ಒತ್ತುವರಿ ತೆರವು ವೇಳೆ ರೈತ ಸಾವು

ರಿಪ್ಪನ್​ಪೇಟೆ: ರೈತರು, ಜನಪ್ರತಿನಿಧಿಗಳ ತೀವ್ರ ವಿರೋಧದ ಮಧ್ಯೆಯೂ ಮಸರೂರು ಗ್ರಾಮದ ಸರ್ವೆ ನಂ.90 ಮತ್ತು 94ರ ಅರಣ್ಯ ಒತ್ತುವರಿ ಜಮೀನು ತೆರವಿಗೆ ಅರಣ್ಯ ಇಲಾಖೆ ಶುಕ್ರವಾರ ಮುಂದಾದಾಗ ರೈತನೊಬ್ಬ ಮೃತಪಟ್ಟಿರುವುದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

ಶುಕ್ರವಾರ ಒತ್ತುವರಿ ತೆರವುಗೊಳಿಸಲು ಅರಣ್ಯ ಇಲಾಖೆ ಭರ್ಜರಿ ತಯಾರಿ ನಡೆಸಿತ್ತು. ಅದೇ ವೇಳೆಗೆ ಮಸರೂರು ಗ್ರಾಮದ ರೈತ ಲಕ್ಷ್ಮಣಪ್ಪ (70) ಸಾವನ್ನಪ್ಪಿದ. ಅರಣ್ಯ ಇಲಾಖೆ ಕಾರ್ಯಾಚರಣೆಯಿಂದಲೇ ಹೆದರಿ ಈತ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆಂದು ಆಕ್ರೋಶಗೊಂಡ ರೈತರು, ಜನಪ್ರತಿನಿಧಿಗಳು ಅರಸಾಳು ಆರ್​ಎಫ್​ಒ ಕಚೇರಿ ಎದುರು ಸಂಜೆ ಶವವಿಟ್ಟು ಪ್ರತಿಭಟನೆ ನಡೆಸಿದರು. ಡಿಸಿ, ಎಸ್ಪಿ ಸ್ಥಳಕ್ಕೆ ಭೇಟಿ ನೀಡಬೇಕೆಂದು ಪಟ್ಟು ಹಿಡಿದರು.

ಏನಿದು ಪ್ರಕರಣ?: ಇತ್ತೀಚೆಗೆ ಅರಸಾಳು ಗ್ರಾಮದ ಸರ್ವೆ ನಂ.28ರ 512 ಎಕರೆ ಪ್ರದೇಶದಲ್ಲಿ ರೈತರಿಗೆ ಮಂಜೂರಾದ 25 ಎಕರೆ ಹೊರತುಪಡಿಸಿ ಉಳಿದ ಜಾಗಕ್ಕೆ ಕಂದಕ ನಿರ್ಮಾಣ ಮಾಡುವಲ್ಲಿ ಅರಣ್ಯ ಇಲಾಖೆ ಸಫಲವಾಗಿತ್ತು. ಕಾರ್ಯಾಚರಣೆ ಮುಂದುವರಿದಿತ್ತಾದರೂ ಲೋಕಸಭಾ ಉಪಚುನಾವಣೆ ವೇಳೆ ಒತ್ತುವರಿ ತೆರವು ವಿರೋಧಿಸಿ ಮಸರೂರು ರೈತರು ಚುನಾವಣೆ ಬಹಿಷ್ಕರಿಸುವುದಾಗಿ ಪ್ರತಿಭಟಿಸಿ ಎಚ್ಚರಿಸಿದ್ದರು. ಹೀಗಾಗಿ ಹೊಸನಗರ ತಹಸೀಲ್ದಾರ್ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ಸೂಚನೆಯಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಚುನಾವಣೆ ನಂತರ ತೆರವು ಕಾರ್ಯಾಚರಣೆ ಪ್ರಾರಂಭಿಸಲು ಮೂರು ಬಾರಿ ಅರಸಾಳು ಆರ್​ಎಫ್​ಒ ಕಾರ್ಯಾಚರಣೆಗೆ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದರೂ ಚುನಾವಣಾ ಫಲಿತಾಂಶ, ದೀಪಾವಳಿ ಹಾಗೂ ಟಿಪ್ಪು ಜಯಂತಿ ಕಾರಣ ನೀಡಿ ಮುಂದೂಡಿದ್ದರು. ಶುಕ್ರವಾರ ಅಗ್ನಿಶಾಮಕ ದಳ, ತುರ್ತು ವಾಹನ ಸಹಿತ ಕಾರ್ಯಾಚರಣೆಗೆ ಅಣಿಗೊಂಡ ಅರಣ್ಯ ಇಲಾಖೆಯ ಸಿರಿಗೆರೆ, ತೀರ್ಥಹಳ್ಳಿ, ಆಗುಂಬೆ ಆರ್​ಎಫ್​ಓಗಳನ್ನೊಳಗೊಂಡು 80 ಸಿಬ್ಬಂದಿ ಜತೆ ತಯಾರಾಗಿತ್ತು. ಪೊಲೀಸ್ ಇಲಾಖೆಯ 4 ಡಿಎಆರ್ ವಾಹನಸಹಿತ ತೀರ್ಥಹಳ್ಳಿ ಡಿವೈಎಸ್​ಪಿ, ಹೊಸನಗರ, ತೀರ್ಥಹಳ್ಳಿ ವೃತ್ತ ನಿರೀಕ್ಷಕರೊಂದಿಗೆ, ಹೊಸನಗರ, ನಗರ, ತೀರ್ಥಹಳ್ಳಿ, ಮಾಳೂರು, ಆಗುಂಬೆ ಪೊಲೀಸ್ ಠಾಣೆಯ ಪಿಎಸ್​ಐ ಅವರನ್ನು ಒಳಗೊಂಡು 120 ಸಿಬ್ಬಂದಿ ಬಳಸಿಕೊಂಡು ಮುಂಜಾನೆಯೇ ಕಾರ್ಯಾಚರಣೆಗೆ ತಯಾರಾಗಿದ್ದರು. ಹೊಸನಗರ ತಹಸೀಲ್ದಾರ್ ಆಗಮನದ ನಿರೀಕ್ಷೆಯಿಂದ ಕಾರ್ಯಾಚರಣೆ ಸಂಜೆಯ ಹೊತ್ತಿಗೆ ವಿಳಂಬವಾಗಿ ಆರಂಭವಾಯಿತು.

ಕಾರ್ಯಾಚರಣೆ ಸ್ಥಗಿತ: ಶುಕ್ರವಾರ ಮಧ್ಯಾಹ್ನ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ ರಿಪ್ಪನ್​ಪೇಟೆಗೆ ಆಗಮಿಸಿ, ತಹಸೀಲ್ದಾರ್, ಡಿವೈಎಸ್​ಪಿ, ಸಿಪಿಐ, ಪಿಎಸ್​ಐ ಜತೆ ರಿಪ್ಪನ್​ಪೇಟೆ ಗ್ರಾಪಂ ಕಚೇರಿಯಲ್ಲಿ 20 ನಿಮಿಷಕ್ಕೂ ಹೆಚ್ಚು ಗುಪ್ತ ಸಮಾಲೋಚನೆ ನಡೆಸಿದರು. ನಂತರ ಪೂರ್ವ ತಯಾರಿಯೊಂದಿಗೆ ಮಸರೂರು ಗ್ರಾಮಕ್ಕೆ ತೆರಳಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಯಾವುದೇ ಮಾತಿಗೆ ಬಗ್ಗದ ಪ್ರತಿಭಟನಾಕಾರರು ರಸ್ತೆಯಲ್ಲೇ ಅಡ್ಡ ಮಲಗಿ ವಾಹನ ತೆರಳದಂತೆ ನಿರ್ಬಂಧಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಬಂದ ಹೊಸನಗರ ತಹಸೀಲ್ದಾರ್ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ಗಡಿ ಗುರುತಿಸಲಾಗುವುದು. ಅಲ್ಲಿಯವರೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಜೈಕಾರ ಹಾಕುವ ಮೂಲಕ ಕಾರ್ಯಾಚರಣೆ ವಿಫಲಗೊಳಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಚಂದ್ರಶೇಖರ್, ಡಿವೈಎಸ್​ಪಿ ಗಣೇಶ ಹೆಗಡೆ, ಎಸಿಎಫ್ ಸತೀಶ್​ಚಂದ್ರ, ಆರ್​ಎಫ್​ಓ ಜಿ.ಹನುಮಂತಯ್ಯ, ಸಿಪಿಐ ಗೋಖಲೆ ಇನ್ನಿತರರಿದ್ದರು.

ನಂತರ ಆಗಿದ್ದೇನು?: ಒತ್ತುವರಿ ತೆರವು ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಂದು ಹೇಳಲಾದ ಮಸರೂರು ಗ್ರಾಮದ ಲಕ್ಷ್ಮಣಪ್ಪ (70) ಹೃದಯಾಘಾತದಿಂದ ನಿಧನರಾದರು. ಈತ ಮಧ್ಯಾಹ್ನ ಊಟಕ್ಕೆ ಹೋದ ವೇಳೆ ಮನೆಯಲ್ಲಿ ಹೃದಯಾಘಾತವಾಗಿತ್ತು. ಬಳಿಕ ಈತನ ಮನೆಗೆ ಭೇಟಿ ನೀಡಿ ಹಲವು ಮಂದಿ ಹೋಗಿ ನೋಡಿಕೊಂಡು ಬಂದಿದ್ದರು. ಆದರೆ ಸಂಜೆ ವೇಳೆಗೆ ಈತ ಅರಣ್ಯ ಇಲಾಖೆ ಕಾರ್ಯಾಚರಣೆಯಿಂದಲೇ ಹೆದರಿ ಸಾವನ್ನಪ್ಪಿದ ಎಂದು ಹೇಳಿ ಶವವನ್ನು ಅರಸಾಳು ಆರ್​ಎಫ್​ಒ ಕಚೇರಿ ಎದುರು ಇಟ್ಟು ಗ್ರಾಮಸ್ಥರು ಪ್ರತಿಭಟನೆಗೆ ಇಳಿದರು. ಸ್ಥಳಕ್ಕೆ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಮಾಜಿ ಶಾಸಕ ಸ್ವಾಮಿರಾವ್, ಜಿಪಂ ಸದಸ್ಯೆ ಶ್ವೇತಾ ಬಂಡಿ, ಎಪಿಎಂಸಿ ಅಧ್ಯಕ್ಷ ಈಶ್ವರಪ್ಪ, ತಾಪಂ ಅಧ್ಯಕ್ಷ ವಾಸಪ್ಪ ಗೌಡ ಆಗಮಿಸಿ ಅರಣ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು. ಆರ್​ಎಫ್​ಒ ವಿರುದ್ಧ ಕೇಸು ದಾಖಲಿಸಬೇಕೆಂದು ಒತ್ತಾಯಿಸಿದರು. ರಾತ್ರಿಯವರೆಗೆ ಹೋರಾಟ ಮುಂದುವರಿದೇ ಇತ್ತು. ಆದರೆ ರೈತನ ಸಾವಿನ ಬಗ್ಗೆ ರಿಪ್ಪನ್​ಪೇಟೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.