ಕೋಚಿಂಗ್ ಸೆಂಟರ್​ಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ

ಆಗ್ರಾ: ಕೋಚಿಂಗ್‌ ಸೆಂಟರ್‌ಗೆಂದು ತೆರಳುತ್ತಿದ್ದ ವೇಳೆ ಬಂದ ಇಬ್ಬರು ದುಷ್ಕರ್ಮಿಗಳು ಬಿ.ಟೆಕ್‌ ವಿದ್ಯಾರ್ಥಿನಿಯನ್ನು ಯಮುನಾ ನದಿ ತೀರಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ.

ಮೊದಲ ವರ್ಷದ ಬಿ.ಟೆಕ್‌ ಓದುತ್ತಿದ್ದ ವಿದ್ಯಾರ್ಥಿನಿಯು ಮಂಗಳವಾರ ಸಂಜೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಆಕೆಯನ್ನು ಅಡ್ಡಗಟ್ಟಿ ಬಲವಂತವಾಗಿ ಎಳೆದೊಯ್ದಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯು ಪ್ರತಿಕ್ರಿಯಿಸಿ, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಾಗ ಈಗಾಗಲೇ ಅಲ್ಲಿಬ್ಬರು ಹುಡುಗರು ಇದ್ದರು. ಬಳಿಕ ನಾಲ್ವರು ಸೇರಿ ಸಾಮೂಹಿಕವಾಗಿ ಅತ್ಯಾಚರ ಎಸಗಿದ್ದಾರೆ. ಬಳಿಕ ಪಾದಚಾರಿಗಳ ಸಹಾಯದಿಂದ ಮನೆ ತಲುಪಿದ್ದಾಗಿ ತಿಳಿಸಿದ್ದಾಳೆ.

ಈ ಕುರಿತು ಸಂತ್ರಸ್ತೆಯ ಪಾಲಕರು ದೂರನ್ನು ದಾಖಲಿಸಿದ್ದು, ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ಎಸ್‌ಪಿ ಪ್ರಶಾಂತ್‌ ವರ್ಮಾ ತಿಳಿಸಿದ್ದಾರೆ.

ಸಂತ್ರಸ್ತೆಯ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಆಕೆಯನ್ನು ಎಸ್‌ಎನ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. (ಏಜೆನ್ಸೀಸ್)