ಬೈಂದೂರು: ಪ್ರಸ್ತುತ ಪಾಲಕರ ಅಭಿರುಚಿಗಿಂತ ವಿದ್ಯಾರ್ಥಿಗಳ ಅಭಿರುಚಿಗೆ ಪ್ರೋತ್ಸಾಹ ದೊರೆಯಬೇಕು ಹಾಗೂ ಹಿಂದುಳಿದ ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಮೂಲ ಸೌಕರ್ಯದ ಕೊರತೆಯನ್ನು ಸ್ವಲ್ಪಮಟ್ಟಿಗೆ ನೀಗಿಸುವಲ್ಲಿ ಹಾಗೂ ಸಮಾಜದ ಕಟ್ಟಕಡೆಯ ಮಗುವೂ ಶಿಕ್ಷಣವನ್ನು ಪಡೆಯಬೇಕೆಂಬ ಉದ್ದೇಶದಿಂದ ನಮ್ಮ ಸಂಘದ ಅಧ್ಯಕ್ಷರು ಸಹಕಾರ ನೀಡುತ್ತಿದ್ದಾರೆ ಎಂದು ಗುಡೇ ಶ್ರೀ ಮಹಾಲಿಂಗೇಶ್ವರ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಕಿರಣ್ ಶೆಟ್ಟಿ ಹೇಳಿದರು.
ಹೇರಂಜಾಲು ಹಲಸಿನಕಟ್ಟೆಮನೆ ದಿ.ಗುಲಾಬಿ ನಾರಾಯಣ ಶೆಟ್ಟಿ ಸ್ಮರಣಾರ್ಥ ಪುತ್ರ ಎಚ್.ಜಯಶೀಲ ಶೆಟ್ಟಿ ಅವರು ಸುಳ್ಸೆ ಮತ್ತು ಅರೆಶಿರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಿದ ಶಾಲಾ ವಾಹನವನ್ನು ಸೋಮವಾರ ಹಸ್ತಾಂತರಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಸೌಲಭ್ಯ ಕೊಟ್ಟಾಗ ಅಲ್ಲಿ ಅತ್ಯಂತ ಉತ್ತಮ ಗುಣಮಟ್ಟದ ಶೈಕ್ಷಣಿಕ ವಾತಾವರಣ ನಿರ್ಮಾಣವಾಗುತ್ತದೆ. ಅನುಭವಿ ಶಿಕ್ಷಕರ ತಂಡ, ಆಡಳಿತ ಮಂಡಳಿ ಸಹಕಾರ ಜತೆಗೆ ಸಾಮಾಜಿಕ ಚಿಂತನೆ ಹಾಗೂ ಕಳಕಳಿ ಇದ್ದಾಗ ಮಕ್ಕಳಿಗೆ ಸಾಧನೆ ಮಾಡಲು ಸಾಧ್ಯ ಎಂದರು.
ಅರೆಶಿರೂರು ಶಾಲಾ ಮುಖ್ಯಶಿಕ್ಷಕಿ ಲಕ್ಷ್ಮೀ ಕೆ., ಎಸ್‌ಡಿಎಂಸಿ ಅಧ್ಯಕ್ಷ ಅಣ್ಣಪ್ಪ ಮೂರೂರು, ಮಾಜಿ ಅಧ್ಯಕ್ಷರಾದ ರಾಘವೇಂದ್ರ ಗಾಣಿಗ, ವಿಠಲ ಗೌಡ, ಸುಳ್ಸೆ ಶಾಲಾ ಮುಖ್ಯಶಿಕ್ಷಕಿ ಶಾರದಾ ದೇವಾಡಿಗ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಆಚಾರ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶೇಖರ ಬಳೆಗಾರ್, ಹಳೇ ವಿದ್ಯಾರ್ಥಿ ಸಂಘದ ಜೋಗ ಪೂಜಾರಿ ಉಪಸ್ಥಿತರಿದ್ದರು. ಶಾಲಾ ವಾಹನವನ್ನು ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹಸ್ತಾಂತರಿಸಲಾಯಿತು. ಸಂಸ್ಥೆಯ ಸುಜಯ್ ಶೆಟ್ಟಿ, ಶೈಲೇಶ್ ಶೆಟ್ಟಿ ಇದ್ದರು.