ಶುದ್ಧ ನೀರಿಗಾಗಿ ಅನ್ಯ ಗ್ರಾಮಸ್ಥರ ಲಗ್ಗೆ !

ಔರಾದ್: ಸರ್ಕಾರದ ಯೋಜನೆ ಸಮರ್ಪಕ ಅನುಷ್ಠಾನಗೊಂಡರೆ ಒಂದು ಊರು ಮಾತ್ರವಲ್ಲ. ಸುತ್ತಲಿನ ಗ್ರಾಮಸ್ಥರು ಕೂಡ ಅದರ ಲಾಭ ಪಡೆದುಕೊಳ್ಳುತ್ತಾರೆ. ಸರ್ವೇ ಜನಃ ಸುಖಿನೋ ಭವಂತು ಎಂಬ ಕಲ್ಪನೆ ಸಾಕಾರಗೊಳ್ಳಲು ಸಾಧ್ಯ ಎಂಬುದಕ್ಕೆ ಸುಂಧಾಳ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಸಾಕ್ಷಿಯಾಗಿದೆ.

ಅಧಿಕಾರಿಗಳಷ್ಟೇ ಮನಸ್ಸು ಮಾಡಿದರೆ ಸಾಲದು, ಗ್ರಾಮಸ್ಥರು ಉತ್ತರದಾಯಿತ್ವದೊಂದಿಗೆ ಯೋಜನೆ ಅನುಷ್ಠಾನದಲ್ಲಿ ಸಹಭಾಗಿತ್ವ ಮಾಡಿದರೆ ಸಕರ್ಾರದ ಯೋಜನೆಯ ಗರಿಷ್ಠ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂಬ ಮಾತಿಗೂ ಸುಂಧಾಳ ಗ್ರಾಮಸ್ಥರು ಮಾದರಿ ಆಗಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಲ್ಲಿ ಗ್ರಾಮಸ್ಥರ ಕೊಡುಗೆ ಶ್ಲಾಘನೀಯವಾಗಿದೆ.

ಸುಂಧಾಳದ ಶುದ್ಧ ಕುಡಿಯುವ ನೀರಿನ ಘಟಕ ಪಕ್ಕದ ಎನಗುಂದಾ ಮತ್ತು ಖಾಶೆಂಪುರ ಗ್ರಾಮಸ್ಥರಿಗೂ ವರವಾಗಿದೆ. ಮೂರು ಊರಿನ ಜನರಿಗೆ ಶುದ್ಧ ಕುಡಿಯುವ ನೀರೊದಗಿಸುವ ಘಟಕ ಇದಾಗಿದೆ. 3 ಕಿಮೀ ದೂರದ ಎನಗುಂದಾ ಮತ್ತು 2 ಕಿಮೀ ದೂರದ ಖಾಶೆಂಪುರ ಗ್ರಾಮಸ್ಥರು ಸುಂಧಾಳ ಘಟಕದ ಶುದ್ಧ ನೀರನ್ನೇ ಬಳಸುತ್ತಿದ್ದಾರೆ.

2 ರೂ.ಗೆ 20 ಲೀಟರ್ ಶುದ್ಧ ನೀರು ಸಿಗುತ್ತದೆ. ಅದೇ 20 ಲೀಟರ್ ಶುದ್ಧ ನೀರು ಪಡೆಯಲು ಔರಾದ್ನಲ್ಲಿ 10ರಿಂದ 20 ರೂ. ಪಾವತಿಸಬೇಕಾಗುತ್ತದೆ. ಘಟಕಕ್ಕೆ ಹೋದರೆ 10 ರೂ., ಮನೆಗೆ ತಲುಪಿಸಿದರೆ 20 ರೂ. ದರ ಇದೆ. ಕುಡಿಯುವ ನೀರಿನ ವಿಷಯದಲ್ಲಿ ಪಟ್ಟಣಗಳಿಗಿಂತ ಗ್ರಾಮೀಣ ಜನಜೀವನವೇ ವಾಸಿ ಎಂಬುದು ಎದ್ದು ಕಾಣುತ್ತಿದೆ.

ಹಾಗಂತ ಸುಂಧಾಳದಲ್ಲಿ ನೀರಿನ ಸಮಸ್ಯೆ ಇಲ್ಲ ಅಂತ ತಿಳಿಯಬೇಕಿಲ್ಲ. ಇದೆಲ್ಲ ಕುಡಿಯುವ ನೀರಿನ ಮಾತಾಯಿತು. ಸಾಮಾನ್ಯ ಬಳಕೆಗಾಗಿ ಸುಂಧಾಳದಲ್ಲೂ ನೀರಿನ ಸಮಸ್ಯೆ ಇದ್ದು, ಗ್ರಾಮಸ್ಥರು ಹೈರಾಣ ಅನುಭವಿಸುತ್ತಿದ್ದಾರೆ. ಒಂದು ಬಡಾವಣೆಯಿಂದ ಮತ್ತೊಂದು ಬಡಾವಣೆಗೆ ಪರದಾಟ ಮಾಡಬೇಕಾಗುತ್ತಿದೆ.