ಮುದ್ದೇಬಿಹಾಳ: ಅತಿಕ್ರಮಣ ತೆರವು ನೆಪದಲ್ಲಿ ಬಡವರು, ಧ್ವನಿ ಇಲ್ಲದವರು, ಹಿಂದುಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಸ್ಥಳೀಯ ಶಾಸಕರು, ಊರಿನ ಮುಖಂಡರೆಂದು ಓಡಾಡುತ್ತಿರುವ ಕೆಲವರು ಈ ಬಗ್ಗೆ ಧ್ವನಿ ಎತ್ತದೆ ತುಷ್ಟೀಕರಣದ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಕಿಡಿ ಕಾರಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಎದುರಿನ ರೈತರ ಹೋರಾಟಕ್ಕೆ ಬೆಂಬಲಿಸಲು ಶುಕ್ರವಾರ ಬಂದಾಗ ಮಾತನಾಡಿದ ಅವರು, ಕೆರೆ, ಶಾಲೆ, ಸ್ಮಶಾನ ಅತಿಕ್ರಮಣ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶವಿದ್ದರೂ ಇಂದಿರಾ ವೃತ್ತದಲ್ಲಿನ ಕೆರೆ ಅತಿಕ್ರಮಣ ತೆರವುಗೊಳಿಸಲು ಶಾಸಕರು, ಜಿಲ್ಲಾಧಿಕಾರಿ, ತಹಸೀಲ್ದಾರ್, ಪುರಸಭೆ ಮುಖ್ಯಾಧಿಕಾರಿ ಕ್ರಮ ಕೈಗೊಂಡಿಲ್ಲ. ಕೆರೆ ಒತ್ತುವರಿದಾರರು ಯಾರು ಅನ್ನೋದು ಗೊತ್ತಿದ್ದರೂ ಮೌನವಹಿಸಿರುವುದು ತುಷ್ಟೀಕರಣಕ್ಕೆ ಕನ್ನಡಿ ಹಿಡಿದಂತಿದೆ ಎಂದರು.
ಇಂದಿರಾನಗರದಲ್ಲಿ ದಲಿತರು, ಬಡವರು ಹಾಕಿಕೊಂಡಿದ್ದ ಶೆಡ್, ರಸ್ತೆ ಪಕ್ಕದ ಅತಿಕ್ರಮಣ ತೆರವುಗೊಳಿಸಿ ದೌರ್ಜನ್ಯ ನಡೆಸಿರುವ ಇವರು ಶಿರೋಳ ರಸ್ತೆ, ಇಂದಿರಾ ವೃತ್ತದಲ್ಲಿನ ಅತಿಕ್ರಮಣ ತೆರವಿಗೇಕೆ ಮುಂದಾಗಿಲ್ಲ. ಮುಸ್ಲಿಮರು ಅಂದಾಗ ಬಿಡೋದು ಹಿಂದುಗಳು ಅಂದಾಗ ಒಡೆದು ಹಾಕೋದು ನಿಮ್ಮ ಅಜೆಂಡಾನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿರೋಳ ರಸ್ತೆಯಲ್ಲಿರುವ ಹಿಂದುಗಳ 10 ಎಕರೆ ಸ್ಮಶಾನ ಅತಿಕ್ರಮಣ ಮಾಡಿದವರು ಯಾರು? ಕಿಲ್ಲಾದ ಕೋಟೆಗೋಡೆ ಹತ್ತಿರ ಹಳೇಯ ದನದ ಕೊಂಡವಾಡೆ ಜಾಗದಲ್ಲಿ ಮದರಸಾ ಕಟ್ಟಿಸಲಾಗುತ್ತಿದೆ.
ತಹಸೀಲ್ದಾರ್, ಮುಖ್ಯಾಧಿಕಾರಿ ಹಿಂದೆ ಎಂಎಲ್‌ಎ ಇರುವುದೂ ಗೊತ್ತಿದೆ. ಮುಸ್ಲಿಮರು ಶಾಸಕರ ದತ್ತುಪುತ್ರರಾಗಿರುವುದರಿಂದ ಅವರನ್ನು ಮುಟ್ಟೋ ದಮ್ ನಿಮಗಿಲ್ಲದಂತಾಗಿದೆ. ದೌರ್ಜನ್ಯ ನಡೆಸುವ ಅಧಿಕಾರಿಗಳನ್ನು ಕುರ್ಚಿಯಿಂದ ಇಳಿಸೋದು ಹೇಗಂತ ಗೊತ್ತಿದೆ ಎಂದು ಕುಟುಕಿದರು.
ನಾನು ಶಾಸಕನಾಗಿದ್ದಾಗ ಬೀದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಲಿಲ್ಲ. ಈಗಿನ ಶಾಸಕರ ಅವಧಿಯಲ್ಲಿ ಒಕ್ಕಲೆಬ್ಬಿಸಲಾಗಿದೆ. ಬೆಂಗಳೂರು ಬೇಕರಿ ಪಕ್ಕ ಪುಢಾರಿಯೊಬ್ಬ ರಸ್ತೆ ಮೇಲೆ ಅಂಗಡಿ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ರಾವುಸಾಬ್ ದೇಸಾಯಿ ಎನ್ನುವವರ ಮೇಲೆ ದಬ್ಬಾಳಿಕೆ ನಡೆಸಲಾಗಿತ್ತು. ದೇಸಾಯಿ ನನ್ನ ಹತ್ತಿರ ಬಂದಾಗ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಿಪಿಐಗೆ ಸೂಚಿಸಿದ್ದೆ. ಆಗ ಮಾಜಿಯಾಗಿದ್ದ ಈಗಿನ ಶಾಸಕರು ಪುಢಾರಿಯನ್ನು ರಕ್ಷಿಸಲು ಪೊಲೀಸ್ ಠಾಣೆಗೆ ಬಂದಿದ್ದರು.
ಬಡವರು ಅಂಗಡಿ ಹಾಕೊಂಡ್ರೆ ಏನಾಯ್ತು ಅಂತ ಕೇಳಿದ್ದರು. ಇವತ್ತಿಗೂ ಅವನ ಅಂಗಡಿ ತೆಗೆದಿಲ್ಲ. ಆದರೆ ಸಾವಿರಾರು ಬಡಜನರ ಅಂಗಡಿ ಒಡೆದು ಹಾಕ್ತಿದ್ದೀರಲ್ಲ ನಾಚಿಕೆ ಆಗೋಲ್ವೆ ನಿಮಗೆ. ಇವತ್ಯಾಕೆ ನೀವು ಪೊಲೀಸ್ ಠಾಣೆಗೆ ಬರುತ್ತಿಲ್ಲ, ಬಡವರ ಪರ ನಿಲ್ಲುತ್ತಿಲ್ಲ ಎಂದು ಚಾಟಿ ಬೀಸಿದರು.
ತಹಸೀಲ್ದಾರ್ ಕಚೇರಿ ಆವರಣದಲ್ಲಿದ್ದ ಡಬ್ಬಾ ಅಂಗಡಿ ಕಿತ್ತಲು ಅವಕಾಶ ಕೊಟ್ಟಿರಲಿಲ್ಲ. ಇವತ್ತು ಅವೆಲ್ಲವನ್ನೂ ಕಿತ್ತುಹಾಕಿ ದೌರ್ಜನ್ಯ ನಡೆಸಲಾಗಿದೆ. ಒಂದು ರಸ್ತೆ ಮಾಡಿಸಿಲ್ಲ, ಗಿಡಗಳಿಗೆ ನೀರು ಹಾಕಿಸೋ ಯೋಗ್ಯತೆಯೂ ನಿಮಗಿಲ್ಲ. ಆದರೆ ಬಡವರ ಅಂಗಡಿ ಒಡೆದು ಶೂರತನ ತೋರಿಸ್ತಿರಿ. ಮೋದಿ ಸರ್ಕಾರ ಜಾರಿಗೊಳಿಸಿರುವ ಬೀದಿ ವ್ಯಾಪಾರಸ್ಥರಿಗೆ ಸಹಾಯಧನ ಯೋಜನೆಯ ಪ್ರಯೋಜನ ದೊರಕಿಸಿಕೊಡುವುದನ್ನು ಬಿಟ್ಟು ಬಡವರ ಹೊಟ್ಟೆ ಮೇಲೆ ಹೊಡೆದರೆ ಏನು ಸಾಧನೆ ಮಾಡಿದಂಗಾಯ್ತು ಎಂದು ಕುಟುಕಿದರು.
ನಾಲತವಾಡ, ತಾಳಿಕೋಟೆಯಲ್ಲೂ ಮುದ್ದೇಬಿಹಾಳದಲ್ಲಿ ಮಾಡಿದಂತೆ ಅತಿಕ್ರಮಣ ತೆರವಿನ ಸವಾಲೆಸೆದ ಅವರು, ಹೊಟ್ಟೆ ಕಿಚ್ಚಿನ ನಿಮಗೆ ಬಡವರು ನೆಮ್ಮದಿಯಿಂದ ಬದುಕಿದರೆ, ಹೊಸ ಬಟ್ಟೆ ಹಾಕಿಕೊಂಡರೆ ಸಂಕಟ ಶುರುವಾಗುತ್ತದೆ. ನನ್ನ ವಿರುದ್ಧ ಅಪಪ್ರಚಾರ ಮಾಡಿ ಕಾಂಗ್ರೆಸ್‌ಗೆ ಓಟ್ ಹಾಕಿಸಿದ ಕೆಲವು ಪುಢಾರಿಗಳು ಈಗ ಬಡವರಿಗೆ ಅನ್ಯಾಯವಾಗುತ್ತಿರುವಾಗ ಎಲ್ಲಿ ಮಲ್ಕೊಂಡಿದ್ದಾರೆ? ನಡಹಳ್ಳಿ ಅಧಿಕಾರಕ್ಕೆ ಬಂದ್ರೆ ಬಜಾರ್ ಕಿತ್ತಿಸ್ತಾರೆ, ಅದು ಕಿತ್ತಿಸ್ತಾರೆ, ಇದು ಕಿತ್ತಿಸ್ತಾರೆ ಎಂದು ಅಪಪ್ರಚಾರ ಮಾಡಿದ್ದೀರಲ್ಲ ಈಗ ಬಜಾರ್ ಮಾರ್ಕೆಟ್ ಕಿತ್ತಿಸಿದ್ದು ಯಾರು ಎಂದು ತಿವಿದರು.
ಶಿವಪುರ ಎನ್ನುವ ಕಾಂಗ್ರೆಸ್ ಲೀಡರ್ ತನ್ನ ವಾರ್ಡ್‌ನಲ್ಲಿ 30-40 ಜನರಿಗೆ ಶೆಡ್ ಹಾಕಿಸಿದ್ದ. ಆಗ ಬಹಳಷ್ಟು ಕಂಪ್ಲೆಂಟ್ ನನ್ನತ್ರ ಬಂದಿದ್ದವು. ಹೋಗ್ಲಿ ಬಿಡು ಬಡವರಿಗೆ ಅನುಕೂಲ ಆಗ್ತಿದೆ ಎಂದು ಸುಮ್ಮನಿದ್ದೆ. ಈಗೇನಾಯ್ತು? 30-40 ಜನರ ಶೆಡ್ ಒಡೆದು ಹಾಕಿದರಲ್ಲ ಎಂದು ಕುಟುಕಿದರು.