ಹನೂರು: ಮೊಬೈಲ್ ಬಳಕೆಗೆ ಹೆಚ್ಚಿನ ಒತ್ತು ನೀಡದೆ ಪ್ರತಿಯೊಬ್ಬರೂ ಓದಿನತ್ತ ಗಮನಹರಿಸುವುದರ ಮೂಲಕ ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು ಎಂದು ಬೆಂಗಳೂರು ಇಂಡಿಯಾ ಸುಧರ್ ಫೌಂಡೇಷನ್ ಮುಖ್ಯಸ್ಥ ವಿನೋದ್ ಸಲಹೆ ನೀಡಿದರು.
ಪಟ್ಟಣದ ಜಿ.ವಿ ಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಡಿಯಾ ಸುಧರ್ ಫೌಂಡೇಷನ್ ಹಾಗೂ ಸಿನಪ್ ಸಿಸ್ ಸಂಸ್ಥೆ ವತಿಯಿಂದ ಗುರುವಾರ ತಾಲೂಕಿನ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸುವ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗವನ್ನು ಪಡೆಯಬೇಕಾದರೆ ಓದಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಇದರಿಂದ ಜ್ಞಾರ್ನಾಜನೆ ವೃದ್ಧಿಯಾಗುವುದರ ಜತೆಗೆ ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯ. ಅಲ್ಲದೆ ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ. ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನ ಮುಂದುವರಿದಿದ್ದು, ಶಿಕ್ಷಣಕ್ಕೂ ಅನುಕೂಲವಾಗಿದೆ. ಆದರೆ ಕೆಲವರು ಮೊಬೈಲ್ ಬಳಕೆಗೆ ಹೆಚ್ಚಿನ ಒತ್ತು ನೀಡಿದ್ದು, ಶಿಕ್ಷಣಕ್ಕೆ ಅನುಕೂಲವಾಗುವ ಅಂಶಗಳನ್ನು ಬಿಟ್ಟು ಬೇರೆ ವಿಷಯದ ಕಡೆಗೆ ಗಮನ ಹರಿಸುತ್ತಿದ್ದಾರೆ. ಇದು ದೂರವಾಗಬೇಕು. ಶೈಕ್ಷಣಿಕ ಪ್ರಗತಿಗೆ ಪೂರಕವಾದ ವಿಷಯದತ್ತ ಗಮನಹರಿಸಬೇಕು ಎಂದರು.
ಯೋಧರು ಹಾಗೂ ದೇಶವನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಜು.26 ರಂದು ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಬೇಕು. ಇತ್ತೀಚೆಗೆ ನಡೆದ ಅಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನೆನೆಯಬೇಕು. ಹುತಾತ್ಮರಾದ ಯೋಧರನ್ನು ಸ್ಮರಿಸಬೇಕು. ನೀಡುವ ನೋಟ್‌ಬುಕ್‌ಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸೇವಾ ಕಾರ್ಯ ಶ್ಲಾಘನೀಯ: ಶಿಕ್ಷಕ ಶಾಂತರಾಜು ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಸಲುವಾಗಿ ವಿನೋದ್ ಅವರು ಹಲವು ವರ್ಷದಿಂದ ರಾಜ್ಯದ ವಿವಿಧ ತಾಲೂಕುಗಳಲ್ಲಿ ಶಾಲಾ ಕೊಠಡಿ, ಶೌಚಗೃಹ, ಬಣ್ಣ ಬಳಿಸುವಿಕೆ, ಕಂಪ್ಯೂಟರ್, ನೋಟ್‌ಬುಕ್ ವಿತರಣೆ ಸೇರಿದಂತೆ ಇನ್ನು ಕೆಲವು ಸವಲತ್ತುಗಳನ್ನು ಒದಗಿಸುತ್ತಿದ್ದು, ಶೈಕ್ಷಣಿಕ ಕಾಳಜಿ ಮೆರೆದಿದ್ದಾರೆ. ಕಳೆದ ವರ್ಷ ಹನೂರು ಸೇರಿದಂತೆ ಜಿಲ್ಲೆಯ ತಾಲೂಕುಗಳ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸಿದ್ದರು. ಹಾಗೆಯೇ ನಮ್ಮ ಶಾಲೆಗೆ ಬಣ್ಣ ಬಳಿಯುವಿಕೆ, ಗ್ರಂಥಾಲಯಕ್ಕೆ ಪುಸ್ತಕ ಹಾಗೂ ಕಂಪ್ಯೂಟರ್ ವಿತರಿಸುವುದರ ಮೂಲಕ ಮಕ್ಕಳಿಗೆ ಅನುಕೂಲ ಕಲ್ಪಿಸಿದ್ದರು. ಇದೀಗ ತಾಲೂಕಿನ ಎಲ್ಲ್ಲ ಪ್ರೌಢಶಾಲೆ, 4 ಪ್ರಾಥಮಿಕ ಶಾಲೆ ಹಾಗೂ 2 ಅನುದಾನಿತ ಶಾಲಾ ಮಕ್ಕಳಿಗೆ ಒಟ್ಟು 13,856 ನೋಟ್‌ಬುಕ್‌ಗಳನ್ನು ಉಚಿತವಾಗಿ ವಿತರಿಸುತ್ತಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ವರದಾನವಾಗಿದೆ. ಹಾಗಾಗಿ ಇವರ ಸೇವಾ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಸದ್ಬಳಕೆ ಮಾಡಿಕೊಳ್ಳಿ: ಡಯಟ್ ಉಪನ್ಯಾಸಕ ಪಿ. ಅರಸುಶೆಟ್ಟಿ ಮಾತನಾಡಿ, ವಿನೋದ್ ಅವರು ಶೈಕ್ಷಣಿಕ ಕಾಳಜಿಯನ್ನು ಹೊಂದಿದ್ದು, ಮಕ್ಕಳಿಗೆ ನೋಟ್‌ಬುಕ್ ವಿತರಿಸುತ್ತಿರುವುದು ನಿಜಕ್ಕೂ ಮೆಚ್ಚುಗೆ ಸಂಗತಿ. ಇದರಿಂದ ಮಕ್ಕಳ ಕಲಿಕೆಗೆ ಉತ್ತೇಜನ ನೀಡಿದಂತಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳುವುದರ ಮೂಲಕ ಪಾಠ, ಪ್ರವಚನ ಹಾಗೂ ಓದಿಗೆ ಹೆಚ್ಚಿನ ಒತ್ತು ನೀಡಬೇಕು. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಈ ಮೂಲಕ ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.\
ಶಾಲೆಗೆ ಕೀರ್ತಿ ತರಬೇಕು: ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಮಹಾದೇವ ಮಾತನಾಡಿ, ತಾಲೂಕಿನ ಎಲ್ಲ ಪ್ರೌಢಶಾಲಾ ಮಕ್ಕಳಿಗೆ ವಿನೋದ್ ಅವರು ಉಚಿತವಾಗಿ ನೋಟ್‌ಬುಕ್ ವಿತರಿಸುತ್ತಿರುವುದು ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯಬೇಕು. ಹಾಗೆಯೇ ಶಾಲೆಯಲ್ಲಿ ನುರಿತ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ಆದ್ದರಿಂದ ಓದಿನ ಕಡೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿ ಉತ್ತಮ ಫಲಿತಾಂಶವನ್ನು ಪಡೆದು ಶಾಲೆಗೆ ಕೀರ್ತಿ ತರಬೇಕು ಎಂದರು. ಸಿನಪ್‌ಸಿಸ್ ಸಂಸ್ಥೆಯ ಇಂಜಿನಿಯರ್‌ಗಳಾದ ಅಖಿಲೇಶ್, ಅಭಿಷೇಕ್, ನಿಶ್ಚಿತ್, ಪ್ರಸಾದ್, ಅಭಿ, ನಾಗೇಶ್ವರ್‌ರಾವ್, ಪ್ರಥಿವ್ಸ್, ಶಿಕ್ಷಕರಾದ ಜಿ.ಲೋಕೇಶ್, ಶ್ರೀನಿವಾಸನಾಯ್ಡು, ಪ್ರದೀಪ್‌ಕುಮಾರ್ ಇತರರು ಇದ್ದರು.