More

  ಮೌಢ್ಯ ನಿರ್ಬಂಧ ಕಾಯ್ದೆ ಜಾರಿ

  ಬೆಂಗಳೂರು: ಅಮಾನುಷ, ದುಷ್ಟ ಪದ್ಧತಿ, ವಾಮಾಚಾರ ಇತ್ಯಾದಿ ಮೂಢನಂಬಿಕೆಗಳನ್ನು ನಿರ್ಬಂಧಿಸುವ ಜತೆಗೆ ನಿಮೂಲನೆ ಮಾಡುವಂತಹ ಕಾಯ್ದೆ ರಾಜ್ಯದಲ್ಲಿ ಜಾರಿಗೆ ಬಂದಿದ್ದು, ಅನುಷ್ಠಾನಕ್ಕೆ ಬೇಕಾದ ನಿಯಮಾವಳಿಗಳ ಅಧಿಸೂಚನೆಯೂ ಪ್ರಕಟವಾಗಿದೆ. ‘ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿಮೂಲನೆ ಅಧಿನಿಯಮ, 2017’ ಕಾಯ್ದೆ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಅನುಮೋದನೆ ಪಡೆದಿದ್ದು, ರಾಜ್ಯಪಾಲರು ಅಂಕಿತ ಹಾಕಿದ್ದರು.

  ಕಾಯ್ದೆ, ನಿಯಮಗಳು ಹಾಗೂ ಪೊಲೀಸ್ ಇನ್ಸ್​ಪೆಕ್ಟರ್ ಶ್ರೇಣಿಯ ಅಧಿಕಾರಿಯೇ ಜಾಗೃತ ದಳ (ವಿಜಿಲೆನ್ಸ್ ಆಫೀಸರ್) ಕರ್ತವ್ಯ ನಿಭಾಯಿಸಬೇಕೆಂಬ ಮೂರು ಅಧಿಸೂಚನೆಗಳು ಪ್ರಕಟವಾಗಿದ್ದು, ಜ.4ರಿಂದಲೇ ಅನುಷ್ಠಾನಕ್ಕೆ ಬಂದಿವೆ. ಜಾಗೃತ ದಳ ಅಧಿಕಾರಿಯಾಗಿರುವ ಪೊಲೀಸ್ ಇನ್ಸ್​ಪೆಕ್ಟರ್ ತಮ್ಮ ಠಾಣೆ ವ್ಯಾಪ್ತಿಯೊಳಗೆ ಈ ಕಾಯ್ದೆ ಉಲ್ಲಂಘನೆ ಪತ್ತೆ ಹಚ್ಚಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ. ಅಲ್ಲದೆ ಜಾಗೃತ ದಳ ಅಧಿಕಾರಿ ವ್ಯಾಪ್ತಿಗೆ ಬರುವ ಠಾಣೆಯಲ್ಲಿ ನೊಂದ ವ್ಯಕ್ತಿ ಅಥವಾ ಆತನ ಕುಟುಂಬದವರಿಗೂ ದೂರು ದಾಖಲಿಸಲು ಅವಕಾಶವಿದೆ.

  ಕಾರ್ಯಾಗಾರ, ಜಾಗೃತಿ: ಕಾಯ್ದೆ ಉದ್ದೇಶ ಸಫಲಗೊಳಿಸುವ ಉದ್ದೇಶದಿಂದ ಮೊದಲ ಹಂತದಲ್ಲಿ ಪೊಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆ ಗಳ ಅಧಿಕಾರಿಗಳಿಗೆ ಕಾಯ್ದೆ ಹಾಗೂ ನಿಯಮಾವಳಿಗಳು, ಕರ್ತವ್ಯ ಹಾಗೂ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಲು ಕಾರ್ಯಾಗಾರ ಏರ್ಪಡಿಸಲಾಗುತ್ತಿದೆ. ಸಿದ್ದ ರಾಮಯ್ಯ ಆಡಳಿತಾವಧಿಯಲ್ಲಿ ಮೌಢ್ಯ ನಿರ್ಬಂಧ ಕಾಯ್ದೆ ಪ್ರಸ್ತಾಪವಾದಾಗ ಪರ- ವಿರೋಧ ಚರ್ಚೆ ಹಾಗೂ ವಿವಾದವೆದ್ದಿತ್ತು. ಪ್ರಸ್ತಾಪದಲ್ಲಿ ಇದ್ದುದಕ್ಕಿಂತ ಇಲ್ಲದ್ದು ಹೆಚ್ಚಿಗೆ ಸೇರಿಕೊಂಡು ಗೊಂದಲ ಮೂಡಿಸಿತ್ತು.

  ವಿಳಂಬಕ್ಕೆ ಕಾರಣ: ಎರಡು ವರ್ಷಗಳ ಹಿಂದೆಯೇ ಈ ಕಾಯ್ದೆ ಅನುಮೋದನೆ ಪಡೆದಿತ್ತು. ಈ ಕಾಯ್ದೆಗೆ ರಾಜ್ಯಪಾಲ ವಜೂಭಾಯಿ ವಾಲಾ ಅಂಕಿತ ಹಾಕಿದ್ದರು. ಆದರೆ, ಭವಿಷ್ಯತ್ತಿನಲ್ಲಿ ಕಾನೂನಾತ್ಮಕ ತೊಡಕುಂಟುಮಾಡಲಿದ್ದ ಅಂಶವೊಂದರ ಪರಿಷ್ಕರಣೆಯ ಕಾರಣಕ್ಕೆ ಕಾಯ್ದೆ ಜಾರಿಗೆ ತರಲು ವಿಳಂಬವಾಯಿತು ಎಂದು ಮೂಲಗಳು ತಿಳಿಸಿವೆ.

  ದುಷ್ಟ- ಅಮಾನವೀಯ ಪದ್ಧತಿಗಳ ಬಗ್ಗೆ ವಿವರವುಳ್ಳ 16 ಅಂಶಗಳನ್ನು ಮೂಢನಂಬಿಕೆಗಳೆಂದು ಪರಿಗಣಿಸಲಾಗಿದೆ. ಮಾನವನಿಗೆ ದೈಹಿಕ ಹಾನಿಯುಂಟು ಮಾಡದ ಧಾರ್ವಿುಕ ಆಚರಣೆಗಳು, ಯಾತ್ರೆ, ಪರಿಕ್ರಮ, ಪ್ರವಚನ, ಪ್ರಾಚೀನ ಮತ್ತು ಪಾರಂಪರಿಕ ಕಲೆಗಳು ಸಹಿತ ಎಂಟು ಅಂಶಗಳನ್ನು ಪಟ್ಟಿ ಮಾಡಿ ಈ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ.

  ಯಾವೆಲ್ಲ ಚಟುವಟಿಕೆಗಳು ಅಪರಾಧ

  ಬಾನಾಮತಿ, ಮಾಟಮಂತ್ರ, ವಾಮಾಚಾರ, ಗುಪ್ತ ಅಥವಾ ಬಚ್ಚಿಟ್ಟ ನಿಧಿ ಹುಡುಕಲು ಅಮಾನವೀಯ ದುಷ್ಟ ಕೃತ್ಯ, ವ್ಯಕ್ತಿಯ ಮೇಲೆ ಹಲ್ಲೆ

  ಸಾರ್ವಜನಿಕ ಅಥವಾ ಧಾರ್ವಿುಕ ಸ್ಥಳಗಳಲ್ಲಿ ಮಾನವನ ಘನತೆಗೆ ಕುಂದುಂಟು ಮಾಡುವ ಎಂಜಲು ಎಲೆಗಳ ಮೇಲೆ ಉರುಳುಸೇವೆ

  ಬೆತ್ತಲೆ ಮೆರವಣಿಗೆ ಅಥವಾ ಆತನ ದೈನಂದಿನ ಚಟುವಟಿಕೆಗಳ ಮೇಲೆ ನಿಷೇಧ. ಅಮಾನವೀಯ ಕೃತ್ಯಕ್ಕೆ ಪ್ರಚೋದನೆ, ಸಲಹೆ ಇಲ್ಲವೇ ಪ್ರೋತ್ಸಾಹಿಸುವುದು

  ಋತುಮತಿ ಅಥವಾ ಬಾಣಂತಿಯನ್ನು ಒಂಟಿಯಾಗಿ ಊರ ಹೊರಗಿಡುವುದು, ಮಹಿಳೆಯರ ಬೆತ್ತಲೆಪೂಜೆ, ಮೆರವಣಿಗೆಯಂತಹ ಅಮಾನವೀಯ ಪದ್ಧತಿದೇಹದಲ್ಲಿ ಅತೀಂದ್ರಿಯ ಶಕ್ತಿ ಆವಾಹನೆಯಾಗಿದೆ ಎಂದು ಸಾರಿ ಪ್ರಭಾವ ಬೀರುವುದು, ಅಂತಹ ವ್ಯಕ್ತಿಯ ಸಲಹೆ ಪಾಲಿಸದಿದ್ದಲ್ಲಿ ದುಷ್ಪರಿಣಾಮ ಗಳಾಗುತ್ತವೆ ಎಂದು ಭಯ-ಭೀತಿ ಹುಟ್ಟಿಸುವುದು ಹಾಗೂ ಮೋಸ

  ದೆವ್ವ ಓಡಿಸುವ ನೆಪದಲ್ಲಿ ವ್ಯಕ್ತಿಗೆ ಪಾದರಕ್ಷೆಯನ್ನು ಅದ್ದಿದ ನೀರು ಕುಡಿಸುವುದು, ಹಗ್ಗ ಅಥವಾ ಸರಪಳಿ ಕಟ್ಟುವುದು, ಕೋಲು/ಚಾಟಿಯಿಂದ ಹೊಡೆಯುವುದು. ಮೆಣಸಿನಕಾಯಿ ಹೊಗೆ ಕೊಡುವುದು, ದೇಹಕ್ಕೆ ಬರೆ ಇತ್ಯಾದಿ ಅಮಾನವೀಯ ಕೃತ್ಯಗಳು.

  ನಿರ್ದಿಷ್ಟ ವ್ಯಕ್ತಿ ಸೈತಾನ ಅಥವಾ ಸೈತಾನನ ಅವತಾರವೆಂದು ಘೋಷಿಸುವುದು. ಮಾಟ, ಮಂತ್ರ, ವಾಮಾಚಾರ ಮಾಡಿಸುತ್ತಾನೆಂದು ವ್ಯಕ್ತಿಯೊಬ್ಬನ ಮೇಲೆ ಆರೋಪ ಹೊರಿಸಿ ಆತನ ಜೀವನ ತ್ರಾಸದಾಯಕಗೊಳಿಸುವುದು.

  ದೆವ್ವ, ಕ್ಷುದ್ರ ಶಕ್ತಿಯಿದೆ ಎಂಬ ಭಾವನೆ ಸೃಷ್ಟಿಸಿ ಒಬ್ಬ ವ್ಯಕ್ತಿ ವೈದ್ಯಕೀಯ ಚಿಕಿತ್ಸೆ ಪಡೆಯುವುದನ್ನು ನಿರ್ಬಂಧಿಸುವುದು. ದುಷ್ಟ, ಅಘೋರಿ, ಅಮಾನವೀಯ ಚಿಕಿತ್ಸೆಗೆ ಪ್ರಚೋದನೆ. ವ್ಯಕ್ತಿಯ ಸಾವು ಇಲ್ಲವೇ ದೈಹಿಕ, ಆರ್ಥಿಕ ನಷ್ಟವನ್ನು ಉಂಟು ಮಾಡುವ ಭಯ ಹುಟ್ಟಿಸುವದು.

  ಬೆರಳುಗಳ ಮೂಲಕ ಶಸ್ತ್ರಚಿಕಿತ್ಸೆ ಹಾಗೂ ಮಹಿಳೆ ಗರ್ಭದಲ್ಲಿನ ಭ್ರೂಣದ ಲಿಂಗ ಬದಲಾಯಿಸಲಾಗುವುದು ಎಂದು ಹೇಳಿಕೊಳ್ಳುವುದು.

  ವಿಶೇಷ ಅಲೌಕಿಕ ಶಕ್ತಿಯಿದೆ, ಪವಿತ್ರಾತ್ಮದ ಅವತಾರ ಅಥವಾ ಆತನ ಹಿಂದಿನ ಜನ್ಮದಲ್ಲಿನ ಪತ್ನಿ, ಪತಿ ಇಲ್ಲವೇ ಅನೈತಿಕ ಸಂಬಂಧವಿದ್ದ ಪ್ರೇಮಿಗಳಾಗಿದ್ದೆವೆಂಬ ಭಾವನೆ ಸೃಷ್ಟಿಸಿ ಅಂತಹ ವ್ಯಕ್ತಿ ಜತೆಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದು.

  ದೇಹದೊಳಗೆ ತೂರಿಸುವುದು (ಸಿಡಿ), ದೇಹಕ್ಕೆ ಚುಚ್ಚಿಸಿಕೊಂಡ ಕೊಕ್ಕೆ ಮೂಲಕ ತೇರು ಎಳೆಯುವುದು, ಸ್ವಯಂಕೃತವಾಗಿ ಮೈಮೇಲೆ ಗಾಯ ಮಾಡಿಕೊಳ್ಳುವ ಆಚರಣೆ.

  ಮಕ್ಕಳಿಗೆ ಚಿಕಿತ್ಸೆ ನೀಡುವ ಹೆಸರಿನಲ್ಲಿ ಮುಳ್ಳುಗಳ ಮೇಲೆ ಇಲ್ಲವೇ ಎತ್ತರದ ಸ್ಥಳದಿಂದ ಎಸೆಯುವುದು.

  ಜಾತ್ರೆ, ಧಾರ್ವಿುಕ ಹಬ್ಬಗಳಲ್ಲಿ ದೈಹಿಕವಾಗಿ ಗಾಯ, ವ್ಯಕ್ತಿಯೊಬ್ಬರಿಗೆ ಕೆಂಡ ಹಾಯುವಂತೆ ಬಲವಂತ ಮಾಡುವುದು.

  ನಾಲಿಗೆಯೂ ಸೇರಿದಂತೆ ಒಂದು ದವಡೆಯಿಂದ ಇನ್ನೊಂದು ದವಡೆಗೆ ಕಬ್ಬಿಣದ ಸಲಾಕೆ ತೂರಿಸುವ ಪದ್ಧತಿ.

  ಯಾವುದಕ್ಕೆಲ್ಲ ವಿನಾಯಿತಿ?

  ಮನುಷ್ಯನಿಗೆ ಹಾನಿಯುಂಟು ಮಾಡದ ದೇವಾಲಯ, ದರ್ಗಾ, ಗುರುದ್ವಾರ, ಪಗೋಡ, ಚರ್ಚ್ ಹಾಗೂ ಅಂತಹ ಇತರ ಧಾರ್ವಿುಕ ಸ್ಥಳಗಳಲ್ಲಿ ಪ್ರಾರ್ಥನೆ, ಉಪಾಸನೆ, ಧಾರ್ವಿುಕ ಆಚರಣೆ

  ಧಾರ್ವಿುಕ, ಆಧ್ಯಾತ್ಮಿಕ ಸ್ಥಳಗಳಲ್ಲಿ ಪ್ರದಕ್ಷಿಣೆ, ಯಾತ್ರೆ, ಪರಿಕ್ರಮದಂಥ ಪೂಜಾ ಪದ್ಧತಿಗಳು ಹರಿಕಥೆ, ಪ್ರವಚನ, ಭಜನೆ, ಪ್ರಾಚೀನ ಮತ್ತು ಪಾರಂಪರಿಕ ಕಲೆಗಳು, ಪದ್ಧತಿ ಪ್ರಸಾರ ಹಾಗೂ ಪರಿಚಲನೆ.

  ಧಾರ್ವಿುಕ ಆಚರಣೆಯಂತೆ ಮಕ್ಕಳ ಮೂಗು, ಕಿವಿ ಚುಚ್ಚುವುದು, ಮುದ್ರಾಧಾರಣೆ, ಜೈನ ಸಂಪ್ರದಾಯದ ಪ್ರಕಾರ ಕೇಶಲೋಚನದಂತಹ ಆಚರಣೆ

  ವಾಸ್ತು ಶಾಸ್ತ್ರ ಕುರಿತ ಸಲಹೆ, ಜ್ಯೋತಿಷ್ಯ ಮತ್ತು ಇತರ ಜ್ಯೋತಿಷಿಗಳಿಂದ ಸಲಹೆ

  ದೈವಾಧೀನ ಸಂತರ ಪವಾಡದ ಬಗ್ಗೆ ಭಾಷಣ, ಪ್ರಸಾರ ಮತ್ತು ಪ್ರಚಾರ. ದೈಹಿಕವಾಗಿ ಹಾನಿಯನ್ನು ಉಂಟು ಮಾಡದ ಧಾರ್ವಿುಕ ಬೋಧಕರ ಪವಾಡಗಳ ಬಗ್ಗೆ ಸಾಹಿತ್ಯ ಪ್ರಸಾರ, ಪ್ರಚಾರ ಹಾಗೂ ಹಂಚುವುದು

  ಸರ್ಕಾರ ಅಧಿಸೂಚನೆ ಹೊರಡಿಸಬಹುದಾದ ಯಾವುದೇ ಸಾಂಪ್ರದಾಯಿಕ ಧಾರ್ವಿುಕ ವಿಧಿ ಮತ್ತು ವಿಧಾನಗಳು

  ಶಿಕ್ಷೆಯ ಪ್ರಮಾಣ ಹಾಗೂ ದಂಡ

  ಈ ಕಾಯ್ದೆಯಡಿ ಅಪರಾಧಿಗಳಿಗೆ ಒಂದು ವರ್ಷಕ್ಕೆ ಕಡಿಮೆಯಿಲ್ಲದ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆ ಹಾಗೂ 5,000 ರೂ.ಗೆ ಕಡಿಮೆ ಯಿಲ್ಲದಂತೆ 50,000 ರೂ.ವರೆಗೆ ದಂಡ ವಿಧಿಸಬಹುದು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts