27 ವರ್ಷ ಬಳಿಕ ಫೈನಲ್​ಗೆ ಇಂಗ್ಲೆಂಡ್

ಬರ್ವಿುಂಗ್​ಹ್ಯಾಂ: ಕಳೆದ 27 ವರ್ಷಗಳಲ್ಲಿ ವಿಶ್ವಕಪ್ ಕಣದಲ್ಲಿ ಹಿನ್ನಡೆಗಳನ್ನೇ ಎದುರಿಸಿದ್ದ ಇಂಗ್ಲೆಂಡ್ ತಂಡ, 1992ರ ಬಳಿಕ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಹಂತಕ್ಕೆ ಲಗ್ಗೆ ಇಟ್ಟಿದೆ. ತವರಿನ ಆತಿಥ್ಯದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಲೇಬೇಕು ಎನ್ನುವ ಛಲದಲ್ಲಿದಲ್ಲಿರುವ ಇವೊಯಿನ್ ಮಾರ್ಗನ್ ಸಾರಥ್ಯದ ಇಂಗ್ಲೆಂಡ್ ತಂಡ ಸೆಮಿಫೈನಲ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 8 ವಿಕೆಟ್​ಗಳಿಂದ ಅಧಿಕಾರಯುತವಾಗಿ ಮಣಿಸಿ ಫೈನಲ್​ಗೇರಿದೆ. ಭಾನುವಾರ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಫೈನಲ್​ನಲ್ಲಿ ಈವರೆಗೂ ಟ್ರೋಫಿ ಗೆಲ್ಲದ ತಂಡಗಳಾದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ‘ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ ಟ್ರೋಫಿ’ಗೆ ಚೊಚ್ಚಲ ಬಾರಿ ಮುತ್ತಿಡಲು ಸೆಣಸಾಡಲಿವೆ. 1996ರಲ್ಲಿ ಕೊನೇ ಬಾರಿಗೆ (ಶ್ರೀಲಂಕಾ) ಹೊಸ ತಂಡವೊಂದು ವಿಶ್ವ ಚಾಂಪಿಯನ್ ಆಗಿತ್ತು.

ಎಜ್​ಬಾಸ್ಟನ್ ಮೈದಾನದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಆರನ್ ಫಿಂಚ್ ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಸಂಕಷ್ಟದ ನಡುವೆಯೂ ಮಾಜಿ ನಾಯಕ ಸ್ಟೀವನ್ ಸ್ಮಿತ್ (85 ರನ್, 119 ಎಸೆತ, 6 ಬೌಂಡರಿ) ಆಟದಿಂದ 49 ಓವರ್​ಗಳಲ್ಲಿ 223 ರನ್​ಗೆ ಆಲೌಟ್ ಆಯಿತು.

ಪ್ರತಿಯಾಗಿ ಜೇಸನ್ ರಾಯ್ (85ರನ್, 65 ಎಸೆತ, 9 ಬೌಂಡರಿ, 5 ಸಿಕ್ಸರ್) ಸ್ಪೋಟಕ ಇನಿಂಗ್ಸ್ ಬಲದಿಂದ ಇಂಗ್ಲೆಂಡ್ 32.1 ಓವರ್​ಗಳಲ್ಲಿ 8 ವಿಕೆಟ್​ಗೆ 226 ರನ್ ಪೇರಿಸಿ ನಾಲ್ಕನೇ ಬಾರಿಗೆ ವಿಶ್ವಕಪ್ ಫೈನಲ್​ಗೇರಿತು.

ಚೇಸಿಂಗ್ ನಡೆಸಿದ ಇಂಗ್ಲೆಂಡ್​ಗೆ ಪ್ರಯಾಸದ ಕ್ಷಣಗಳೇ ಇರಲಿಲ್ಲ. ವೀರೇಂದ್ರ ಸೆಹ್ವಾಗ್ ಶೈಲಿಯಲ್ಲಿ ಆರಂಭದಲ್ಲಿಯೇ ಆಸೀಸ್ ಬೌಲರ್​ಗಳ ವಿಶ್ವಾಸ ಕುಂದಿಸುವಂಥ ಇನಿಂಗ್ಸ್ ಆಡಿದ ಜೇಸನ್ ರಾಯ್, ಜಾನಿ ಬೇರ್​ಸ್ಟೋ (34) ಜತೆ ಮೊದಲ ವಿಕೆಟ್​ಗೆ 124 ರನ್ ಸೇರಿಸಿದರು. ಈ ಜೋಡಿ ಮೊದಲ ಪವರ್ ಪ್ಲೇ ಅಂತ್ಯಕ್ಕೆ 50 ರನ್ ಕೂಡಿಸಿತ್ತು. ನಂತರ ಬೇರ್​ಸ್ಟೋ ವಿಕೆಟ್ ಉರುಳಿಸುವ ಮೂಲಕ ಸ್ಟಾರ್ಕ್ ವಿಶ್ವಕಪ್ ದಾಖಲೆ ನಿರ್ವಿುಸಿದರು. ಶತಕದಿಂದ 15 ರನ್ ದೂರವಿದ್ದಾಗ ರಾಯ್, ಅಂಪೈರ್ ಹಾಸ್ಯಾಸ್ಪದ ತೀರ್ಪಿಗೆ ಹೊರನಡೆದರೆ, ನಾಯಕ ಮಾರ್ಗನ್ (45* ರನ್, 38 ಎಸೆತ, 8 ಬೌಂಡರಿ) ಹಾಗೂ ಟೆಸ್ಟ್ ನಾಯಕ ಜೋ ರೂಟ್ (49* ರನ್, 46 ಎಸೆತ, 8 ಬೌಂಡರಿ) ಇನ್ನೂ 109 ಎಸೆತಗಳು ಇರುವಂತೆ ಗೆಲುವಿನ ದಡ ಸೇರಿಸಿದರು.

03

ಸತತ 3ನೇ ವಿಶ್ವಕಪ್​ನಲ್ಲಿ ಆತಿಥೇಯ ತಂಡ ಫೈನಲ್​ಗೇರುವಲ್ಲಿ ಸಫಲವಾಗಿದೆ. 2011ರಲ್ಲಿ ಜಂಟಿ ಆತಿಥೇಯ ಭಾರತ-ಶ್ರೀಲಂಕಾ ಮತ್ತು 2015ರಲ್ಲೂ ಜಂಟಿ ಆತಿಥೇಯ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ತಂಡಗಳು ಫೈನಲ್​ಗೇರಿದ್ದವು. ಇಂಗ್ಲೆಂಡ್ 1979ರಲ್ಲೂ ಆತಿಥೇಯ ತಂಡವಾಗಿ ಫೈನಲ್​ಗೇರಿದ್ದರೆ, 1996ರಲ್ಲಿ ಶ್ರೀಲಂಕಾ ಜಂಟಿ ಆತಿಥೇಯ ತಂಡವಾಗಿ ಫೈನಲ್​ಗೇರಿತ್ತು.

ಆಸ್ಟ್ರೇಲಿಯಾಕ್ಕೆ ಸ್ಮಿತ್ ಆಸರೆ

ಆಸ್ಟ್ರೇಲಿಯಾದ ಸ್ಥಿತಿ ಮೊದಲ ಸೆಮಿಫೈನಲ್​ನಲ್ಲಿ ಆಡಿದ ಭಾರತಕ್ಕಿಂತ ಭಿನ್ನವಾಗಿರಲಿಲ್ಲ. ಡೇವಿಡ್ ವಾರ್ನರ್ ಹಾಗೂ ಆರನ್ ಫಿಂಚ್​ರನ್ನು ಒಂದಂಕಿ ಮೊತ್ತಕ್ಕೆ ಕಳೆದುಕೊಂಡಿತು. ನಾಯಕ ಫಿಂಚ್, ಆರ್ಚರ್ ಎಸೆತದಲ್ಲಿ ಎಲ್​ಬಿ ಆದರೆ, ವಾರ್ನರ್ ಮೊದಲ ಸ್ಲಿಪ್​ನಲ್ಲಿದ್ದ ಬೇರ್​ಸ್ಟೋಗೆ ಕ್ಯಾಚ್ ನೀಡಿದರು. ವಿಶ್ವಕಪ್ ಪದಾರ್ಪಣೆ ಮಾಡಿದ ಪೀಟರ್ ಹ್ಯಾಂಡ್ಸ್ ಕೊಂಬ್, ವೋಕ್ಸ್ ಎಸೆತಕ್ಕೆ ಬೌಲ್ಡಾದರು. 6.1 ಓವರ್​ಗಳಲ್ಲಿ 14 ರನ್​ಗೆ ಆಸೀಸ್ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಸ್ಟೀವನ್ ಸ್ಮಿತ್ ಹಾಗೂ ಅಲೆಕ್ಸ್ ಕ್ಯಾರಿ 4ನೇ ವಿಕೆಟ್​ಗೆ 103 ರನ್ ಜತೆಯಾಟವಾಡಿ ಚೇತರಿಕೆ ನೀಡಿದರು. ಆದರೆ ಆದಿಲ್ ರಶೀದ್, ಒಂದೇ ಓವರ್​ನಲ್ಲಿ ಕ್ಯಾರಿ ಹಾಗೂ ಸ್ಟೋಯಿನಿಸ್ ವಿಕೆಟ್ ಉರುಳಿಸಿದರೆ, ಸ್ಮಿತ್ ಜತೆಗಾರರಿಲ್ಲದೆ ಪರದಾಡಿದರು. ಗ್ಲೆನ್ ಮ್ಯಾಕ್ಸ್​ವೆಲ್, ಆರ್ಚರ್​ಗೆ ವಿಕೆಟ್ ನೀಡಿದರೆ, ಮಿಚೆಲ್ ಸ್ಟಾರ್ಕ್ (29) ಮಾಜಿ ನಾಯಕನಿಗೆ ಅಗತ್ಯ ಸಾಥ್ ನೀಡಿದರು.

27

ಬೇರ್​ಸ್ಟೋ ವಿಕೆಟ್ ಉರುಳಿಸುವ ಮೂಲಕ ಮಿಚೆಲ್ ಸ್ಟಾರ್ಕ್, ವಿಶ್ವಕಪ್​ನ ಒಂದೇ ಆವೃತ್ತಿಯಲ್ಲಿ ಗರಿಷ್ಠ ವಿಕೆಟ್ ಉರುಳಿಸಿದ ಬೌಲರ್ ಎನಿಸಿಕೊಂಡರು. 27 ವಿಕೆಟ್ ಉರುಳಿಸುವ ಮೂಲಕ ಸ್ಟಾರ್ಕ್, 2007ರ ಆವೃತ್ತಿಯಲ್ಲಿ 26 ವಿಕೆಟ್ ಉರುಳಿಸಿದ್ದ ದೇಶಬಾಂಧವ ಗ್ಲೆನ್ ಮೆಕ್​ಗ್ರಾಥ್​ರ ದಾಖಲೆಯನ್ನು ಹಿಂದೆ ಹಾಕಿದರು.

ಕ್ಯಾರಿಗೆ ಪೆಟ್ಟು

ಆಸೀಸ್ ಇನಿಂಗ್ಸ್​ನ 8ನೇ ಓವರ್​ನಲ್ಲಿ ಆರ್ಚರ್ ಎಸೆತದಲ್ಲಿ ಗಲ್ಲಕ್ಕೆ ಏಟು ತಿಂದ ಅಲೆಕ್ಸ್ ಕ್ಯಾರಿ ನಂತರ ಬ್ಯಾಂಡೇಜ್ ಕಟ್ಟಿಕೊಂಡು ಆಡಿದರು.

Leave a Reply

Your email address will not be published. Required fields are marked *