ರಾಮನಗರ: “ಯಾರೇ ಎಷ್ಟೇ ಕುತಂತ್ರ ಮಾಡಿದರೂ ಬೆಂಗಳೂರು ದಕ್ಷಿಣ ಹೆಸರನ್ನು ಅಳಿಸಲು ಸಾಧ್ಯವಿಲ್ಲ. 25-30 ವರ್ಷ ಅವಕಾಶವನ್ನು ಬೆಂಗಳೂರಿನಿಂದ ದೆಹಲಿವರೆಗೆ ನೀಡಿದ್ದೀರಿ. ಆದರೂ ಬರೇ ಬುಟ್ಟಿ ಬೇವಿನ ಸೊಪ್ಪು ನಂದೆ ಬೆಳಗು ಪೂಜಾರಿ ಅನ್ನುವಂತಾಯಿತು. ಬರೀ ಖಾಲಿ ಟ್ರಂಕು, ಖಾಲಿ ಮಾತು” ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಹೆಸರು ಹೇಳದೆ ಡಿಸಿಎಂ DK ಶಿವಕುಮಾರ್ ಕುಟುಕಿದರು.

ಇದನ್ನೂ ಓದಿ:ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವ
ರಾಮನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲಾ ಕೇಂದ್ರಕ್ಕೆ ಹೊಸರೂಪ
“ರಾಮನಗರ ಪಟ್ಟಣ ಪ್ರದೇಶದ ಅಭಿವೃದ್ಧಿಗೆ ರೂ.150 ಕೋಟಿ, ನೀರಾವರಿ ಇಲಾಖೆಯಿಂದ ರೂ. 400 ಕೋಟಿ ಅನುದಾನ ನೀಡಲಾಗಿದೆ. ಸತ್ತೇಗಾಲದಿಂದ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ತರಲಾಗುತ್ತಿದೆ. ಜಿಲ್ಲಾ ಕೇಂದ್ರಕ್ಕೆ ಹೊಸರೂಪ ನೀಡಲಾಗುವುದು ಎಂದರು.
100 ಎಕರೆ ಪ್ರದೇಶವನ್ನು ಗುರುತಿಸಿ ಬಡವರಿಗೆ ನಿವೇಶನ ಹಂಚುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ. ಶೀಘ್ರದಲ್ಲಿಯೇ ಇದರ ಬಗ್ಗೆ ಸಭೆ ನಡೆಸಲಾಗುವುದು. ಚನ್ನಪಟ್ಟಣದಲ್ಲಿ 2 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಂಚಲಾಗಿದೆ. ವಸತಿ ಸಚಿವ ಜಮೀರ್ ಅವರು ನಿವೇಶನ ಅಭಿವೃದ್ಧಿಗೆ ಎಂದು ರೂ.40 ಕೋಟಿ ಹಣ ಮೀಸಲಿಟ್ಟಿದ್ದಾರೆ. ನಿಮ್ಮ ಊರಿನಲ್ಲಿಯೇ ಉದ್ಯೋಗ ದೊರೆಯುವಂತೆ ನಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದರು.
“ನಾವು ಮಾಡುವ ಕೆಲಸಗಳಿಗೆ ಟೀಕೆ ಮಾಡುತ್ತಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಮ್ಮ ನಾಲ್ಕು ಜನ ಶಾಸಕರು ನಿಮ್ಮ ಜೊತೆ ಸದಾ ಇರುತ್ತಾರೆ. ಇಲ್ಲಿಂದ ಬಿಟ್ಟು ಹೋದವರ ಬಗ್ಗೆ ಚಿಂತೆ ಮಾಡಬೇಡಿ. ಬಡತನ, ಸಿರಿತನ ಶಾಶ್ವತವಲ್ಲ ಆದರೆ ನಾವು ಮಾಡುವ ಕೆಲಸಗಳು ಶಾಶ್ವತ” ಎಂದರು.