ಆಳ್ವಾಸ್ ವಿರಾಸತ್‌ಗೆ ವರ್ಣಮಯ ತೆರೆ

< ಮಹಾದೇವನ್ ತ್ರಯರಿಂದ ಗಾನ ರಸಧಾರೆ>

ಮೂಡುಬಿದಿರೆ: ಆಳ್ವಾಸ್ ವಿರಾಸತ್ ಬೆಳ್ಳಿಹಬ್ಬ ಸಂಭ್ರಮ ಭಾನುವಾರ ವರ್ಣಮಯ ತೆರೆಕಂಡಿತು. ಕೊನೆಯ ದಿನವಾದ ಭಾನುವಾರ ಖ್ಯಾತ ಹಿನ್ನೆಲೆ ಗಾಯಕ ಶಂಕರ್ ಮಹಾದೇವನ್, ಅವರ ಪುತ್ರರಾದ ಸಿದ್ಧಾರ್ಥ್ ಮಹಾದೇವನ್, ಶಿವ ಮಹಾದೇವನ್ ಸುಮಾರು ಎರಡು ಗಂಟೆಗಳ ಕಾಲ ನಡೆಸಿಕೊಟ್ಟ ‘ಚಿತ್ರ ರಸಸಂಜೆ’ ಪ್ರೇಕ್ಷಕರ ಮನಸೊರೆಗೊಂಡಿತು.

ಕೈ ಮುಗಿದು ಏರು ಕನ್ನಡದ ತೇರು ಕನ್ನಡ ಹಾಡು ಸಹಿತ ಶಂಕರ್ ಮಹಾದೇವನ್, ಏಕದಂತಾಯ ವಕ್ರತುಂಡಾಯ, ದಿಲ್ ಚಾಹತಾ ಹೇ, ಮೈನೆ ಜಿಸೇ ಅಭಿ ಅಭಿ ದೇಕಾ ಹೇ, ತೇರೇ ರಂಗ್ ರಂಗ್, ಇಟ್ಸ್ ಟೈಮ್ ಟು ಡಿಸ್ಕೊ, ಹರ್ ಗಡಿ, ಸಲಾಮೇ ಇಷ್ಕ್, ಮೇರಿ ಮಾ ಸಹಿತ ತಾವು ಧ್ವನಿ ನೀಡಿದ ಸಿನಿಮಾದ ಹಾಡು ಹಾಡಿದರು.

ಹಿರಿಯ ಪುತ್ರ ಸಿದ್ಧಾರ್ಥ ಮಹಾದೇವನ್ ಜಿಂದಾ, ಭಾಗ್ ಮಿಲ್ಕಾ ಭಾಗ್ ಹಾಡುಗಳನ್ನು ಪ್ರಸ್ತುತಪಡಿಸಿದರು. ಎರಡನೇ ಮಗ ಶಿವ ಮಹಾದೇವನ್ ಮನ್ ಮಸ್ತ್ ಮಗನ್, ತೇರೆ ನೈನಾ, ಮೈನೆ ತೆನು ಸಮ್ಜಾವನ್, ಬಾಬು ಸಮ್ಜೆ ಇಶಾರೇ ಹಾಡಿದರು. ಶಂಕರ್ ಮಹಾದೇವನ್‌ಗೆ ಇಡೀ ಕಾರ್ಯಕ್ರಮದಲ್ಲಿ ಸಾಥ್ ನೀಡಿದ ಗಾಯಕ ರಮಣ್, ಖೋಲೋ ದರ‌್ವಾಜಾ, ರಸಿಕ ಚಂದ್ರಶೇಖರ್ ಹಾಡಿನ ಜತೆ ಕೊಳಲು ವಾದನ ಪ್ರೇಕ್ಷಕರನ್ನು ರಂಜಿಸಿತು.
ಹಿನ್ನೆಲೆಯಲ್ಲಿ ಮನೋಜ್ ತಪ್ಲಿಯಾಲ್(ಡ್ರಮ್ಸ್), ಸೌಮಿಲ್ ಶ್ರೀಂಗಪುರೆ(ಕೀಬೋರ್ಡ್), ಶಾನ್ ಪಿಂಟೋ(ಗಿಟಾರ್) ದಿಬ್ಯಾ ಜ್ಯೋತಿನಾಥ್(ಬೇಸ್ ಗಿಟಾರ್), ಪ್ರಸಾದ್ ಮಲಾಂಡ್ಕರ್(ಡೋಲಕ್), ಅನುಪಮ್ ದೇಗಟಕ್(ವೆಸ್ಟರ್ನ್ ಪರ್ಕಶನ್) ದೀಪಕ್(ಡೋಲ್ಸ್) ಹಾಡುಗಾರರಿಗೆ ಸಾಥ್ ನೀಡಿದರು.
ಕೊಲ್ಕತ್ತಾದ ಪರಂಪರಾ ತಂಡ, ವಿದ್ವಾನ್ ರಾಜ್ ದೀಪ್ ಬ್ಯಾನರ್ಜಿ ರಂಗಭಾರತಿ-ಕಲರ್ಸ್‌ ಆಫ್ ಭರತನಾಟ್ಯಂ ಹೆಸರಿನಲ್ಲಿ ಪ್ರದರ್ಶಿಸಿದರು. ಆಳ್ವಾಸ್ ಸಾಂಸ್ಕೃತಿಕ ವೈಭವದಲ್ಲಿ ಆಳ್ವಾಸ್‌ನ ವಿದ್ಯಾರ್ಥಿ ಕಲಾವಿದರಿಂದ ಚಿತ್ತ ಸಭಾ ಶಂಕರ, ಮಣಿಪುರದ ದೋಲ್ ಚೆಲಮ್, ಪಂಜಾಬಿನ ಬಾಂಗ್ಡಾ ನೃತ್ಯ, ಅಗ್ರಪೂಜೆ- ತೆಂಕುತಿಟ್ಟಿನ ಯಕ್ಷಗಾನ ಪ್ರದರ್ಶನ ಮೂಲಕ ವಿರಾಸತ್ ಸಂಪನ್ನಗೊಂಡಿತು.

ಉತ್ತಮ ಪ್ರೇಕ್ಷಕ ವರ್ಗ, ಅಚ್ಚುಕಟ್ಟಿನ ವ್ಯವಸ್ಥೆಯೊಂದಿಗೆ ಮೂಡುಬಿದಿರೆ ಮ್ಯಾಜಿಕಲ್ ನೆಲದಲ್ಲಿ ನಡೆಯುತ್ತಿರುವ ವಿರಾಸತ್ ವಿಶೇಷ ಅನುಭವ ನೀಡುವಂತಹ ಕಾರ್ಯಕ್ರಮ. ಸಹಸ್ರಾರು ಪ್ರೇಕ್ಷಕರ ಮುಂದೆ ವಿರಾಸತ್‌ನಲ್ಲಿ ನಾನು ನೀಡುತ್ತಿರುವ ಎರಡನೇ ಸಂಗೀತ ಕಾರ್ಯಕ್ರಮವಿದು. 2019ರಲ್ಲಿ ನಾನು ನೀಡುತ್ತಿರುವ ಮೊದಲ ಲೈವ್ ಶೋ ‘ಆಳ್ವಾಸ್ ವಿರಾಸತ್’ ಎನ್ನುವುದಕ್ಕೆ ಹೆಮ್ಮೆಯಿದೆ.
| ಶಂಕರ್ ಮಹಾದೇವನ್, ಗಾಯಕ

ಕಲಾವಿದರಲ್ಲಿ ಅಭಿವ್ಯಕ್ತಿ ಶಕ್ತಿ: ಭಟ್ಟಾರಕ ಶ್ರೀ ಅಭಿಪ್ರಾಯ

ಮೂಡುಬಿದಿರೆ: ಕಲಾವಿದರಲ್ಲಿ ಅಭಿವ್ಯಕ್ತಿಯ ಶಕ್ತಿಯಿದೆ. ಸಮಾಜದ ಪ್ರಗತಿಯ ಹಾದಿಯಲ್ಲಿ ಉತ್ತಮ ಅಂಶಗಳ ಸಾರವನ್ನು ಕಲಾವಿದರು ಸ್ವೀಕರಿಸಿ ಸತ್ಫಲಗಳನ್ನು ಪ್ರತಿಫಲವಾಗಿ ಸಮಾಜಕ್ಕೆ ನೀಡುವವರಾಗಬೇಕು ಎಂದು ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ವಿದ್ಯಾಗಿರಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ವಿರಾಸತ್ ಅಂಗವಾಗಿ ರಾಷ್ಟ್ರೀಯ ಚಿತ್ರಕಲಾವಿದರು ಮತ್ತು ಶಿಲ್ಪ ಕಲಾವಿದರ ಕೂಡುವಿಕೆಯಲ್ಲಿ ನಡೆದ ವರ್ಣ ವಿರಾಸತ್ ಹಾಗೂ ಶಿಲ್ಪವಿರಾಸತ್ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ರಾಜ್ಯ ಕ್ರಾಫ್ಟ್ ಕೌನ್ಸಿಲ್ ಕಾರ್ಯದರ್ಶಿ ಎಂ.ಎಸ್.ಫಾರೂಕ್ ಇತಿಹಾಸವಾಗುತ್ತಿದ್ದ ಸಾಂಪ್ರದಾಯಿಕ ಕಲೆಗಳ ಮೌಲಿಕತೆ ಅರಿತು ಕೊಳ್ಳಬೇಕು ಎಂದರು.

ಚಿತ್ರಕಲಾವಿದರ ಈ ಮಟ್ಟದ ಶಿಬಿರಗಳು ಅಪರೂಪದ ಕೊಡುಗೆ. 50ರ05 ದಶಕದಲ್ಲಿ ಶ್ರೀನಗರದಲ್ಲಿ ಜಿ.ಆರ್.ಸಂತೋಷ್ ಆರಂಭಿಸಿದ್ದ ಈ ಪ್ರಕ್ರಿಯೆ ಬಳಿಕ ರಾಷ್ಟ್ರೀಯ ಅಕಾಡೆಮಿ ಹಾಗೂ ಕಾರ್ಪೊರೇಟ್ ವಲಯ ಮುಂದುವರಿಸಿದ್ದು ಇದೀಗ ಶಿಕ್ಷಣ ಸಂಸ್ಥೆಗಳು ಈ ಪರಂಪರೆ ಮುಂದುವರಿಸುತ್ತಿರುವುದು ಸಂತಸ ತಂದಿದೆ ಎಂದು ಹೈದರಾಬಾದ್‌ನ ಕಲಾವಿದ ಸೂರ್ಯಪ್ರಕಾಶ್ ಹೇಳಿದರು.

ಕಲಾವಿದ ಶಶಿಧರ್, ಸಂಘಟಕ ಡಾ.ಎಂ.ಮೋಹನ ಆಳ್ವ ಮಾತನಾಡಿದರು. ಕಲಾವಿದ ಡಾ.ಅಖ್ತರ್ ಹುಸೇನ್, ಶಿಬಿರದ ಸಲಹಾ ಸಮಿತಿಯ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು. ವರ್ಣವಿರಾಸತ್‌ನ 10, ಶಿಲ್ಪ ವಿರಾಸತ್‌ನಲ್ಲಿ ಪಾಲ್ಗೊಂಡ 31 ಕಲಾವಿದರನ್ನು ಪ್ರಮಾಣಪತ್ರ ಸಹಿತ ಗೌರವಿಸಲಾಯಿತು. ವಿದ್ಯಾರ್ಥಿನಿ ದೀಕ್ಷಾ ಗೌಡ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಣದ ಚೌಕಟ್ಟಿನಿಂದ ಹೊರಗುಳಿದರೂ ಕಲಾವಿದರಾಗಿ ಅರ್ಪಣಾ ಮನೋಭಾವದಿಂದ ಸಾಧನೆ ಮಾಡಿದವರು ಎಳೆಯರಿಗೆ ಸ್ಫೂರ್ತಿಯಾಗಬೇಕು ಎನ್ನುವ ಕಾರಣಕ್ಕೆ ವರ್ಣ, ಶಿಲ್ಪ ವಿರಾಸತ್ ನಮ್ಮ ಯುವ ಸಮುದಾಯದ ಮುಂದಿಡಲಾಗಿದೆ.
| ಡಾ.ಎಂ.ಮೋಹನ ಆಳ್ವ, ಆಳ್ವಾಸ್ ವರ್ಣ ವಿರಾಸತ್ ಸಂಘಟಕ