728 ಕಡೆ ಒತ್ತುವರಿ ತೆರವು ಬಾಕಿ

| ಗಿರೀಶ್ ಗರಗ ಬೆಂಗಳೂರು

ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಆರಂಭಶೂರತ್ವ ತೋರಿದ್ದ ಬಿಬಿಎಂಪಿ ನಂತರ ಮೌನ ವಹಿಸಿದೆ. ಇನ್ನೂ 728 ಕಡೆ ತೆರವು ಬಾಕಿ ಉಳಿಸಿಕೊಳ್ಳಲಾಗಿದ್ದು, ಒಂದು ವಾರದೊಳಗೆ ಮತ್ತೆ ಕಾರ್ಯಾಚರಣೆ ಆರಂಭಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಬಾರಿಯಾದರೂ ಪ್ರಭಾವಿಗಳ ಒತ್ತುವರಿ ತೆರವು ಮಾಡಲು ಮುಂದಾಗಬೇಕಿದೆ.

ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ವಿುಸಿಕೊಂಡು ಹಾಯಾಗಿದ್ದವರಿಗೆ 2016ರಲ್ಲಿ ಬಿಬಿಎಂಪಿ ಶಾಕ್ ನೀಡಿತ್ತು. ದೊಡ್ಡಬೊಮ್ಮಸಂದ್ರ, ಆವನಿ ಶೃಂಗೇರಿನಗರ, ಕಸವನಹಳ್ಳಿ ಮತ್ತಿತರ ಕಡೆಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡಿ, ನೂರಾರು ಕಟ್ಟಡಗಳನ್ನು ಕೆಡವಲಾಗಿತ್ತು. ಆನಂತರ ಪ್ರಭಾವಿಗಳ ಒತ್ತುವರಿ ವಿಚಾರ ಬೆಳಕಿಗೆ ಬಂದ ಕೂಡಲೇ ಇಡೀ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಆರಂಭಿಸಲು ಒತ್ತುವರಿ ಸರ್ವೆಗೆ ಬಿಬಿಎಂಪಿ ಮುಂದಾಗಿದೆ.

728 ಜಾಗದಲ್ಲಿ ತೆರವು ಬಾಕಿ: ಬಿಬಿಎಂಪಿ ಗುರುತಿಸಿರುವ ಒತ್ತುವರಿಯಲ್ಲಿ ಈಗಾಗಲೇ 1,225 ಕಡೆಗಳಲ್ಲಿ ತೆರವು ಮಾಡಲಾಗಿದೆ. 728 ಕಡೆ ತೆರವು ಬಾಕಿ ಇದೆ. 2017ರ ಫೆಬ್ರವರಿಯಿಂದ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಇದೀಗ ಆ ಜಾಗಗಳನ್ನು ತೆರವು ಮಾಡಲಾಗುತ್ತದೆ.

ಕೆ.ಆರ್. ಪುರದಿಂದ ಆರಂಭ

ಭೂಮಾಪಕರು ಕೆ.ಆರ್. ಪುರದಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಿದ್ದಾರೆ. ಒತ್ತುವರಿ ಸ್ಕೆಚ್ ಅಂತಿಮಗೊಂಡ ನಂತರ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗುತ್ತದೆ.

ವರದಿ ಬಂದ ನಂತರ ಕಾರ್ಯಾಚರಣೆ

10 ಭೂಮಾಪಕರಿಗೆ ಪ್ರತ್ಯೇಕ ಸ್ಥಳಗಳಲ್ಲಿ ಸರ್ವೆ ನಡೆಸುವಂತೆ ಸೂಚಿಸಲಾಗಿದೆ. ಅವರು ಸರ್ವೆ ವರದಿ ನೀಡಿದ ನಂತರ ತೆರವು ಕಾರ್ಯಾಚರಣೆ ನಡೆಯಲಿದೆ. ಆದರೆ, ಈ ಬಾರಿ ಬಿಡಿಬಿಡಿಯಾಗಿ ಕಾರ್ಯಾಚರಣೆ ನಡೆಸದೆ ಒಮ್ಮೆಲೆ ಎಲ್ಲ ಕಡೆಗಳಲ್ಲೂ ಕಾರ್ಯಾಚರಣೆ ನಡೆಸಲು ಚಿಂತಿಸಲಾಗಿದೆ.

10 ಭೂಮಾಪಕರಿಂದ ಸರ್ವೆ ಕಾರ್ಯ

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಭೂ ದಾಖಲೆ ಇಲಾಖೆ ಜಂಟಿ ನಿರ್ದೇಶಕರಿಗೆ ಪತ್ರ ಬರೆದ ಬಿಬಿಎಂಪಿ ಅಧಿಕಾರಿಗಳು, ರಾಜಕಾಲುವೆ ಒತ್ತುವರಿ ಗುರುತಿಸಲು ಭೂಮಾಪಕರನ್ನು ನೇಮಿಸುವಂತೆ ಮನವಿ ಮಾಡಿದ್ದರು. ಅದರಂತೆ ಭೂ ದಾಖಲೆ ಇಲಾಖೆಯಿಂದ 10 ಭೂ ಮಾಪಕರನ್ನು ಕಳುಹಿಸಿದ್ದು, ಸರ್ವೆ ಕಾರ್ಯದಲ್ಲಿ ತೊಡಗಿದ್ದಾರೆ.

11.5 ಎಕರೆ ವಶ

ಬಿಬಿಎಂಪಿ ದಾಖಲೆ ಪ್ರಕಾರ ಒಟ್ಟು 1,953 ಕಡೆಗಳಲ್ಲಿ ಒತ್ತುವರಿ ಗುರುತಿಸಲಾಗಿತ್ತು. ಅವುಗಳಲ್ಲಿ 2016ರ ಆ. 5ಕ್ಕೂ ಮುಂಚೆ 822 ಕಡೆ ತೆರವು ಕಾರ್ಯ ಮಾಡಲಾಗಿತ್ತು. ನಂತರ 2016ರ ಆ.6ರಿಂದ 2017ರ ಫೆ. 18ರವರೆಗೆ ಮತ್ತೆ ಕಾರ್ಯಾಚರಣೆ ನಡೆಸಲಾಗಿತ್ತು. ಈ 7 ತಿಂಗಳ ಅವಧಿಯಲ್ಲಿ ಒಟ್ಟು 403 ಕಡೆಗಳಲ್ಲಿನ ಒತ್ತುವರಿ ತೆರವು ಮಾಡಿ 600 ಕೋಟಿ ರೂ. ಮೌಲ್ಯದ 11 ಎಕರೆ 21 ಗುಂಟೆ ಭೂಮಿ ವಶಕ್ಕೆ ಪಡೆಯಲಾಗಿತ್ತು.

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ. ಕೆ.ಆರ್. ಪುರದಲ್ಲಿ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಕಾರ್ಯಾಚರಣೆ ನಡೆಸಲಾಗುವುದು.

| ಬೆಟ್ಟೇಗೌಡ ಮುಖ್ಯ ಇಂಜಿನಿಯರ್ ಬಿಬಿಎಂಪಿ ಬೃಹತ್ ಮಳೆನೀರುಗಾಲುವೆ