ಆಂಗ್ಲಮಾಧ್ಯಮಕ್ಕೆ 2222 ಮಕ್ಕಳು

ಪ್ರಕಾಶ್ ಮಂಜೇಶ್ವರ ಮಂಗಳೂರು

ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಲ್ಲಿ ಕನ್ನಡದ ಜತೆಯಲ್ಲೇ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಸರ್ಕಾರದ ಪ್ರಯತ್ನದ ಮೂಲ ಉದ್ದೇಶ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈಡೇರಿದೆ.
ದಕ್ಷಿಣ ಕನ್ನಡದಲ್ಲಿ ಪ್ರಾಯೋಗಿಕವಾಗಿ ಈ ಬಾರಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿದ ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಆಂಗ್ಲ ಮಾಧ್ಯಮಕ್ಕೆ ಪ್ರವೇಶ ಪಡೆದವರ ಸಂಖ್ಯೆ ಏಳು ಪಟ್ಟು ಅಧಿಕ.

ಹೊಸ ಯೋಜನೆಗೆ ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿರುವ ಒಟ್ಟು 43 ಶಾಲೆಗಳಲ್ಲಿ ಈ ಬಾರಿ ಕನ್ನಡ ಮಾಧ್ಯಮಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಸಂಖ್ಯೆ 224 ಇದ್ದು, ಇದೇ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಪ್ರವೇಶ ಪಡೆದವರು 1583 ಮಂದಿ. ಉಡುಪಿ ಜಿಲ್ಲೆಯಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಅವಕಾಶ ಪಡೆದ 22 ಶಾಲೆಗಳಲ್ಲಿ ಒಟ್ಟು 639 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಪ್ರವೇಶ ಪಡೆದವರು ಕೇವಲ 110 ವಿದ್ಯಾರ್ಥಿಗಳು.

30 ದಾಟಿದ ಶಾಲೆ: ಆಂಗ್ಲ ಮಾಧ್ಯಮ ಆರಂಭಿಸಿದ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 30ಕ್ಕೆ ಸೀಮಿತಗೊಳಿಸುವಂತೆ ಸರ್ಕಾರಿ ಆದೇಶವಿದ್ದರೂ ದಕ್ಷಿಣ ಕನ್ನಡದ 21ಕ್ಕೂ ಅಧಿಕ ಶಾಲೆಗಳಲ್ಲಿ ಈ ಮಿತಿಯನ್ನು ಮೀರಿ 30ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಒದಗಿಸಲಾಗಿದೆ.
ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸೇರ್ಪಡೆಗೆ ಮಿತಿ ಹೇರಿರುವ ಸರ್ಕಾರದ ಕ್ರಮಕ್ಕೆ ಮಕ್ಕಳ ಹೆತ್ತವರು ಹಾಗೂ ಬೋಧಕ ವರ್ಗದಿಂದ ವಿರೋಧ ವ್ಯಕ್ತವಾಗಿತ್ತು. ಅಗತ್ಯವಿರುವ ಕಡೆ ಹೆಚ್ಚುವರಿ ವಿಭಾಗಗಳನ್ನು ತೆರೆದು ಹೆಚ್ಚುವರಿ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಒದಗಿಸುವ ಕುರಿತು ಮುಖ್ಯಮಂತ್ರಿಯವರು ಇತ್ತೀಚೆಗೆ ಭರವಸೆ ನೀಡಿರುವುದು ಕರಾವಳಿ ಜನರಲ್ಲಿ ಸಮಾಧಾನ ತಂದಿದೆ.

ಗರಿಷ್ಠ ವಿದ್ಯಾರ್ಥಿಗಳು
ದಡ್ಡಲಕಾಡು ಸರ್ಕಾರಿ ಹಿ.ಪ್ರಾ. ಶಾಲೆ(ಬಂಟ್ವಾಳ) 106, ಸರ್ಕಾರಿ ಹಿ.ಪ್ರಾ. ಇಂಗ್ಲಿಷ್ ಮಾಧ್ಯಮ ಶಾಲೆ (ದೇರಳಕಟ್ಟೆ) 104, ವಿಟ್ಲ ಸರ್ಕಾರಿ ಹಿ.ಪ್ರಾ. ಮಾದರಿ ಶಾಲೆ(ಪುತ್ತೂರು) 128, ಹಾರಾಡಿ ಸರ್ಕಾರಿ ಹಿ.ಪ್ರಾ. ಶಾಲೆ(ಪುತ್ತೂರು) 63, ಬೆಳ್ಳಾರೆ ಸರ್ಕಾರಿ ಹಿ.ಪ್ರಾ. ಶಾಲೆ (ಸುಳ್ಯ) 62 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

28 ಶಾಲೆಗಳಲ್ಲಿ ಕನ್ನಡಕ್ಕೆ ವಿದ್ಯಾರ್ಥಿಗಳೇ ಇಲ್ಲ!
ಹೆಬ್ರಿ ಹಿ.ಪ್ರಾ. ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ 23 ಮಕ್ಕಳು ಪ್ರವೇಶ ಪಡೆದಿದ್ದರೆ, ಕನ್ನಡ ಮಾಧ್ಯಮಕ್ಕೆ ಯಾವೊಬ್ಬ ವಿದ್ಯಾರ್ಥಿಯೂ ದೊರೆತ್ತಿಲ್ಲ. ಇದೊಂದು ನಿದರ್ಶನ ಮಾತ್ರ. ಕನ್ನಡದ ಜತೆ ಇಂಗ್ಲಿಷ್ ಮಾಧ್ಯಮಕ್ಕೆ ಅವಕಾಶ ಪಡೆದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 65 ಸರ್ಕಾರಿ ಶಾಲೆಗಳ ಪೈಕಿ 28 ಶಾಲೆಗಳಲ್ಲಿ (ದ.ಕ. 20, ಉಡುಪಿ 8) ಕನ್ನಡ ಮಾಧ್ಯಮಕ್ಕೆ ಯಾವುದೇ ವಿದ್ಯಾರ್ಥಿ ಪ್ರವೇಶ ಪಡೆದಿಲ್ಲ.

ಪ್ರಸಕ್ತ ವರ್ಷ ಆರಂಭಿಸಿದ ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಜಿಲ್ಲೆಯ ಜನರಿಂದ ಅತ್ಯುತ್ತಮ ಸ್ಪಂದನೆ ದೊರೆತಿದೆ. ಪಾಲಕರು ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸೇರ್ಪಡೆಗೆ ಸರ್ಕಾರ ಮಿತಿ ಹೇರುವ ಮೊದಲೇ ಅನೇಕ ಶಾಲೆಗಳಲ್ಲಿ ನಾವು 30ಕ್ಕಿಂತ ಅಧಿಕ ವಿದ್ಯಾರ್ಥಿಗಳಿಗೆ ಪ್ರವೇಶ ಒದಗಿಸಿದ್ದೆವು.
– ವೈ.ಶಿವರಾಮಯ್ಯ, ಡಿಡಿಪಿಐ, ದ.ಕ.

ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕೂಡ ಪ್ರಥಮ ಭಾಷೆ ಕನ್ನಡವೇ ಇರುತ್ತದೆ, ಅದು ಕಡ್ಡಾಯ. ಜತೆಗೆ ಕನ್ನಡ ಭಿತ್ತಿಪತ್ರ, ಕಮ್ಮಟ, ಭಾಷಣ ಸ್ಪರ್ಧೆ, ಸಾಹಿತ್ಯ ಸಮ್ಮೇಳನ, ನಾಟಕ ಹಾಡು, ಜನಪದ ಮುಂತಾದ ಚಟುವಟಿಕೆಗಳನ್ನು ಅಧಿಕ ಸಂಖ್ಯೆಯಲ್ಲಿ ನಡೆಸುವುದರ ಮೂಲಕ ಕನ್ನಡಕ್ಕೆ ಪೂರಕ ಕಾರ‌್ಯಕ್ರಮ ಜೋಡಿಸಲು ಉದ್ದೇಶಿಸಲಾಗಿದೆ.
– ಶಿವಪ್ರಕಾಶ್, ಬಿಇಒ, ಬಂಟ್ವಾಳ

Leave a Reply

Your email address will not be published. Required fields are marked *