ಹೊರಗುತ್ತಿಗೆ ನೌಕರರನ್ನು ಮುಂದುವರಿಸಿ

ಮುದ್ದೇಬಿಹಾಳ: ಪಟ್ಟಣದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರ ವಿರುದ್ಧ ಪುರಸಭೆ ಸದಸ್ಯ ನಡೆಸುತ್ತಿರುವ ಪಿತೂರಿಗೆ ಅಧಿಕಾರಿಗಳು ಯಾವುದೆ ಬೆಲೆ ನೀಡಬಾರದು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘಟನೆ ಜಿಲ್ಲಾ ಸಮಿತಿ ಪದಾಧಿಕಾರಿಗಳು ಸ್ಥಳೀಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನೌಕರ ಮಲ್ಲಿಕಾರ್ಜುನ ಚಲವಾದಿ ಜ.14ರಂದು ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗುವ ವೇಳೆ ಕುಟುಂಬದವರಿಂದ ರಕ್ಷಿಸಲ್ಪಟ್ಟು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಹೊರಗುತ್ತಿಗೆ ನೌಕರನ ಆರೋಗ್ಯ ವಿಚಾರಣೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.ಆರ್.ಉಂಡಿಗೇರಿ ಅವರಿಗೆ ಹೊರಗುತ್ತಿಗೆ ನೌಕರರ ಸಂಘದವರು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ಹುಲಗಪ್ಪ ಚಲವಾದಿ ಮಾತನಾಡಿ, ಮುದ್ದೇಬಿಹಾಳದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ 15-20 ವರ್ಷಗಳಿಂದ ಮಲ್ಲಿಕಾರ್ಜುನ ಚಲವಾದಿ ಹಾಗೂ ಮಹಾದೇವಿ ಚಲವಾದಿ ದಂಪತಿ ದುಡಿಯುತ್ತಿದ್ದು, ಅವರನ್ನು ಬೇರೆ ಕಡೆ ವರ್ಗಾಯಿಸಲು ಹುನ್ನಾರ ನಡೆಸಿದ್ದಾರೆ. ಇದಕ್ಕೆ ಸೊಪ್ಪು ಹಾಕದೆ ಅಧಿಕಾರಿಗಳು ಅದೇ ಹಾಸ್ಟೆಲ್​ನಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಉಂಡಿಗೇರಿ, ಈಗಾಗಲೇ ಪೊಲೀಸ್ ಠಾಣೆಯಲ್ಲಿ ಈ ವಿಷಯವಾಗಿ ಸಂಧಾನ ನಡೆಸಲಾಗಿದ್ದು, ಪುರಸಭೆ ಸದಸ್ಯ ಇಲಾಖೆಗೆ ನೀಡಿದ್ದ ಪತ್ರ ವಾಪಸ್ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ನೌಕರರನ್ನು ಅದೇ ವಸತಿ ನಿಲಯದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದರು.

ಸಂಘಟನೆ ಸಹಕಾರ್ಯದರ್ಶಿ ಲಕ್ಷ್ಮಣ ಮಸಳಿ, ಭೀಮು ಸನ್ನಧಿ, ಲಾಳೇಮಶ್ಯಾಕ ಸುಗಂಧಿ, ಸಂಗಮೇಶ ಚಲವಾದಿ, ಮಾಳಪ್ಪ ಇಂಗಳಗಿ, ರೇಣುಕಾ ಭಜಂತ್ರಿ, ಕಸ್ತೂರಿ ಚಲವಾದಿ, ಸುಜಾತಾ ವಡ್ಡರ, ರೇಷ್ಮಾ ನಾಗರಾಳ, ಸರೋಜಮ್ಮ ವಡ್ಡರ, ವೈಶಾಲಿ ವಡ್ಡರ, ಶಾಂತಮ್ಮ ಮಠಪತಿ, ಮಲ್ಲಮ್ಮ ಮಾದರ, ಶೋಭಾ ಚಲವಾದಿ, ಶಿಲ್ಪಾ ಢವಳಗಿ, ರೇಖಾ ಚಲವಾದಿ ಇದ್ದರು.

Leave a Reply

Your email address will not be published. Required fields are marked *