ಎಂಡೋ ಸಂತ್ರಸ್ತರ ಮಾಸಾಶನ ಶೇ.33 ಹೆಚ್ಚಳ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕರಾವಳಿ ಜಿಲ್ಲೆಯಲ್ಲಿ ಎಂಡೋ ಪೀಡಿತರು ಅಧಿಕ ಸಂಖ್ಯೆಯಲ್ಲಿದ್ದು, ಕೇರಳ ಸರ್ಕಾರದ ಮಾದರಿಯಲ್ಲಿ ಪರಿಹಾರ ಒದಗಿಸುವ ಬೇಡಿಕೆ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ನೀಡುವ ಮಾಸಾಶನದಲ್ಲಿ ಶೇ.33ರಷ್ಟು ಹೆಚ್ಚಿಸಲಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಎಸ್.ಪಾಟೀಲ ತಿಳಿಸಿದರು.
ದ.ಕ. ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಪುರಭವನದಲ್ಲಿ ಮಂಗಳವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ದಿವ್ಯಾಂಗ ಚೇತನರಿಗೆ ಮತ್ತು ಮಕ್ಕಳ ಪಾಲನಾ ಸಂಸ್ಥೆಗಳಿಗೆ ಎಂಆರ್‌ಪಿಎಲ್ ವತಿಯಿಂದ 1.85 ಕೋಟಿ ರೂ. ಮೌಲ್ಯದ ಸಾಧನ-ಸಲಕರಣೆ ವಿತರಿಸಿ ಅವರು ಮಾತನಾಡಿದರು.
ಎಂಡೋ ಸಂತ್ರಸ್ತರ ಅಂಗವಿಕಲತೆಗೆ ಅನುಗುಣವಾಗಿ 1,500 ರೂ. ಹಾಗೂ 3 ಸಾವಿರ ರೂ. ಮಾಸಾಶನ ನೀಡಲಾಗುತ್ತಿದೆ. ಈಗ ಶೇ.33 ಏರಿಕೆ ಮಾಡಿದ್ದರಿಂದ ಕ್ರಮವಾಗಿ 2 ಸಾವಿರ ಹಾಗೂ 4 ಸಾವಿರ ರೂ. ದೊರೆಯಲಿದೆ. ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನಿ ಮೋದಿಯವರ ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ಕರ್ನಾಟಕ ಯೋಜನೆಯನ್ನು ರಾಜ್ಯ ಸರ್ಕಾರ ವಿಲೀನ ಮಾಡುವ ಮೂಲಕ ಉತ್ತಮ ಕೆಲಸ ಮಾಡಿದೆ ಎಂದರು.
ಎಂಆರ್‌ಪಿಎಲ್ ಎಚ್‌ಆರ್ ವಿಭಾಗ ಗ್ರ್ೂ ಮ್ಯಾನೇಜರ್ ಬಿಎಚ್‌ವಿ ಪ್ರಸಾದ್, ೈನಾನ್ಸ್ ವಿಭಾಗದ ಗ್ರ್ೂ ಮ್ಯಾನೇಜರ್ ಸುಬ್ರತಾ ಬಂಡೋಪಾಧ್ಯಾಯ ಅವರನ್ನು ಸನ್ಮಾನಿಸಲಾಯಿತು. ಶಾಸಕ ಡಾ.ವೈ.ಭರತ್ ಶೆಟ್ಟಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿ.ಪಂ. ಸಿಇಒ ಡಾ.ಎಂ.ಆರ್.ರವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ, ಹರೀಶ್ ಬಾಳಿಗ, ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ, ಲೇಡಿಗೋಷನ್ ಆಸ್ಪತ್ರೆ ಅಧೀಕ್ಷಕಿ ಡಾ.ಸವಿತಾ, ವೆನ್ಲಾಕ್ ಹಾಗೂ ಲೇಡಿಗೋಷನ್ ಆಸ್ಪತ್ರೆ ಜಂಟಿ ನಿರ್ದೇಶಕಿ ಡಾ.ದಮಯಂತಿ ಕೃಷ್ಣಮೋಹನ್ ಉಪಸ್ಥಿತರಿದ್ದರು.
ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ರತ್ನಾಕರ್ ಸ್ವಾಗತಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಪ್ರಸ್ತಾವನೆಗೈದರು. ನವೀನ್‌ಚಂದ್ರ ವಂದಿಸಿದರು. ಜಯರಾಮ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

1.20 ಕೋಟಿ ಕುಟುಂಬಗಳಿಗೆ ಆರೋಗ್ಯ ಸೇವೆ:  ಕೇಂದ್ರ ಸರ್ಕಾರದ ಆಯುಷ್ಮಾನ್ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆಗಳನ್ನು ಸೇರಿಸಿ ರಾಜ್ಯದ 1.20 ಕೋಟಿ ಬಿಪಿಎಲ್ ಕುಟುಂಬಗಳಿಗೆ 5 ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೊಳಿಸಲಾಗುತ್ತಿದೆ. ಆರಂಭದಲ್ಲಿ ಆಯುಷ್ಮಾನ್ ಯೋಜನೆಯಡಿ 62 ಲಕ್ಷ ಕುಟುಂಬಗಳನ್ನು ಗುರುತಿಸಲಾಗಿತ್ತು. ಉಳಿದ ಕುಟುಂಬಗಳನ್ನು ರಾಜ್ಯದ ಆರೋಗ್ಯ ಕರ್ನಾಟಕ ಯೋಜನೆಯಡಿ ಒಳಗೊಳಿಸಲಾಗಿದೆ. ಯೋಜನೆಯಡಿ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಎಪಿಎಲ್ ಕುಟುಂಬದವರಿಗೂ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಅವರ ಚಿಕಿತ್ಸಾ ವೆಚ್ಚದ ಶೇ.30ರಷ್ಟನ್ನು ಸರ್ಕಾರ ಭರಿಸಲು ತೀರ್ಮಾನ ಕೈಗೊಂಡಿದೆ. ಈ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ರಾಜ್ಯ ಮಾದರಿ ಹೆಜ್ಜೆಗಳನ್ನಿರಿಸಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

1093 ಮಂದಿಗೆ ಸಲಕರಣೆ ವಿತರಣೆ:  ಎಂಆರ್‌ಪಿಎಲ್‌ನ ಪೂರ್ಣ ನೆರವಿನೊಂದಿಗೆ ಜಿಲ್ಲಾ ಆರೋಗ್ಯ ಇಲಾಖೆಯ ಮೂಲಕ 1 ಕೋಟಿ ರೂ. ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ 85 ಲಕ್ಷ ರೂ. ಸೇರಿದಂತೆ ಒಟ್ಟು 1.85 ಕೋಟಿ ರೂ. ಮೊತ್ತದಲ್ಲಿ ತ್ರಿಚಕ್ರ ವಾಹನ, ವೀಲ್ ಚಯರ್, ಕೃತಕ ಕಾಲು, ಕೈ ಸೇರಿದಂತೆ ವಿವಿಧ ಸಾಧನ ಸಲಕರಣೆಗಳನ್ನು 1093 ದಿವ್ಯಾಂಗ ಚೇತನರಿಗೆ ಹಾಗೂ 71 ಮಕ್ಕಳ ಪಾಲನಾ ಸಂಸ್ಥೆಗಳಿಗೆ ಟಿವಿ, ್ಯಾನ್, ವಾಷಿಂಗ್ ಮೆಷಿನ್, ಪುಸ್ತಕಗಳು, ಡೆಸ್ಕ್, ಬೆಂಚ್ ಸೇರಿದಂತೆ ಇತರ ವಸ್ತುಗಳನ್ನು ಹಸ್ತಾಂತರಿಸಲಾಯಿತು.

 

2014-15ರ ಬಳಿಕ ರಾಜ್ಯದಲ್ಲಿ ವೈದ್ಯರ ನೇಮಕಾತಿಯಾಗದೆ ಸಮಸ್ಯೆ ತಲೆದೋರಿತ್ತು. ಈಗ 180 ತಜ್ಞ ವೈದ್ಯರು ಹಾಗೂ 240 ವೈದ್ಯರನ್ನು ನೇರ ನೇಮಕಾತಿಗೊಳಿಸಿ ಆದೇಶಿಸಲಾಗಿದೆ. 1618 ದಾದಿಯರ ನೇಮಕಾತಿಯೂ ನಡೆದಿದೆ. ಈ ಮೂಲಕ ಆರೋಗ್ಯ ಕ್ಷೇತ್ರವನ್ನು ಸದೃಢಗೊಳಿಸಲಾಗುತ್ತಿದೆ.
– ಶಿವಾನಂದ ಪಾಟೀಲ, ಆರೋಗ್ಯ ಸಚಿವ