ಶಿವಮೊಗ್ಗ: ಭಾರತೀಯರ ಹೆಮ್ಮೆಯ ಕ್ರೀಡೆ ಕಬಡ್ಡಿ. ಕ್ರಿಕೆಟ್ ಎಲ್ಲವನ್ನೂ ನುಂಗಿ ಹಾಕುತ್ತಿರುವ ಈ ಸಂದರ್ಭದಲ್ಲಿ ಕಬಡ್ಡಿಯಂತಹ ದೇಸಿ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಸಿಗಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.

ನಗರದ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಶಿಕ್ಷಣ ಸಮಿತಿ, ಸಿ.ಭೀಮಸೇನರಾವ್ ಕಾನೂನು ಮಹಾವಿದ್ಯಾಲಯ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಅಂತರ ಕಾಲೇಜು ರಾಜ್ಯ ಮಟ್ಟದ ಪುರುಷರ ಕಬಡ್ಡಿ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಕ್ರೀಡೆಗಳಿಗೆ ಕಾಲೇಜು ಹಂತದಲ್ಲಿಯೇ ಹೆಚ್ಚು ಪ್ರೋತ್ಸಾಹ ನೀಡುವ ಮೂಲಕ ಯುವ ಮನಸ್ಸುಗಳಲ್ಲಿ ದೇಸಿ ಕ್ರೀಡೆಗಳ ಕುರಿತು ಆಸಕ್ತಿ ಬೆಳೆಸಬೇಕು. ರಾಜ್ಯದಲ್ಲಿ ಈ ವರ್ಷ 20 ನೂತನ ಕಾನೂನು ಕಾಲೇಜುಗಳು ಆರಂಭವಾಗಿವೆ. ಭಾರತೀಯ ಸಂವಿಧಾನ, ಸಹಬಾಳ್ವೆ ಕಾಪಾಡುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ಬದುಕಿನ ಉನ್ನತಿಗೆ ಅಂತಃಶಕ್ತಿ ಮುಖ್ಯ. ಆಟ-ಪಾಠದ ಜತೆಗೆ ಸ್ನೇಹ, ಸಾಮರಸ್ಯ ಸಂಪಾದಿಸಬೇಕು ಎಂದರು.
ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್ ಮಾತನಾಡಿ, ಕ್ರೀಡೆಯಲ್ಲಿ ಗೆಲುವು, ಸೋಲಿಗಿಂತ ಭಾಗವಹಿಸುವಿಕೆ ಬಹಳ ಮುಖ್ಯ. ಆತ್ಮಸ್ಥೈರ್ಯ ವೃದ್ಧಿಸಲು ಕ್ರೀಡಾಕೂಟಗಳು ಸಹಕಾರಿ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯೆ ಡಾ. ಎ.ಅನಲಾ, ರಾಜ್ಯ ಕಾನೂನು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಖಾಲಿದ್ ಖಾನ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎಸ್.ಕಾಂತರಾಜ್ ಇತರರಿದ್ದರು.
2023-24ನೇ ಸಾಲಿನ ಕಾನೂನು ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ದಾಖಲೆ ನಿರ್ಮಿಸಿದ್ದ ರಾಷ್ಟ್ರೀಯ ಕಾನೂನು ಕಾಲೇಜು ವಿದ್ಯಾರ್ಥಿ ಮೊಹಮ್ಮದ್ ಮಿಜಾಮುಲ್ ಅವರನ್ನು ಸನ್ಮಾನಿಸಲಾಯಿತು. ರಾಜ್ಯದ ವಿವಿಧ ಕಾನೂನು ಕಾಲೇಜುಗಳ 40ಕ್ಕೂ ಹೆಚ್ಚು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.