ಹೊಸದುರ್ಗ: ರೈತರ ಕೃಷಿ ಪಂಪ್ಸೆಟ್ಗಳಿಗೆ ಹಗಲು ವೇಳೆಯಲ್ಲಿ ನಿರಂತರ 7 ಗಂಟೆಗಳ ಕಾಲ ವಿದ್ಯುತ್ ಒದಗಿಸುವ ಉದ್ದೇಶದಿಂದ ಕುಸುಮ್ ಸಿ ಯೋಜನೆ ಅಡಿ ಸೋಲಾರ್ ಮೂಲಕ ರಾಜ್ಯದಲ್ಲಿ 3 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ತಾಲೂಕಿನ ನೀರಗುಂದ ಗ್ರಾಮದ ಬಳಿ ನಿರ್ವಣವಾಗಿರುವ ಸೋಲಾರ್ ಪಾರ್ಕ್ಗೆ ಸೋಮವಾರ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ನಾನು ಕೇವಲ ಯೋಜನೆಯ ಪರಿಶೀಲನೆ ನಡೆಸಲು ಬಂದಿದ್ದೇನೆ ಎಂದರು.
ಒಂದು ತಿಂಗಳೊಳಗೆ ಮುಖ್ಯಮಂತ್ರಿಗಳು ಕಾಮಗಾರಿ ಪೂರ್ಣಗೊಂಡಿರುವ 500 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಘಟಕಗಳಿಗೆ ಚಾಲನೆ ನೀಡಲಿದ್ದಾರೆ. ಸ್ಥಳೀಯ ಶಾಸಕ ಬಿ.ಜಿ.ಗೋವಿಂದಪ್ಪ ಅವರ ಆಸಕ್ತಿಯಿಂದ ತಾಲೂಕಿನಲ್ಲಿ 8.5 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಸೋಲಾರ್ ಘಟಕಗಳು ಹೊಸದುರ್ಗ ತಾಲೂಕಿನಲ್ಲಿ ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದರು.
ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 4 ಎಕರೆ ಜಾಗದ ಅವಶ್ಯಕತೆಯಿದೆ. ಕೆಆರ್ಸಿ ಪ್ರತಿ ಯೂನಿಟ್ ವಿದ್ಯುತ್ ಖರೀದಿಗೆ 3.17 ಪೈಸೆ ನಿಗದಿಪಡಿಸಿದೆ. ಅದಕ್ಕಿಂತ ಕಡಿಮೆ ಬೆಲೆಗೆ ಟೆಂಡರ್ ನಮೂದಿಸಿದ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ.
ವಿದ್ಯುತ್ ಉಪ ಕೇಂದ್ರಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವುಗಳ ಸಮೀಪದಲ್ಲಿ ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸಿ ಅಲ್ಲಿಯ ಕೇಂದ್ರಗಳಿಗೆ ಒದಗಿಸುವ ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ 1200 ಮೆಗಾವ್ಯಾಟ್ ಉತ್ಪಾದನೆಗೆ ಟೆಂಡರ್ ನೀಡಲಾಗಿದೆ ಎಂದರು.
ಪ್ರಸ್ತುತ ಕುಸುಮ್ ಸಿ ಯೋಜನೆಯಿಂದ ಸರ್ಕಾರಕ್ಕೆ ಹಣಕಾಸಿನ ಹೊರೆ ಕಡಿಮೆಯಾಗಲಿದೆ. ರೈತರಿಗೂ ಹಗಲು ವೇಳೆಯಲ್ಲಿ ವಿದ್ಯುತ್ ದೊರೆಯಲಿದೆ. ಎಸ್ಕಾಂ, ಬೆಸ್ಕಾಂ ಸೇರಿದಂತೆ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಜಮೀನು ಉಚಿತವಾಗಿ ಸಿಗಲಿದೆ. ಖಾಸಗಿ ಕಂಪನಿಗಳು ಪ್ರತಿ ಎಕರೆಗೆ ವರ್ಷಕ್ಕೆ 25 ಸಾವಿರ ರೂ. ಶುಲ್ಕ ಪಾವತಿಸಬೇಕು ಎಂದು ಹೇಳಿದರು.
ಸದರಿ ಹಣವು ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಆಗುತ್ತದೆ. ಸ್ಥಳಿಯ ಗ್ರಾಪಂ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಳಕೆಯಾಗುವುದರಿಂದ ಗ್ರಾಪಂಗೆ ಆರ್ಥಿಕ ಸಂಪನ್ಮೂಲ ದೊರೆಯಲಿದೆ ಎಂದರು.
ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಸಿದ 4.5 ಲಕ್ಷ ರೂ. ರೈತರ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. 2 ಲಕ್ಷ ರೂ. ರೈತರಿಗೆ ವಿದ್ಯುತ್ ಒದಗಿಸಲಾಗಿದೆ. ಉಳಿದವರಿಗೂ ಒದಗಿಸಲು ಸರ್ಕಾರ ಬದ್ಧವಾಗಿದೆ. ಪವರ್ ಗ್ರೀಡ್ನಿಂದ 500 ಮೀ. ಒಳಗಿರುವ ಪಂಪ್ಸೆಟ್ಗಳಿಗೆ ಉಚಿತವಾಗಿ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಉಳಿದವರು ಕುಸುಮ್ ಬಿ. ಯೋಜನೆ ಅಡಿಯಲ್ಲಿ ಸೋಲಾರ್ ವಿದ್ಯುತ್ ಸಂಪರ್ಕ ಪಡೆಯಬಹುದು. ಘಟಕ ವೆಚ್ಚದ ಶೇ.80 ರಷ್ಟು ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸಲಿವೆ ಎಂದರು.
ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ತಾಲೂಕಿನ ರೈತರ ಅನುಕೂಲಕ್ಕಾಗಿ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಬಹು ಗ್ರಾಮಗಳ ಕುಡಿಯುವ ನೀರು ಸೇರಿದಂತೆ ತಾಲೂಕಿನ ವಿದ್ಯುತ್ ಬೇಡಿಕೆಗೆ ಪೂರಕವಾಗಿ ನಾಲ್ಕು ವಿದ್ಯುತ್ ಉಪ ಕೇಂದ್ರಗಳನ್ನು ಮಂಜೂರು ಮಾಡಬೇಕು. ಅದಕ್ಕೆ ಅಗತ್ಯವಾಗಿರುವ ಭೂಮಿಯನ್ನು ಮಂಜೂರು ಮಾಡಿಸಲಾಗಿದೆ ಎಂದು ಮನವಿ ಮಾಡಿದರು.
ಶಾಸಕ ಟಿ.ಬಿ.ಜಯಚಂದ್ರ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ಎಂ.ಡಿ.ಪಂಕಜ್ ಪಾಂಡೆ, ಬೆಸ್ಕಾಂ ಎಂ.ಡಿ.ಮಹಾಂತೇಶ್, ಜಿಲ್ಲಾಧಿಕಾರಿ ವೆಂಕಟೇಶ್, ತಹಸೀಲ್ದಾರ್ ತಿರುಪತಿ ವಿ.ಪಾಟೀಲ್ ಇದ್ದರು.