ವಿದ್ಯಾರ್ಥಿಗಳ ಹೆಚ್ಚಳಕ್ಕೆ ದಾಖಲಾತಿ ಆಂದೋಲನ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಪಿಯು ಇಲಾಖೆ ‘ದಾಖಲಾತಿ ಆಂದೋಲನ’ ನಡೆಸಲು ನಿರ್ಧರಿಸಿದೆ. ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕಿದ್ದು, ಸರ್ಕಾರಿ ಶಾಲಾ ಮಕ್ಕಳನ್ನು ಸರ್ಕಾರಿ ಕಾಲೇಜುಗಳಿಗೆ ಆಕರ್ಷಿಸಲು ಪಿಯು ಇಲಾಖೆ ತೀರ್ವನಿಸಿದೆ.

ದಾಖಲಾತಿ ಆಂದೋಲನ ಈ ತಿಂಗಳಿನಿಂದಲೇ ಆರಂಭಿಸಿ ಜೂನ್ ಎರಡನೇ ವಾರದೊಳಗೆ ಮುಗಿಸಬೇಕು. ಹೀಗಾಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳ ಮಾಹಿತಿ ಕ್ರೋಡೀಕರಿಸುವಂತೆ ಪಿಯು ಪ್ರಾಂಶುಪಾಲರಿಗೆ ಇಲಾಖೆ ಸೂಚನೆ ನೀಡಿದೆ.

ಕ್ರೋಡೀಕರಣದ ಬಳಿಕ ವಿದ್ಯಾರ್ಥಿಗಳ ಪಾಲಕರನ್ನು ಸಂರ್ಪಸಿ ಕಾಲೇಜುಗಳಿಗೆ ಪ್ರವೇಶ ಪಡೆಯುವಂತೆ ಪ್ರೇರೇಪಿಸಬೇಕಿದೆ. ಕಾಲೇಜಿನಲ್ಲಿನ ಸೌಲಭ್ಯ, ಸರ್ಕಾರದ ಯೋಜನೆಗಳನ್ನು ಫೇಸ್​ಬುಕ್, ವೆಬ್​ಸೈಟ್, ಭಿತ್ತಿಪತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಬೇಕಿದೆ. ಇದಕ್ಕಾಗಿ ಆಯಾ ಕಾಲೇಜುಗಳು ತಮ್ಮ ಸಂಚಿತ ನಿಧಿಯಿಂದ ಒಂದು ಸಾವಿರ ರೂ. ಬಳಸಲು ಇಲಾಖೆ ಅನುಮತಿ ನೀಡಿದೆ.

ಕಾಲೇಜಿನ ಪ್ರಾಂಶುಪಾಲರು-ಉಪನ್ಯಾಸಕರು ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಅವರ ವ್ಯಾಸಂಗ ವೆಚ್ಚ ಭರಿಸಬಹುದು. ದಾಖಲಾತಿ ಹೆಚ್ಚಿಸಲು ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಕರೆದು ರ್ಚಚಿಸಬೇಕಿದೆ. ಡಿಡಿಪಿಐಗಳು ಈ ಆಂದೋಲನಕ್ಕಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಪ್ರತಿ ವರ್ಷದ ದಾಖಲಾತಿ ಆಂದೋಲನದ ಬಳಿಕ ದಾಖಲಾತಿ ಹೆಚ್ಚಳದ ಕುರಿತು ವರದಿ ತಯಾರಿಸಬೇಕು. ಉಪನ್ಯಾಸಕರು ಸಾಧನೆ ಮಾಡಿದ್ದಲ್ಲಿ ಅವರ ಸೇವೆ ಗುರುತಿಸಿ ಭಾವಚಿತ್ರದ ಸಹಿತ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಿರುವ ಮಾಹಿತಿ ವೆಬ್​ಸೈಟ್​ನಲ್ಲಿ ಪ್ರಕಟಿಸಬೇಕಿದೆ.