34 ವರ್ಷಗಳಲ್ಲಿ ಬಂದ್‌ನಿಂದಾಗಿ ರಾಜ್ಯ ಹಾಳಾಗಿದೆ ಎಂದು ಕಿಡಿಕಾರಿದ ಮಮತಾ ಬ್ಯಾನರ್ಜಿ

ಹೌರಾ: ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್‌ನಿಂದಾಗಿ ಪಶ್ಚಿಮ ಬಂಗಾಳದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂದ್‌ ವಿರುದ್ಧ ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ವಿರೋಧಿಸಿ 10ಕ್ಕೂ ಹೆಚ್ಚು ಕೇಂದ್ರ ವಾಣಿಜ್ಯ ಒಕ್ಕೂಟಗಳು 48 ಗಂಟೆಗಳ ಭಾರತ್ ಬಂದ್‌ಗೆ ಕರೆ ನೀಡಿ ಪ್ರತಿಭಟನೆ ಕೈಗೊಂಡಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ಈ ಬಂದ್‌ ಕುರಿತಂತೆ ನಾನು ಒಂದು ಮಾತನ್ನು ಆಡುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಈ ಬಂದ್‌ಗೆ ನಾವು ಬೆಂಬಲ ಸೂಚಿಸುವುದಿಲ್ಲ. ಬಂದ್‌ನಿಂದ ಈಗ ಆಗಿರುವುದೇ ಸಾಕಾಗಿದೆ. 34 ವರ್ಷಗಳಿಂದಲೂ ಎಡರಂಗಗಳು ಬಂದ್‌ಗೆ ಕರೆ ನೀಡುವ ಮೂಲಕ ರಾಜ್ಯವನ್ನು ಹಾಳು ಮಾಡಿವೆ. ಹಾಗಾಗಿ ಯಾವುದೇ ಬಂದ್‌ ಇಲ್ಲ ಎಂದು ಹೇಳಿದ್ದಾರೆ.

ಸರ್ಕಾರದ ಯಾವುದೇ ಉದ್ಯೋಗಿಗಳು ಮಂಗಳವಾರ ಮತ್ತು ಬುಧವಾರದಂದು ಕ್ಯಾಸುಯಲ್‌ ರಜೆ(CL) ಅಥವಾ ಅರ್ಧ ದಿನದ ರಜೆಯನ್ನು ಪಡೆಯಲು ಅನುಮತಿ ನೀಡಲಾಗುವುದಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರವು ಘೋಷಿಸಿದೆ. ಇದಲ್ಲದೆ, ಎರಡು ದಿನದ ಮುಷ್ಕರದ ಸಂದರ್ಭದಲ್ಲಿ ಯಾವುದೇ ರಜೆಗಳನ್ನು ನೀಡಲಾಗುವುದಿಲ್ಲ ಎಂದು ಸರ್ಕಾರ ಒಂದು ವಾರದ ಹಿಂದೆಯೇ ಸೂಚನೆ ಹೊರಡಿಸಿತ್ತು.

ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಹೆಚ್ಚುವರಿ ಪೊಲೀಸ್ ಪಡೆಯನ್ನು ಪ್ರಮುಖ ನಗರಗಳಲ್ಲಿ ನಿಯೋಜಿಸಲಾಗಿದೆ. ಒತ್ತಾಯ ಪೂರ್ವಕವಾಗಿ ಅಂಗಡಿಗಳನ್ನು ತೆರೆಯಲು ಅಥವಾ ಕಚೇರಿಗೆ ತೆರಳುವವರನ್ನು ತಡೆಗಟ್ಟಲು ಮುಂದಾಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)