More

    ವೇತನ ಪರಿಷ್ಕರಣೆ ಆಯೋಗ ರಚನೆಗೆ ನೌಕರರ ಆಗ್ರಹ: ಸರ್ಕಾರದ ಮೇಲೆ ಹೆಚ್ಚಿದ ಒತ್ತಡ..

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ಸರಿಸುಮಾರು 12 ಲಕ್ಷ ನೌಕರರ ವೇತನ ಅಥವಾ ಪಿಂಚಣಿ ಪರಿಷ್ಕರಣೆಗೆ ಸಂಬಂಧಿಸಿದಂತೆ ನೂತನ ವೇತನ ಆಯೋಗ ರಚಿಸುವ ಒತ್ತಡಕ್ಕೆ ರಾಜ್ಯ ಸರ್ಕಾರ ಸಿಲುಕಿದ್ದು, ಚುನಾವಣೆ ವರ್ಷದಲ್ಲಿ ಉದಾಸೀನ ಮಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾದ ಅಡಕತ್ತರಿಯಲ್ಲಿ ಸಿಲುಕಿದೆ.

    ಸರ್ಕಾರದಲ್ಲಿನ ಸಂಪ್ರದಾಯದ ಪ್ರಕಾರ ಪ್ರತಿ ಐದುವರ್ಷಗಳಿಗೊಮ್ಮೆ ವೇತನ ಆಯೋಗ ರಚಿಸಲಾಗುತ್ತದೆ. ಆಯೋಗವು ಬೆಲೆ ಏರಿಕೆ, ಇತರ ರಾಜ್ಯಗಳಲ್ಲಿನ ವೇತನ ಪರಿಷ್ಕರಣೆ, ಕೇಂದ್ರದ ಕ್ರಮಗಳನ್ನು ಪರಿಶೀಲಿಸಿ ಒಂದು ಶಿಫಾರಸು ಮಾಡುತ್ತದೆ. ಅದನ್ನು ಸರ್ಕಾರ ಪರಿಗಣಿಸುತ್ತದೆ. ಸಿದ್ದರಾಮಯ್ಯ ಚುನಾವಣೆಗೆ ಹೋಗುವ ಮುನ್ನ ಆಯೋಗ ರಚಿಸಿ ವರದಿ ಅನುಷ್ಠಾನಗೊಳಿಸುವ ತಿರ್ವನ ಪ್ರಕಟಿಸಿದ್ದರು.

    ಅಂದಹಾಗೆ ಹಿಂದಿನ ವೇತನ ಆಯೋಗದ ಐದು ವರ್ಷಗಳ ಅವಧಿ ಜುಲೈ 31ಕ್ಕೆ ಕೊನೆಯಾಗಿದೆ. ಅಂದರೆ ಸರ್ಕಾರ ಹೊಸ ವೇತನ ಆಯೋಗದ ರಚನೆ ಮತ್ತು ಅನುಷ್ಠಾನವನ್ನು ಸರ್ಕಾರಿ ನೌಕರರು ಎದುರು ನೋಡುತ್ತಿದ್ದಾರೆ. ಕಳೆದ 3-4 ತಿಂಗಳಿನಿಂದಲೇ ಸರ್ಕಾರಿ ನೌಕರರ ಸಂಘ ಸರ್ಕಾರದ ಬೆನ್ನುಬಿದ್ದು, ಮನವಿ ಸಲ್ಲಿಸಿದೆ. ಈ ಪ್ರಯತ್ನದ ಭಾಗವಾಗಿ ಹಣಕಾಸು ಇಲಾಖೆಯೊಂದಿಗೆ ಒಂದು ಸುತ್ತಿನ ಸಭೆಯೂ ನಡೆದಿದೆ. ಯಾವ ಪ್ರಮಾಣದಲ್ಲಿ ವೇತನ ಹೆಚ್ಚಳ ಆಗಬೇಕೆಂದು ಸಂಘ ಸರ್ಕಾರಕ್ಕೆ ಬೇಡಿಕೆ ಮುಂದಿಟ್ಟಿದೆ. ಮುಂದಿನ ಪ್ರಕ್ರಿಯೆಯಾಗಿ ಸರ್ಕಾರ ವೇತನ ಆಯೋಗ ರಚಿಸಬೇಕು, ಆಯೋಗದ ಅಧ್ಯಕ್ಷರು ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಿ, ಎಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಿಸಬೇಕೆಂದು ಪರಾಮರ್ಶೆ ನಡೆಸಿ ಸರ್ಕಾರಕ್ಕೆ ಶಿಫಾರಸು ಮಾಡಬೇಕಾಗುತ್ತದೆ. ಸರ್ಕಾರಿ ನೌಕರರ ಸಂಘವು ಕ್ರಮಬದ್ಧವಾಗಿ ಸಿದ್ಧಗೊಳಿಸಿದ ವರದಿಯನ್ನೇ ಪರಿಗಣಿಸಿ ಮುಂದುವರಿಯುವುದಾದರೂ ಈ ಸಮಿತಿಗೆ ವರದಿ ಸಿದ್ಧಪಡಿಸಲು 2-3 ತಿಂಗಳಾದರೂ ಬೇಕಾಗುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸರ್ಕಾರಿ ನೌಕರರ ಸಂಘಕ್ಕೆ ಆಗಸ್ಟ್​ನಲ್ಲಿ ಸಮಿತಿ ರಚಿಸಿ, ವರ್ಷದೊಳಗೆ ಪರಿಷ್ಕರಣೆ ಬಗ್ಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಈಗ ಅವರ ಭರವಸೆ ಅನುಷ್ಠಾನಕ್ಕೆ ಬರಬೇಕಿದೆ.

    ಸರ್ಕಾರ ನಮ್ಮ ಅನೇಕ ಬೇಡಿಕೆ ಈಡೇರಿಸಿದೆ. ಈ ಬೇಡಿಕೆಯನ್ನೂ ಈಡೇರಿಸುವ ವಿಶ್ವಾಸವಿದೆ. ಈಗಾಗಲೇ ಮನವಿ ಸಲ್ಲಿಸಿದ್ದೇವೆ. ಆಗಸ್ಟ್​ನಲ್ಲಿ ಆಯೋಗ ರಚನೆ ಮಾಡುವ ಭರವಸೆ ಸಿಕ್ಕಿದೆ. ಶೀಘ್ರವೇ ಸಿಎಂ ಶುಭಸುದ್ದಿ ಕೊಡುತ್ತಾರೆಂಬ ನಿರೀಕ್ಷೆಯಲ್ಲಿದ್ದೇವೆ.

    | ಸಿ.ಎಸ್.ಷಡಾಕ್ಷರಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

    ಬೇಡಿಕೆ ಏನು?: 5.40 ಲಕ್ಷದಷ್ಟು ಸರ್ಕಾರಿ ನೌಕರರಿದ್ದಾರೆ. 3 ಲಕ್ಷದಷ್ಟು ನಿಗಮ ಮಂಡಳಿ, ಪ್ರಾಧಿಕಾರ, ವಿವಿಗಳಲ್ಲಿದ್ದಾರೆ. 4 ಲಕ್ಷದಷ್ಟು ನಿವೃತ್ತ ನೌಕರರಿದ್ದಾರೆ. ಹಾಲಿ ನೌಕರರು ವೇತನ ಪರಿಷ್ಕರಣೆ ಬಯಸಿದರೆ, ನಿವೃತ್ತ ನೌಕರರು ಪಿಂಚಣಿ ಪರಿಷ್ಕರಣೆ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರವು ನೌಕರರ ಸಂಘದ ಬೇಡಿಕೆ ಈಡೇರಿಸಬೇಕೆಂದರೆ ಸರಿಸುಮಾರು 12 ಸಾವಿರ ಕೋಟಿ ರೂ. ಬೇಕಾಗುತ್ತದೆ.

    ಸರ್ಕಾರದ ಮೇಲೆ ಒತ್ತಡ: ಚುನಾವಣೆ ವರ್ಷ ಆರಂಭವಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ಎಲ್ಲ ವರ್ಗವನ್ನು ವಿಶ್ವಾಸದಲ್ಲಿಟ್ಟುಕೊಳ್ಳಲು ಹರಸಾಹಸ ಪಡುತ್ತದೆ. ಇಂತಹ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಸರ್ಕಾರಿ ನೌಕರರು ಮತ್ತು ನಿವೃತ್ತ ನೌಕರರ ಕೂಗನ್ನು ಆಲಿಸದೇ ಹೋದರೆ ಚುನಾವಣೆಯಲ್ಲಿ ಖಂಡಿತ ಪರಿಣಾಮ ಬೀರಲಿದೆ ಎಂಬುದರ ಸ್ಪಷ್ಟ ಅರಿವಿರುತ್ತದೆ. ಒಂದೊಮ್ಮೆ ಉದಾಸೀನ ಮಾಡಿದರೆ ಸರ್ಕಾರಿ ನೌಕರರು ಹೋರಾಟಕ್ಕಿಳಿಯುವ ಮುನ್ಸೂಚನೆಯೂ ಇದೆ.

    ಹೊಸ ಲೆಕ್ಕಾಚಾರ: ಪ್ರಸ್ತುತ ನೌಕರರು ಹಾಗೂ ನಿವೃತ್ತ ನೌಕರರು ಪಡೆಯುತ್ತಿರುವ ಡಿಎಯನ್ನು ಮೂಲವೇತನದೊಂದಿಗೆ ಸೇರಿಸಿ ಅದರ ಆಧಾರದಲ್ಲಿ ವೇತನ ಪರಿಷ್ಕರಣೆ ಮಾಡಬೇಕೆಂಬುದು ಪ್ರಮುಖ ಬೇಡಿಕೆ. ಮೂಲ ವೇತನದ ಮೇಲೆ ಶೇ.30ರಿಂದ 40 ವೇತನ ಹೆಚ್ಚಳ ನಿರೀಕ್ಷಿಸಲಾಗಿದೆ. ಕೇಂದ್ರಕ್ಕೆ ಸರಿಸಮಾನ ವೇತನ ವಿಚಾರದ ಬದಲು ಈ ಮಾರ್ಗ ಅನುಸರಿಸಲಾಗುತ್ತದೆ ಎಂಬ ಗುಸುಗುಸು ಇದೆ. ಇದಕ್ಕೆ ಕಾರಣ, ಕೇಂದ್ರ ಸರ್ಕಾರ ಹೊಸ ವೇತನ ಆಯೋಗ ರಚಿಸುತ್ತಿದೆ. ಒಂದೊಮ್ಮೆ ಈಗ ರಾಜ್ಯ ಕೇಂದ್ರದ ಹಾಲಿ ವೇತನ ಪರಿಗಣಿಸಿ ಪರಿಷ್ಕರಣೆ ಮಾಡಿದರೆ ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ದೊಡ್ಡ ವ್ಯತ್ಯಾಸ ಕಾಣಲಿದೆ ಎಂಬ ಕಾರಣಕ್ಕೆ ಹೊಸ ಬೇಡಿಕೆ ಬಗ್ಗೆ ಆರ್ಥಿಕ ಇಲಾಖೆಯಲ್ಲಿ ಚರ್ಚೆಯಾಗುತ್ತಿದೆ.

    ಪತಿ ವಯಸ್ಸು 75, ಪತ್ನಿಗೆ 70; ಮದ್ವೆಯಾದ 54 ವರ್ಷಗಳ ಬಳಿಕ ಆಯ್ತು ಮೊದಲ ಮಗು!

    ದೇವಸ್ಥಾನದ ನೀರಲ್ಲೇ ಉರಿಯುತ್ತದೆ ಈ ದರ್ಗಾದ ದೀಪ!; ಹಿಂದೂ-ಮುಸ್ಲಿಂ ಸಾಮರಸ್ಯದ ಮೊಹರಂ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts