ತಾಳಿಕೋಟೆ: ಕಳೆದೆರಡು ದಿನಗಳಿಂದ ಪಟ್ಟಣದಲ್ಲಿ ನಡೆಸಿದ ಅತಿಕ್ರಮಣ ತೆರವು ಕಾರ್ಯಾಚರಣೆ ಕುರಿತು ಅಂಗಡಿ ಮುಗ್ಗಟ್ಟಿನವರಿಗೆ ಯಾವುದೇ ನೋಟಿಸ್ ನೀಡಿಲ್ಲ. ಕೇವಲ ಪತ್ರಿಕೆ ಪ್ರಕಟಣೆ ನೀಡಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ತಾಳಿಕೋಟೆ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ದಲಿತರ ಅಂಗಡಿಗಳನ್ನು ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಶಾಸಕ ನಾಡಗೌಡರ ಮಾತನ್ನು ಆಲಿಸಿ ತೆರವುಗೊಳಿಸಿದ ಪುರಸಭೆಯ ಮುಖ್ಯಾಧಿಕಾರಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ 23 ಅಂಗಡಿಗಳ ಮಾಲೀಕರು, ಹರಳಯ್ಯ ಸಮಾಜದವರು ತಮ್ಮ ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ಬೀದಿಪಾಲಾಗಿದ್ದು, ಅದೇ ಸ್ಥಳದಲ್ಲಿಯೇ ಯಥಾಸ್ಥಿತಿ ಅಂಗಡಿಗಳನ್ನು ನಿರ್ಮಿಸಿಕೊಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಅವರು ಮಾತನಾಡಿದರು.
ನಿಮ್ಮ ಅಂಗಡಿಗಳು ತೆರವುಗೊಂಡಿದ್ದರೂ ಪುನಃ ನಿಮಗೆ ನ್ಯಾಯ ಕೊಡಿಸಲು ನಿಮ್ಮೊಂದಿಗೆ ಇದ್ದೇನೆ. ಇನ್ನೂ ತೆರವು ಕಾರ್ಯಾಚರಣೆ ನಡೆಯುತ್ತಿತ್ತು, ನಾನು ಸಂಬಂಧಿತ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿದ ನಂತರ ಈ ಕಾರ್ಯಾಚರಣೆ ನಿಲ್ಲಿಸಿದ್ದಾರೆ. ಎರಡೂವರೆ ವರ್ಷ ಕಳೆದರೂ ಶಾಸಕ ನಾಡಗೌಡರು ತಾಳಿಕೋಟೆಗೆ ಭೇಟಿ ನೀಡಿಲ್ಲ. ಹಿಂದು- ಮುಸ್ಲಿಮರಿಗೆ ಜಗಳ ಹಚ್ಚುವ ಕಾರ್ಯ ನಡೆದಿದೆ. ಪೊಲೀಸರಿಗೆ ಹಚ್ಚಿ ಬೆದರಿಸುವ ಕಾರ್ಯ ನಡೆದಿದೆ. ಬುಧವಾರ ಬೆಳಗ್ಗೆ 8 ಗಂಟೆಗೆ ದಲಿತರ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ ತೆರವುಗೊಳಿಸಿರುವುದು ನ್ಯಾಯ ಸಮ್ಮತವಲ್ಲ ಎಂದರು.
ಅತಿಕ್ರಮಣ ತೆರವು ಕಾರ್ಯಾಚರಣೆ ಕುರಿತು ನ್ಯಾಯಾಲಯದಲ್ಲಿ ನನ್ನೊಂದಿಗೆ ಶಾಸಕ ರಾಜುಗೌಡರು ಪಾಲ್ಗೊಳ್ಳಲಿದ್ದಾರೆ. ವಿಧಾನ ಸೌಧದಲ್ಲಿಯೂ ಧ್ವನಿ ಎತ್ತಿ ಹೋರಾಟ ಮಾಡಲಿದ್ದಾರೆ. 65 ವರ್ಷಗಳ ಹಿಂದೆ ಇದ್ದಂತಹ ಅಂಗಡಿಗಳನ್ನು, ಈಗ ತೆರವುಗೊಳಿಸಿರುವ ಅಂಗಡಿಗಳನ್ನು ಕಟ್ಟಿಕೊಡಬೇಕು. ಒಡೆದ ಅಂಗಡಿಗಳ ಮಾಲು ಮಸಲುಗಳ ಹಾನಿಗೆ ಪರಿಹಾರ ನೀಡಬೇಕು ಎಂದರು. ಮುದ್ದೇಬಿಹಾಳದ ಇಂದಿರಾ ನಗರದಲ್ಲಿಯೂ ದಲಿತರ 30 ಮನೆಗಳನ್ನು ಕೆಡವಿದ್ದಾರೆ. ನ್ಯಾಯಾಲಯದ ತಡೆಯಾಜ್ಞೆಗೆ ಅಪಮಾನವಾಗಿದೆ ಎಂದರು.
ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಮಾತನಾಡಿ, ದಲಿತ ಸಮುದಾಯದವರಿಗೆ ಅನ್ಯಾಯವಾಗಿರುವದು ಗೊತ್ತಾಗಿದೆ. ಎ.ಎಸ್.ಪಾಟೀಲರು ಹೇಳಿದಂತೆ ಈ ಅನ್ಯಾಯ ಕುರಿತು ಪ್ರಾಮಾಣಿಕವಾಗಿ ವಿಧಾನಸೌಧದಲ್ಲಿ ಧ್ವನಿ ಎತ್ತುತ್ತೇನೆ. ಈಗಾಗಲೇ ತಾಳಿಕೋಟೆ ಹಾಗೂ ಮುದ್ದೇಬಿಹಾಳದಲ್ಲಿನ ಘಟನೆಗಳ ಕುರಿತು ನಡಹಳ್ಳಿ ಅವರು ವಿವರಿಸಿದ್ದಾರೆ. ದಲಿತ ಸಮುದಾಯದವರು ಸಹ ತಮಗಾದ ಅನ್ಯಾಯ ಕುರಿತು ಹೇಳಿದ್ದಾರೆ. ನಾನು ಹಾಗೂ ನಡಹಳ್ಳಿ ಅವರು ನಿಮ್ಮ ಜೊತೆಯಲ್ಲಿದ್ದೇವೆ ಎಂದರು.
ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ದಲಿತ ಮುಖಂಡರಾದ ಕೆ.ಬಿ.ದೊಡಮನಿ, ಬಸ್ಸು ಸಿದ್ದಾಪುರ, ರಾಘವೇಂದ್ರ ವಿಜಾಪುರ ಮಾತನಾಡಿದರು.
ಮುಖಂಡರಾದ ಡಿ.ಬಿ.ಮುದೂರ, ಹರೀಶ ನಾಟೀಕಾರ, ರಾಜುಗೌಡ ಗುಂಡಕನಾಳ, ಬಸನಗೌಡ ವಣಕ್ಯಾಳ, ಸೋಮನಗೌಡ ಕವಡಿಮಟ್ಟಿ, ರಾಜುಗೌಡ ಕೊಳೂರ, ಜಗದೀಶ ಪಂಪಣ್ಣವರ, ಭಗವಂತ ಕಬಾಡೆ, ಹಣಮಂತ ಕುಂದರಗಿ, ಆನಂದ ದೇವೂರ, ಪುರಸಭಾ ಸದಸ್ಯರಾದ ವಾಸುದೇವ ಹೆಬಸೂರ, ಜೈಸಿಂಗ್ ಮೂಲಿಮನಿ, ಮುದಕಪ್ಪ ಬಡಿಗೇರ, ನಿಂಗಪ್ಪ ಕುಂಟೋಜಿ, ಮೈಹಿಬೂಬ ಲಾಹೋರಿ, ಧರಣಿ ನಿರತರಾದ ಹರಳಯ್ಯ ಸಮಾಜದ ಮುಖಂಡರಾದ ಲಕ್ಷ್ಮಣ ವಿಜಾಪುರ, ಕೃಷ್ಣಾ ಮಬ್ರುಮಕರ, ಚಂದ್ರಶೇಖರ ವಿಜಾಪೂರ, ರಾಜು ವಿಜಾಪೂರ, ಕಾಶಿನಾಥ ಮಬ್ರುಮಕರ, ಜಗದೀಶ ವಿಜಾಪೂರ, ಪರಶುರಾಮ ವಿಜಾಪೂರ ಇತರರಿದ್ದರು.