More

    ಚಿರತೆ ಸೆರೆಗೆ ತುರ್ತು ಕ್ರಮ

    ಕೊಳ್ಳೇಗಾಲ: ತಾಲೂಕಿನ ಚೆಲುವನಹಳ್ಳಿ ಗ್ರಾಮದ ಕೆಲ ಜಮೀನುಗಳಲ್ಲಿ ನಾಲ್ಕು ದಿನಗಳಿಂದ ಕಾಣಿಸಿಕೊಳ್ಳುತ್ತಿರುವ ಚಿರತೆ ಸೆರೆಗೆ ತುರ್ತು ಕ್ರಮವಹಿಸುವುದಾಗಿ ಮಂಗಳವಾರ ಕೊಳ್ಳೇಗಾಲ ಬಫರ್ ವಲಯದ ಆರ್‌ಎಫ್‌ಒ ಮಹದೇವಸ್ವಾಮಿ ಹೇಳಿದರು.

    ಗ್ರಾಮದ ನಟರಾಜು ಹಾಗೂ ಬಸವರಾಜು ಅವರಿಗೆ ಸೇರಿದ 2 ಮೇಕೆಗಳು ಡಿ.26ರಂದು ಚಿರತೆ ದಾಳಿಗೆ ಬಲಿಯಾಗಿತ್ತು. ಇದರಿಂದ ಗ್ರಾಮಸ್ಥರು ಗಾಬರಿಗೊಂಡಿದ್ದರು. ಈ ನಡುವೆ ಕಳೆದ 4 ದಿನಗಳಿಂದ ಇದೇ ಜಮೀನುಗಳ ಸಾಲಿನಲ್ಲಿ ಚಿರತೆ ಕೆಲ ರೈತರಿಗೆ ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡಿರುವ ಗ್ರಾಮಸ್ಥರು ತಕ್ಷಣ ಚಿರತೆ ಸೆರೆ ಹಿಡಿಯುವಂತೆ ಬಫರ್ ವಲಯ ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದರು.

    ಇದೇ ರೀತಿ ಚೆಲುವನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಧನಗೆರೆ ಗ್ರಾಮದ ಜಮೀನುಗಳಲ್ಲಿ ಚಿರತೆ ಹೆಜ್ಜೆಗಳು ಪತ್ತೆಯಾಗಿವೆ. ಮುಂಜಾನೆ ಮತ್ತು ಸಂಜೆ ವೇಳೆ ಕಾಣಿಸಿಕೊಳ್ಳುವ ಚಿರತೆ ಗ್ರಾಮಸ್ಥರ ನಿದ್ದೆಗೆಡಿಸಿದೆ. ಡಿ.10ರಿಂದ ಸತ್ತೇಗಾಲ ಗ್ರಾಮದ ಪಕ್ಕದಲ್ಲಿರುವ ಯಡಕುರಿಯಾ ದ್ವೀಪ ಗ್ರಾಮದ ಕಾವೇರಿ ನದಿ ಪಾತ್ರದ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ನಾಗೇಂದ್ರಸ್ವಾಮಿ ಅವರಿಗೆ ಸೇರಿದ 2 ಮೇಕೆ ಹಾಗೂ 1 ಬೀದಿ ನಾಯಿ, 1 ಕೋಳಿಯನ್ನು ತಿಂದಿತ್ತು. ಇದರಿಂದ ಗ್ರಾಮಸ್ಥರು ಗಾಬರಿಗೊಂಡು ಚಿರತೆ ಸೆರೆಗೆ ಅರಣ್ಯ ಇಲಾಖಾಧಿಕಾರಿಗಳನ್ನು ಆಗ್ರಹಿಸಿದ್ದರು.

    ಡಿ.17ರಂದು ಮೇಕೆ ಬೇಟೆಯಾಡಿದ ಕಾವೇರಿ ನದಿ ಪಾತ್ರದಲ್ಲಿ ಅರಣ್ಯ ಇಲಾಖೆಯಿಂದ ಬೋನು ಇರಿಸಿ ಸೆರೆಗೆ ತಂತ್ರ ರೂಪಿಸಲಾಗಿದೆ. ಆದರೂ ಇನ್ನೂ ಚಿರತೆ ಬೋನಿಗೆ ಬಿದ್ದಿಲ್ಲ. ಬದಲಾಗಿ, ಅದೇ ಚಿರತೆ ಇದೀಗ ಸತ್ತೇಗಾಲ ಗ್ರಾಮಕ್ಕೆ ಹೊಂದಿಕೊಂಡಿರುವ ಧನಗೆರೆ ಮತ್ತು ಚೆಲುವನಹಳ್ಳಿ ಗ್ರಾಮದ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಶಂಕಿಸಲಾಗಿದೆ. ಧನಗೆರೆ ಮತ್ತು ಚೆಲುವನಹಳ್ಳಿ ಗ್ರಾಮಸ್ಥರು ಯಡಕುರಿಯಾ ಗ್ರಾಮದಲ್ಲಿ ಚಿರತೆ ಸೇರೆಗೆ ಬೋನು ಇರಿಸಿರುವ ಮಾದರಿಯಲ್ಲಿ ನಮ್ಮಲ್ಲಿಯೂ ಬೋನು ತಂದಿಡುವಂತೆ ಒತ್ತಾಯಿಸಿದ್ದಾರೆ.

    ಜಾಗೃತಿ ಮೂಡಿಸಿದ ಆರ್‌ಎಫ್‌ಒ: ಚಿರತೆ ದಾಳಿ ಆತಂಕದಲ್ಲಿರುವ ಚೆಲುವನಹಳ್ಳಿ ಗ್ರಾಮಸ್ಥರನ್ನು ಮಂಗಳವಾರ ಬಫರ್ ವಲಯ ಅರಣ್ಯಾಧಿಕಾರಿ ಮಹದೇವಸ್ವಾಮಿ ಭೇಟಿ ಮಾಡಿ ಚಿರತೆ ಸೆರೆ ಹಿಡಿಯುವುದಾಗಿ ಹೇಳಿದರು.

    ಬಳಿಕ ಡಿ.26ರಂದು ಮೇಕೆಗಳನ್ನು ಚಿರತೆ ಬೇಟೆಯಾಡಿದ್ದ ಸ್ಥಳ ಪರಿಶೀಲಿಸಿದರಲ್ಲದೆ, ಜಮೀನಿನ ಸುತ್ತಮುತ್ತ ಚಿರತೆ ಹೆಜ್ಜೆ ಗುರುತು ಪತ್ತೆ ಹಚ್ಚಿದರು. ನಂತರ ಗ್ರಾಮಸ್ಥರಲ್ಲಿ ಚಿರತೆ ಚಟುವಟಿಕೆ ಕುರಿತು ಜಾಗೃತಿ ಮೂಡಿಸಿದರು. ಚಿರತೆ ಕೇವಲ ನಾಯಿ ಮತ್ತು ಮೇಕೆಗಳನ್ನು ಬೇಟೆಯಾಡುತ್ತದೆ. ಸಾಮಾನ್ಯವಾಗಿ ಮನುಷ್ಯರ ಮೇಲೆ ಎರಗುವುದಿಲ್ಲ. ಮನುಷ್ಯ ತೊಂದರೆ ನೀಡಿದರೆ ಅಥವಾ ಗಾಬರಿಗೊಳಿಸಿದ ಸಂದರ್ಭದಲ್ಲಿ ಮಾತ್ರ ಮೇಲೆರಗುತ್ತದೆಯೇ ಹೊರತು ಕೊಲ್ಲುವ ಮತ್ತು ಎಳೆದೊಯ್ಯುವ ಸ್ವಭಾವ ಇಲ್ಲ. ಹಾಗಾಗಿ ಯಾರೂ ಭಯ ಬೀಳುವುದು ಬೇಡ. ಸಂಜೆಯೇ ಹನೂರು ವಲಯ ಅರಣ್ಯ ಪ್ರದೇಶದಿಂದ 2 ಬೋನು ತರಿಸಿ, ಧನಗೆರೆಯ ಸಿದ್ದಮಲ್ಲಪ್ಪ ಅವರ ಜಮೀನು ಮತ್ತು ಚೆಲುವನಹಳ್ಳಿ ಗ್ರಾಮದ ಕಬ್ಬಿನ ಗದ್ದೆ ಬಳಿ ಈಗಾಗಲೇ ಓಡಾಡಿರುವ ಸ್ಥಳದಲ್ಲಿ ಬೋನು ಇರಿಸುವುದಾಗಿ ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನಪ್ಪ, ಬಸವಣ್ಣ, ನಟರಾಜು ಅವರಿಗೆ ಹೇಳಿದರು.

    ಬಫರ್ ವಲಯದ ಆರ್‌ಎಫ್‌ಒ ಮಹದೇವಸ್ವಾಮಿ, ಉಪಅರಣ್ಯಾಧಿಕಾರಿ ಕೃಷ್ಣಪ್ಪ, ಗಾರ್ಡ್‌ಗಳಾದ ಲೋಹಿತ್, ಈಶ್ವರಪ್ಪ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts