ಜಗದೀಶ ಹೊಂಬಳಿ ಬೆಳಗಾವಿ
ನಗರದಲ್ಲಿ ಎಲ್ಲೆಂದರಲ್ಲಿ ತಲೆ ಎತ್ತಿರುವ ಗೂಡಂಗಡಿ, ಪಾನ್‌ಶಾಪ್, ಹೋಟೆಲ್, ರಸ್ತೆ ಬದಿ ವ್ಯಾಪಾರದಿಂದ ಫುಟ್‌ಪಾತ್‌ಗಳು ಅತಿಕ್ರಮಣಗೊಂಡಿವೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲೇ ಓಡಾಡುವ ಅನಿವಾರ್ಯ ಎದುರಾಗಿದೆ. ಅಷ್ಟೇ ಅಲ್ಲದೇ ವಾಹನ ಸವಾರರ ಸಂಚಾರಕ್ಕೂ ಸಂಚಕಾರ ಬಂದಿದೆ.
ನಗರದ ಅತ್ಯಂತ ಜನನಿಬಿಡ ಪಾದಚಾರಿ ಮಾರ್ಗವಾದ ಕಾಲೇಜು ರಸ್ತೆಯಲ್ಲೇ ಅತಿಕ್ರಮಣ ಎಗ್ಗಿಲ್ಲದೇ ಆಗಿದೆ. ರಾಣಿ ಚನ್ನಮ್ಮನ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಜೋಡಿ ರಸ್ತೆಗಳಲ್ಲಂತೂ ಫುಟ್‌ಪಾತ್ ಕಾಣಿಸುವುದೇ ಇಲ್ಲ. ಇಲ್ಲಿ ಗೂಡಂಗಡಿ ಮಾತ್ರವಲ್ಲ, ಬೃಹತ್ ವಾಣಿಜ್ಯ ಮಳಿಗೆಗಳಿಂದಲೂ ಅತಿಕ್ರಮಣವಾಗಿದೆ.ಈ ಅಂಗಡಿಗಳಿಗೆ ಬರುವ ಗ್ರಾಹಕರು ತಮ್ಮ ಬೈಕ್‌ಗಳನ್ನು ುಟ್‌ಪಾತ್‌ನಲ್ಲೇ ನಿಲ್ಲಿಸಿ ಹೋಗುತ್ತಿದ್ದಾರೆ. ಹೀಗಾಗಿ, ಇಕ್ಕೆಲಗಳಲ್ಲಿ ವಿಶಾಲ ರಸ್ತೆಗಳಿದ್ದೂ ಇಲ್ಲದಂತಾಗಿದೆ. ಅಜಮ್ ನಗರಕ್ಕೆ ಹೋಗುವ ಮಾರ್ಗದಲ್ಲಿ ಹಣ್ಣಿನ ಅಂಗಡಿ, ಗೂಡಂಗಡಿ, ಮೆಕ್ಯಾನಿಕಲ್ ಶಾಪ್‌ಗಳು ಫುಟ್‌ಪಾತ್‌ಗಳನ್ನೇ ನುಂಗಿವೆ. ಇನ್ನೊಂದೆಡೆ, ಉದ್ಯಮಭಾಗ, ಕೇಳಕರ ಭಾಗ, ಪಂಜುರ್ಲಿ ಹೋಟೆಲ್ ರೋಡ್, ಕಾಂಗ್ರೆಸ್ ರಸ್ತೆಗಳಲ್ಲೂ ಅಲ್ಲಲ್ಲಿ ಹಣ್ಣು, ಎಳನೀರು, ಕಬ್ಬಿನ ಪಾನೀಯ, ತಂಪು ಪಾನೀಯ ಮಾರಾಟ ಮಾಡುವ ಮಳಿಗೆಗಳು ತಲೆ ಎತ್ತಿವೆ. ಆದರೆ, ಕಂಡು ಕಾಣದಂತೆ ಇರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
3 ಕಡೆ ವೆಂಡಿಂಗ್ ರೆನ್ ನಿರ್ಮಾಣ
ಖಾಸಭಾಗ, ಕೋಟೆಕೆರೆ, ಕಣಬರಗಿಯಲ್ಲಿ ಸ್ಮಾರ್ಟ್‌ಸಿಟಿಯಿಂದ ಕೋಟ್ಯಂತರ ರೂ. ವ್ಯಯಿಸಿ 3-4 ವರ್ಷಗಳಿಂದ ನಿಮಿರ್ಸಿದ ವಾಣಿಜ್ಯ ಮಳಿಗೆಗಳನ್ನು ಕಾರಣಾಂತರಗಳಿಂದ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಆಗಿರಲಿಲ್ಲ. ಈ ಮಳಿಗೆಗಳನ್ನು 2 ತಿಂಗಳ ಹಿಂದೆ ಪಾಲಿಕೆಗೆ ಹಸ್ತಾಂತರಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ಖಾಸಬಾಗ ಹಾಕರ್ಸ್ ರೆನ್‌ನ 144 ಮಳಿಗೆ ಹಾಗೂ ಕೋಟೆಕೆರೆ, ಕಣಬರಗಿಯ ಒಟ್ಟು 8 ಮಳಿಗೆಗಳನ್ನು ವ್ಯಾಪಾರಸ್ಥರ ಬಳಕೆಗೆ ಮುಕ್ತಗೊಳಿಸಲು ಟೆಂಡರ್ ಕರೆದು ಹಂಚಿಕೆ ಮಾಡುತ್ತೇವೆ. ಬೀದಿಬದಿ ವ್ಯಾಪಾರಸ್ಥರಿಗೆ ನಗರದ 3 ಕಡೆ ವೆಂಡಿಂಗ್ ರೆನ್ ನಿರ್ಮಿಸುತ್ತೇವೆ. ಈ ಸೌಲಭ್ಯ ಕಲ್ಪಿಸಿದ ಬಳಿಕ ಫುಟ್‌ಪಾತ್ ಅತಿಕ್ರಮಣ ಮಾಡಿಕೊಳ್ಳುವುದು ಸಂಪೂರ್ಣ ತಗ್ಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಫುಟ್‌ಪಾತ್ ಅತಿಕ್ರಮಣ ಮಾಡಿ ವ್ಯಾಪಾರ ಮಾಡುತ್ತಿರುವ ಬಗ್ಗೆ ಹಲವು ಬಾರಿ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಫುಟ್‌ಪಾತ್ ತೆರವುಗೊಳಿಸುತ್ತೇವೆಂದು ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಇನ್ನಾದರೂ ಸಾರ್ವಜನಿಕರ ಅನುಕೂಲಕ್ಕಾದರೂ ಅಧಿಕಾರಿಗಳು ಫುಟ್‌ಪಾತ್ ತೆರವುಗೊಳಿಸಲಿ.
ನಾಗೇಶ ಅಗಸಿಮನಿ, ಅಜಂನಗರ ನಿವಾಸಿ
ಬೀದಿಬದಿ ವ್ಯಾಪಾರಸ್ಥರಿಗಾಗಿ ನಗರದಲ್ಲಿ ಮೂರು ಕಡೆ ವೆಂಡಿಂಗ್ ರೆನ್ ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ಇವು ನಿರ್ಮಾಣವಾದರೆ ಫುಟ್‌ಪಾತ್ ಅತಿಕ್ರಮಣ ಸಮಸ್ಯೆ ನಿವಾರಣೆಯಾಗಲಿದೆ. ಅತಿಕ್ರಮಣಗೊಂಡ ಫುಟ್‌ಪಾತ್‌ಗಳನ್ನು ತೆರವುಗೊಳಿಸುವ ಕ್ರಮ ಕೈಗೊಳ್ಳುತ್ತೇವೆ.
ಶುಭಾ ಬಿ., ಪಾಲಿಕೆ ಆಯುಕ್ತೆ ಬೆಳಗಾವಿ