ಆನ್​ಲೈನ್​ನಲ್ಲಿ ಸಿಸಿ ನೀಡಲು ಸಾಧ್ಯವಿಲ್ಲವೇ?

ಸಂತೋಷ ವೈದ್ಯ ಹುಬ್ಬಳ್ಳಿ

ಹು-ಧಾ ಮಹಾನಗರ ಪಾಲಿಕೆಯಲ್ಲಿ ಕೆಲವು ತಿಂಗಳುಗಳ ವಿಳಂಬದ ಬಳಿಕ ಕಟ್ಟಡ ನಿರ್ಮಾಣ ಪರವಾನಗಿ ಪ್ರಮಾಣ ಪತ್ರ ನೀಡುವ ಆನ್​ಲೈನ್ ವ್ಯವಸ್ಥೆ ಜಾರಿಗೆ ಬರುತ್ತಿದ್ದಂತೆ ಮುಕ್ತಾಯ ಪ್ರಮಾಣ ಪತ್ರ (ಸಿಸಿ)ವನ್ನು ಆನ್​ಲೈನ್​ನಲ್ಲೇ ನೀಡಲು ಯಾಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ಎದುರಾಗಿದೆ.

ಇಂಥ ವೈರುಧ್ಯವೂ ಭ್ರಷ್ಟಾಚಾರದ ಒಂದು ಬಾಗಿಲನ್ನು ಮುಚ್ಚಿ ಇನ್ನೊಂದು ಬಾಗಿಲನ್ನು ತೆರೆದಿಟ್ಟುಕೊಂಡಂತೆ ಕಾಣುತ್ತಿದೆ. ಆನ್​ಲೈನ್ ವ್ಯವಸ್ಥೆ ಪಾರದರ್ಶಕ, ಜನಸ್ನೇಹಿ ಎಂಬ ಅಭಿಪ್ರಾಯವಿದೆ. ಹೀಗಿರುವಾಗ ಸಿಸಿ ನೀಡುವಲ್ಲೂ ಇದೇ ಪದ್ಧತಿ ಯಾಕಿಲ್ಲ ಎಂದು ಸಿವಿಲ್ ಇಂಜಿನಿಯರ್​ಗಳು ಪ್ರಶ್ನಿಸುತ್ತಿದ್ದಾರೆ.

ಆನ್​ಲೈನ್ ಮೂಲಕ ಕಟ್ಟಡ ನಿರ್ಮಾಣ ಪರವಾನಗಿ ಪ್ರಮಾಣ ಪತ್ರ ನೀಡುವ ನಿರ್ವಣ-2 ತಂತ್ರಾಂಶವನ್ನು ಪಾಲಿಕೆ 3 ತಿಂಗಳ ಹಿಂದೆಯೇ ಅಳವಡಿಸಿಕೊಂಡಿತ್ತು. ಆದರೆ, ತಾಂತ್ರಿಕ ಸಮಸ್ಯೆಯೋ ಅಥವಾ ನಗರ ಯೋಜನೆ ಶಾಖೆಯ ನಿರ್ಲಕ್ಷ್ಯೋ 2 ತಿಂಗಳು ಅದು ಕಾರ್ಯನಿರ್ವಹಿಸಲೇ ಇಲ್ಲ. ರಾಜ್ಯ ಸರ್ಕಾರದ ನಗರಾಭಿವವೃದ್ಧಿ ಇಲಾಖೆಯ ಮುನ್ಸಿಪಲ್ ರಿಫಾಮ್್ಸರ್ ಸೆಲ್ (ಎಂಆರ್​ಸಿ) ಈ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿತ್ತು. ಸಮಸ್ಯೆಗೆ ಎಂಆರ್​ಸಿಯೇ ಕಾರಣ ಎಂದು ಪಾಲಿಕೆ ಅಧಿಕಾರಿಗಳು ಬೊಟ್ಟು ಮಾಡಿದ್ದರು.

ಕಟ್ಟಡ ನಿರ್ಮಾಣ ಪರವಾನಗಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸುವಾಗ ನೀಡಿದ ನಕ್ಷೆಯಂತೆ ಕಟ್ಟಡ ನಿರ್ವಣವಾಗಿರಬೇಕು. ನಿಯಮಗಳಂತೆ ಸೆಟ್​ಬ್ಯಾಕ್ ಬಿಡಬೇಕು. ಎಫ್​ಎಆರ್ (ಫ್ಲೋರ್ ಎರಿಯಾ ರೇಶ್ಯೂ) ಉಲ್ಲಂಘಿಸಬಾರದು. ಇವನ್ನೆಲ್ಲ ಪರಿಶೀಲಿಸಿ ಸಿಸಿ ನೀಡಲಾಗುತ್ತದೆ. ಪಾಲಿಕೆಯ ಸಿಬ್ಬಂದಿ (ಜ್ಯೂನಿಯರ್ ಇಂಜಿನಿಯರ್) ಪರಿಶೀಲನೆ ನಡೆಸಬೇಕು. ಒಂದಿಷ್ಟು ನಿರ್ದಿಷ್ಟ ಉಲ್ಲಂಘನೆಗೆ ಕಟ್ಟಡ ಮಾಲೀಕರಿಗೆ ದಂಡ ವಿಧಿಸಿ ಕ್ರಮಬದ್ಧ ಗೊಳಿಸಲಾಗುತ್ತದೆ. ಈ ಹಂತವೇ ಭ್ರಷ್ಟಾಚಾರಕ್ಕೆ ಅವಕಾಶ ನೀಡುತ್ತದೆ. ಆನ್​ಲೈನ್​ನಲ್ಲಿ ಇದಕ್ಕೆ ಅವಕಾಶ ಇರುವುದಿಲ್ಲ. ಎಲ್ಲವೂ ಸರಿಯಾಗಿದ್ದಲ್ಲಿ ಮಾತ್ರ ತಂತ್ರಾಂಶದಲ್ಲಿ ಸ್ವೀಕೃತಿಯಾಗುತ್ತದೆ. ಇಲ್ಲದಿದ್ದಲ್ಲಿ ತಿರಸ್ಕೃತವಾಗುವುದು ಖಚಿತ.

ಆನ್​ಲೈನ್​ನಲ್ಲಿ ಸಿಸಿ ಕೊಡಬೇಕಾದರೆ, ಎಂಆರ್​ಸಿಯವರು ಅದರಂತೆ ತಂತ್ರಾಂಶವನ್ನು ರೂಪಿಸಬೇಕಾಗುತ್ತದೆ ಎಂದು ಪಾಲಿಕೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆನ್​ಲೈನ್​ನಲ್ಲಿ ಸಿಸಿ ನೀಡಬೇಕಾದರೂ ಪಾಲಿಕೆ ಸಿಬ್ಬಂದಿ (ಜ್ಯೂನಿಯರ್ ಇಂಜಿನಿಯರ್) ಸ್ಥಳ ಭೇಟಿ ಮಾಡಲೇಬೇಕು. ಇದರಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ. ಆದರೆ, ಸ್ಥಳ ಭೇಟಿ ಸಂದರ್ಭದಲ್ಲಿ ಕಂಡಿದ್ದನ್ನು ನಿಖರವಾಗಿ ದಾಖಲಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಮುಂದೊಂದು ದಿನ ಜಿಐ ಸರ್ವೆಯಲ್ಲಿ ಎಲ್ಲವೂ ಬಹಿರಂಗಕ್ಕೆ ಬರುವ ಅಪಾಯ ಇರುತ್ತದೆ. ವಿಚಿತ್ರವೆಂದರೆ, ಕಟ್ಟಡ ನಿರ್ಮಾಣ ಪರವಾನಗಿ ಪ್ರಮಾಣ ಪತ್ರ ನೀಡುವಲ್ಲೂ ಇಂಥದೊಂದು ವ್ಯವಸ್ಥೆಯನ್ನು ಬಿಬಿಎಂಪಿ ಅಳವಡಿಸಿಕೊಂಡಿಲ್ಲ.

ಹು-ಧಾ ಮಹಾನಗರ ಪಾಲಿಕೆಯ ನಗರ ಯೋಜನಾ ಶಾಖೆ ಜುಲೈ ತಿಂಗಳಲ್ಲಿ ಕಟ್ಟಡ ನಿರ್ಮಾಣ ಪರವಾನಗಿ ಹಾಗೂ ಮುಕ್ತಾಯ ಪ್ರಮಾಣ ಪತ್ರ ನೀಡಿಕೆಯಿಂದ 6,58,56,771 ರೂ. ಸಂಗ್ರಹಿಸಿ ದಾಖಲೆ ನಿರ್ವಿುಸಿತ್ತು. ಈ ಅವಧಿಯಲ್ಲಿ 104 ಕಟ್ಟಡಗಳಿಗೆ ಪರವಾನಿಗೆ ಹಾಗೂ 301 ಕಟ್ಟಡಗಳಿಗೆ ಮುಕ್ತಾಯ ಪ್ರಮಾಣ ಪತ್ರ ನೀಡಲಾಗಿತ್ತು. ಈ ದಾಖಲೆಯ ಸಾಧನೆ ಸಾಕಷ್ಟು ಶಂಕೆಗೆ ಕಾರಣವಾಗಿದೆ. ಆದರೆ, ಪಾಲಿಕೆ ಅಧಿಕಾರಿಗಳು ಹಾಗೂ ಸದಸ್ಯರು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ಆನ್​ಲೈನ್ ವ್ಯವಸ್ಥೆ ಬಂದ ಬಳಿಕ 2 ತಿಂಗಳು ಪ್ರಮಾಣಪತ್ರ ನೀಡಿಕೆ ಬಂದ್ ಆಗಿತ್ತು. ಇದೀಗ ಸರಿಪಡಿಸಲಾಗಿದ್ದರೂ ಕಾರ್ಯಾಚರಣೆ ತುಂಬಾ ನಿಧಾನವಾಗಿದೆ.

ನ್​ಲೈನ್ ಮೂಲಕ ಸಿಸಿ ನೀಡುವ ವ್ಯವಸ್ಥೆ ಜಾರಿಗೆ ಬಂದ್ರೆ ಒಳ್ಳೆಯದಾಗುತ್ತದೆ. ಜನರಿಗೆ ಉಪಯೋಗವಾಗುತ್ತದೆ. ಭ್ರಷ್ಟಾಚಾರ ಕಡಿಮೆ ಆಗುತ್ತದೆ.

| ಸುರೇಶ ಕಿರೇಸೂರ, ನಿರ್ದೇಶಕರು,
ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್, ಹುಬ್ಬಳ್ಳಿ

ನ್​ಲೈನ್​ನಲ್ಲಿ ಸಿಸಿ ಕೊಡುವಂತೆ ಮಾಡಬಹುದು. ಆದರೆ, ಮುನ್ಸಿಪಲ್ ರಿಫಾಮ್್ಸರ್ ಸೆಲ್ ಇದನ್ನು ಮಾಡಬೇಕಾಗುತ್ತದೆ. ತಂತ್ರಾಂಶವನ್ನು ಹಾಗೇ ರೂಪಿಸಬೇಕಾಗುತ್ತದೆ.

| ಬಿ.ವಿ. ಹಿರೇಮಠ,
ನಗರ ಯೋಜನಾ ಉಪ ನಿರ್ದೇಶಕ