ಭಾರತ-ಇಂಗ್ಲೆಂಡ್​ 4ನೇ ಟೆಸ್ಟ್: ಭಾರತದ ವಿರುದ್ಧ ಇಂಗ್ಲೆಂಡ್​ಗೆ 60 ರನ್​ಗಳ ಗೆಲುವು

>

ಸೌಥಾಂಪ್ಟನ್: ಭಾರಿ ಕುತೂಹಲ ಕೆರಳಿಸಿದ್ದ ಭಾರತ-ಇಂಗ್ಲೆಂಡ್​ ನಡುವಣ 4ನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ನೀಡಿದ್ದ 245ರನ್​ಗಳ ಸುಲಭ ಗುರಿ ತಲುಪಲು ತಿಣುಕಾಡಿದ ವಿರಾಟ್​ ಪಡೆ 184 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಸರಣಿ ಸೋಲನುಭವಿಸಿದೆ.

ಇಂಗ್ಲೆಂಡ್​ನ ಸೌಂಥಾಂಪ್ಟನ್​ನ ರೋಸ್​​ಬೌಲ್​ ಮೈದಾನದಲ್ಲಿ ನಡೆದ 4ನೇ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ ಭಾರತಕ್ಕೆ 245 ರನ್​ ಗುರಿ ನೀಡಿತ್ತು. ಇದರ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭದಲ್ಲೇ ಮೂರು ವಿಕೆಟ್​ ಕಳೆದುಕೊಂಡಿತು. ಆಂಗ್ಲ ಬೌಲರ್​ ಮೋಯಿನ್​​ ಅಲಿ ದಾಳಿಗೆ ತತ್ತರಿಸಿದ ಭಾರತ ಸೋಲಿನ ಕಡೆ ಹೆಜ್ಜೆ ಹಾಕಿತು.

ಆರಂಭಿಕ ಆಟಗಾರರಾದ ಕೆ.ಎಲ್​.ರಾಹುಲ್​ ಖಾತೆ ತೆರೆಯದೆ ಸ್ಟುವರ್ಟ್​ ಬ್ರಾಡ್​ಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು. ಚೇತೇಶ್ವರ ಪೂಜಾರ (5) ಮತ್ತು ಶಿಖರ್​ ಧವನ್​ (17) ಔಟಾದ ನಂತರ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹಾಗೂ ರಹಾನೆ ತಾಳ್ಮೆಯಾಟ ಆಡಿದರು. ಆರಂಭಿಕ ಕುಸಿತದಿಂದ ತಂಡವನ್ನು ಮೇಲುತ್ತುವ ಪ್ರಯತ್ನ ಮಾಡಿದ ವಿರಾಟ್​ ಕೊಹ್ಲಿ 58 ರನ್​ ಗಳಿಸಿ ಮೋಯಿನ್​ ಅಲಿ ಎಸೆತಕ್ಕೆ ಪೆವಿಲಿಯನ್​ನತ್ತ ಮರಳಿದರು. ಕೊಹ್ಲಿ ಔಟ್​ ಆಗುತ್ತಿದ್ದಂತೇ 51 ರನ್​ ಗಳಿಸಿದ್ದ ರಹಾನೆ ಕೂಡ ಮೋಯಿನ್​ ಅಲಿಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ಹಾರ್ದಿಕ್​ ಪಾಂಡ್ಯ ಮತ್ತು ಇಶಾಂತ್​ ಶರ್ಮಾ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರೆ ರಿಷಭ್​ ಪಂತ್​ 18 ಮತ್ತು ಮಹಮ್ಮದ್​ ಶಮಿ 8 ರನ್​ ಗಳಿಸಿ ಔಟಾದರು. ರವಿಚಂದ್ರನ್​ ಅಶ್ವಿನ್​ 25 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. ಜಸ್​ಪ್ರೀತ್​ ನಾಟ್​ಔಟ್​.

ಇಂಗ್ಲೆಂಡ್​ ಪರ ಬೌಲರ್​ಗಳಾದ ಜೇಮ್ಸ್​ ಆ್ಯಂಡರ್​ಸನ್​ 2, ಸ್ಟುವರ್ಟ್​ ಬ್ರಾಡ್​ 1, ಮೋಯಿನ್​ ಅಲಿ 4, ಬೆನ್​ ಸ್ಟೋಕ್ಸ್​ 2, ಸ್ಯಾಮ್​ ಕುರೇನ್​ 1 ವಿಕೆಟ್​ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು.

ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 260 ರನ್​ ಗಳಿಸಿ 8 ವಿಕೆಟ್ ಕಳೆದುಕೊಂಡಿತ್ತು. ಭಾನುವಾರ ಮತ್ತೆ ದಿನದಾಟ ಆರಂಭಿಸಿದ ಆಂಗ್ಲರಿಗೆ ಶಮಿ ಆರಂಭದಲ್ಲೇ ಶಾಕ್​ ನೀಡಿದರಯ. ಈ ಮೂಲಕ ಇಂಗ್ಲೆಂಡ್ 2ನೇ ಇನ್ನಿಂಗ್ಸ್​ನಲ್ಲಿ ಸ್ಟುವರ್ಟ್​ ಬ್ರಾಡ್(0) ಹಾಗೂ ಸ್ಯಾಮ್ ಕುರ್ರನ್(46) ವಿಕೆಟ್ ಕಳೆದುಕೊಳ್ಳುವ 271 ರನ್​​​ಗಳಿಗೆ ಆಲೌಟ್​ ಆಗಿ ಭಾರತಕ್ಕೆ 245 ರನ್​​ಗಳ ಗುರಿ ನೀಡಿತ್ತು. ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತು ಮಿಂಚಿದ್ದರೆ, ಇಶಾಂತ್ ಶರ್ಮಾ 2, ಅಶ್ವಿನ್ ಹಾಗೂ ಬುಮ್ರಾ ತಲಾ 1 ವಿಕೆಟ್ ಪಡೆದರು. (ಏಜೆನ್ಸೀಸ್​)