ಗುಳೇದಗುಡ್ಡ: ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗದ ಶಿಫಾರಸಿನ ಮೇರೆಗೆ ಪರಿಶಿಷ್ಟ ಜಾತಿಗಳ ಸಮೀಕ್ಷೆ ಪ್ರಾರಂಭವಾಗಿದ್ದು, ರಾಜ್ಯಾದ್ಯಂತ ಮಾದಿಗ ಏಕರೂಪಕತೆ ಪಡೆಯಲು ಪಟ್ಟಿಯಲ್ಲಿರುವ ಕ್ರಮಸಂಖ್ಯೆ 61ಅನ್ನು ಬಳಸಿ ಮಾದಿಗ ಎಂದು ದಾಖಲಿಸುವಂತೆ ಜಿಲ್ಲಾದ್ಯಂತ ಜನಜಾಗೃತಿ ಸಭೆ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಮಾದಿಗ ಸಂಘಟನೆಗಳ ಜಿಲ್ಲಾ ಒಕ್ಕೂಟದ ಮುಖಂಡ ಪೀರಪ್ಪ ಮ್ಯಾಗೇರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆ ಸಂದರ್ಭದಲ್ಲಿ ಆಯೋಗಕ್ಕೆ ಸರಿಯಾದ ಮಾಹಿತಿ ನೀಡಬೇಕು. ಸಮಾಜದಲ್ಲಿ ಸಾಕಷ್ಟು ಜನರು ಅನಕ್ಷರಸ್ಥರಿದ್ದು, ಸಮಾಜದ ಶಿಕ್ಷಿತರು, ನಿವೃತ್ತ ನೌಕರರು ಅವರಿಗೆ ಸರಿಯಾಗಿ ಮಾರ್ಗದರ್ಶನ ನೀಡಬೇಕು. ಸಮೀಕ್ಷೆ ಮುಗಿಯುವವರೆಗೆ ನಾವು ಕಾವಲುಗಾರರಂತೆ ಕೆಲಸ ಮಾಡಬೇಕು ಎಂದರು.
ಸಮಾಜದ ಮುಖಂಡ ಮುತ್ತಣ್ಣ ಬೆಣ್ಣೂರ ಮಾತನಾಡಿ, ಮೂರು ರೀತಿಯಲ್ಲಿ ಜಾತಿ ಸಮೀಕ್ಷೆ ನಡೆಯಲಿದೆ. ಗಣತಿದಾರರು ಮನೆ ಬಾಗಿಲಿಗೆ ಬಂದಾಗ ಅವರು ಕೇಳಿದ ಮಾಹಿತಿಯನ್ನು ಸರಿಯಾಗಿ ನೀಡಬೇಕು. ಅವರು ಮನೆಗೆ ಬಂದಾಗ ಮಾಹಿತಿ ಕೊಡಲು ಸಾಧ್ಯವಾಗದಿದ್ದರೆ ಅಥವಾ ಮನೆಯಲ್ಲಿ ಇಲ್ಲದಿದ್ದರೆ ಸ್ಥಳೀಯವಾಗಿ ವ್ಯವಸ್ಥೆ ಮಾಡಿರುವ ಬೂತ್ ಕಚೇರಿಗೆ ಹೋಗಿ ಮಾಹಿತಿ ನೀಡಬೇಕು ಎಂದರು.
ಯಮನಪ್ಪ ದಳಪತಿ, ತಿಪ್ಪಣ್ಣ ಕಟ್ಟಿಮನಿ, ಯಮನೂರ ನಡುವಿನಮನಿ, ಯಲ್ಲಪ್ಪ ಪೂಜಾರಿ, ಸತೀಶ ಮಾದರ, ಸುಭಾಷ ಹೊಸಮನಿ, ಹಿರಿಯಪ್ಪ ಮಾದರ, ಪರಶುರಾಮ ಮಾದರ, ನೀಲಪ್ಪ ಮಾದರ, ರೆಡ್ಡಿ ನಡುವಿನಮನಿ, ಸಿದ್ದು ಮಾದರ ಮತ್ತಿತರರಿದ್ದಾರೆ.