ನನ್ನ ಎದುರಿಗೆ ನನ್ನ ಮಗನನ್ನು ಲಾಠಿಯಿಂದ ಹೊಡೆದರು ಎಂದು ದೂರಿದ್ದಾರೆ.

ಗುರುವಾರ ಮುಂಜಾನೆ ನನ್ನನ್ನು ಠಾಣೆಗೆ ಕರೆದೊಯ್ದಿದ್ದ ಪೊಲೀಸರು ನನ್ನ ಎದುರಿಗೆ ಮಗನಿಗೆ ಲಾಠಿ ಹೊಡೆದು ಕಿರುಕುಳ ನೀಡಿದರು. ನಂತರ ಸಂಜೆ 6 ಗಂಟೆ ವೇಳೆಗೆ ನನ್ನನ್ನು ಮನೆಗೆ ಬಿಟ್ಟರು. ರಾತ್ರಿ 9 ಗಂಟೆ ಸುಮಾರಿಗೆ ನನ್ನ ಮಗ ಲಾಕಪ್‌ನಲ್ಲೇ ಮೃತಪಟ್ಟಿರುವ ಕುರಿತು ಪೊಲೀಸರು ಮಾಹಿತಿ ನೀಡಿದರು ಎಂದು ತಿಳಿಸಿದರು.

ಎಸ್‌ಬಿಐ ಬ್ಯಾಂಕ್‌ ಮ್ಯಾನೇಜರ್‌ ಆಗಿದ್ದ ರೀನು ಲತಾರ ಪತಿ ಓಂ ಪ್ರಕಾಶ್‌ ಗುಪ್ತಾ 2001ರಲ್ಲಿ ಮರಣ ಹೊಂದಿದ್ದರು. ಅದಾದ ಬಳಿಕ ತಾಯಿ ಮಗ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅವರಿಬ್ಬರ ವಿವಾಹಿತ ಪುತ್ರಿಯರು ವೃಂದಾವನ ಮತ್ತು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. (ಏಜೆನ್ಸೀಸ್)