More

    ಅನಧಿಕೃತ ಶೆಡ್ ಗಳ ತೆರವು, ಅಮರಗೋಳ ಆಶ್ರಯ ಬಡಾವಣೆಯಲ್ಲಿ ಕಾರ್ಯಾಚರಣೆ

    ಹುಬ್ಬಳ್ಳಿ: ತಾಲೂಕಿನ ಅಮರಗೋಳ ಆಶ್ರಯ ಬಡಾವಣೆ ಮಹಾತ್ಮ ಗಾಂಧಿನಗರದಲ್ಲಿ ವರ್ಷಗಳಿಂದ ಅನಧಿಕೃತವಾಗಿ ಕಟ್ಟಿಕೊಂಡಿದ್ದ ಶೆಡ್ ಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಗುರುವಾರ ತೆರವುಗೊಳಿಸಿದರು.

    34 ವರ್ಷದ ಹಿಂದೆ ನಿರ್ಮಾಣವಾದ ಮಹಾತ್ಮ ಗಾಂಧಿ ಆಶ್ರಯ ಬಡಾವಣೆಯಲ್ಲಿ ಈಗಾಗಲೇ ಹಕ್ಕು ಪತ್ರ ಪಡೆದ ಸಾವಿರಾರು ಜನರು ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಇನ್ನೂ ಕೆಲವರು ಇದೀಗ ಮನೆ ಕಟ್ಟಿಕೊಳ್ಳುತ್ತಿದ್ದಾರೆ.

    ಆದರೆ, ಬಡಾವಣೆಯಲ್ಲಿ ಮೀಸಲಿಟ್ಟಿದ್ದ ಸಿಎ ಹಾಗೂ ಮುಖ್ಯ ರಸ್ತೆಯ ಜಾಗದಲ್ಲಿ ಅನಧಿಕೃತವಾಗಿ ಕೆಲವರು ಶೆಡ್ ಹಾಕಿಕೊಂಡು ವಾಸ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಮಹಾನಗರ ಪಾಲಿಕೆ ವಲಯ ಕಚೇರಿ 4ರ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ಜೆಸಿಬಿ ಸಮೇತ ಸ್ಥಳಕ್ಕೆ ತೆರಳಿ ಸುಮಾರು 12 ಶೆಡ್ ಗಳನ್ನು ತೆರವು ಮಾಡಿದರು.

    ಪಾಲಿಕೆ ಅಧಿಕಾರಿಗಳು ತೆರವಿಗೆ ಆಗಮಿಸಿದ ಸಂದರ್ಭದಲ್ಲಿ ಅನೇಕರು ವಿರೋಧ ವ್ಯಕ್ತಪಡಿಸಿದರು. ನಮಗೆ ವಸತಿಗೆ ಬೇರೆ ಜಾಗವಿಲ್ಲ. ಇಲ್ಲಿಯೇ ಇರಲು ಬಿಡಿ ಎಂದು ಮನವಿ ಮಾಡಿದರು. ಇನ್ನೂ ಕೆಲವರು ನಮಗೆ ಯಾವುದೇ ಮುನ್ಸೂಚನೆ ಇಲ್ಲದೇ ತೆರವು ಮಾಡುತ್ತಿದ್ದೀರಿ ಎಂದು ದೂರಿದರು.

    ಜೆಸಿಬಿ ಬಂದು ಶೆಡ್ ಗಳ ಮುಂದೆ ನಿಲ್ಲುತ್ತಿದ್ದಂತೆ ಕೆಲವರು ಸ್ವಯಂ ಪ್ರೇರಣೆಯಿಂದ ತಗಡಿನ ಶೀಟು, ಇಟ್ಟಿಗೆಗಳನ್ನು ಬೇರೆಡೆ ಸಾಗಿಸಿದರು.

    ಆಶ್ರಯ ಬಡಾವಣೆಗೆ ರಸ್ತೆ ನಿರ್ಮಾಣ ಮಾಡುವ ಉದ್ದೇಶದಿಂದ ಅನಧಿಕೃತ ನಿವಾಸಿಗಳ ಶೆಡ್ ತೆರವು ಮಾಡಲಾಗಿದೆ. ಇದಕ್ಕಾಗಿ ವಾರದ ಮೊದಲೇ ಅವರಿಗೆ ಮಾಹಿತಿ ನೀಡಲಾಗಿತ್ತು. ನಾಗರಿಕ ಸೌಲಭ್ಯದ ಜಾಗವೂ ಅತಿಕ್ರಮಣವಾಗಿತ್ತು. ಒಟ್ಟು 25 ಗುಂಟೆ ಜಾಗದಲ್ಲಿದ್ದ ಸಣ್ಣ ಸಣ್ಣ ಶೆಡ್ಗಳನ್ನು ತೆರವು ಮಾಡಿ ಸ್ವಚ್ಛಗೊಳಿಸಲಾಗಿದೆ ಎಂದು ವಲಯ ಕಚೇರಿ ಸಹಾಯಕ ಆಯುಕ್ತ ರಮೇಶ ನೂಲ್ವಿ ತಿಳಿಸಿದ್ದಾರೆ.

    See also  ಮಾಜಿ ಶಾಸಕ ಅಕ್ಕಿ ಕೈ ಸೇರ್ಪಡೆ 22ರಂದು

    ಅಭಿವೃದ್ಧಿ ಅಧಿಕಾರಿ ಮಂಜುಳಾ ಹಿರೇಮಠ, ಇಂಜಿನಿಯರ್ ಶ್ರುತಿ, ಜಾವೇದ, ಪಾಲಿಕೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts