ವಿರಾಟ್‌ ಕೊಹ್ಲಿ ಸೇರಿ 6 ವಿಕೆಟ್‌ ಪತನ, ಸೋಲಿನ ಸುಳಿಯಲ್ಲಿ ಭಾರತ

ಲಂಡನ್‌: ಪ್ರವಾಸಿ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ 60 ರನ್‌ಗಳಿಸುವಷ್ಟರಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಸೇರಿ 5 ವಿಕೆಟ್‌ ಕಳೆದುಕೊಂಡು ಭಾರತ ಸೋಲಿನ ಸುಳಿಯಲ್ಲಿ ಸಿಲುಕಿದೆ.

29 ಎಸೆತಗಳಲ್ಲಿ 17 ರನ್ ಗಳಿಸಿ ವಿರಾಟ್‌ ಕೊಹ್ಲಿ ಪೋಪೆಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಕೊಹ್ಲಿ ಔಟ್‌ ಆದ ಬೆನ್ನಲ್ಲೇ ದಿನೇಶ್ ಕಾರ್ತಿಕ್ ಬ್ರಾಡ್ ಎಸೆತದಲ್ಲಿ ಎಲ್​ಬಿಗೆ ಬಲಿಯಾಗಿ ಶೂನ್ಯಕ್ಕೆ ನಿರ್ಗಮಿಸಿದ್ದಾರೆ. ಒಟ್ಟಾರೆ ಟೀಂ ಇಂಡಿಯಾದ ಆರು ವಿಕೆಟ್‌ಗಳು ಪತನಗೊಂಡಿವೆ.

ಲಂಡನ್​​ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 107 ರನ್ ಗಳಿಸಿ ಆಲ್‌ಔಟ್‌ ಆಗಿತ್ತು. ಇದನ್ನು ಬೆನ್ನತ್ತಿದ ಇಂಗ್ಲೆಂಡ್‌ ಕೇವಲ 7 ವಿಕೆಟ್‌ಗಳಿಗೆ 396 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿತು.

ಕ್ರಿಸ್ ವೋಕ್ಸ್ ಹಾಗೂ ಸ್ಯಾಮ್ ಕುರ್ರನ್ ನಾಲ್ಕನೇ ದಿನವಾದ ಇಂದು ಬ್ಯಾಟಿಂಗ್ ಆರಂಭಿಸಿದರು. 3ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 357 ರನ್ ಕಲೆಹಾಕಿದ್ದ ಇಂಗ್ಲೆಂಡ್ ಇಂದು 1 ವಿಕೆಟ್ ಕಳೆದುಕೊಂಡು 39 ರನ್ ದಾಖಲಿಸಿ ಡಿಕ್ಲೇರ್ ಮಾಡಿಕೊಂಡಿತು. ಕ್ರಿಸ್ ವೋಕ್ಸ್ ಅಜೇಯ 137 ರನ್ ದಾಖಲಿಸಿ ಮಿಂಚಿನ ಆಟ ಪ್ರದರ್ಶಿಸಿದರು.

ಬಳಿಕ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ 15 ರನ್ ಆಗುವ ಹೊತ್ತಿಗೆ 2 ಪ್ರಮುಖ ವಿಕೆಟ್ ಕಳೆದುಕೊಂಡು ಮುರಳಿ ವಿಜಯ್ ಶೂನ್ಯಕ್ಕೆ ಔಟ್ ಆದರೆ ಕೆ. ಎಲ್. ರಾಹುಲ್ ಕೇವಲ 10 ರನ್​ಗೆ ನಿರ್ಗಮಿಸಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 289 ರನ್​ಗಳ ಭರ್ಜರಿ ಮುನ್ನಡೆ ಸಾಧಿಸಿತ್ತು. ಭಾರತ ಪರ ಮೊಹಮ್ಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ತಲಾ 3 ವಿಕೆಟ್ ಪಡೆದು ಮಿಂಚಿದ್ದರು. (ಏಜೆನ್ಸೀಸ್)