More

    ಸನಾತನ ಧರ್ಮದಲ್ಲಿ ಸಾಕಾರ, ನಿರಾಕಾರ ಉಪಾಸನೆ

    ಸನಾತನ ಧರ್ಮದಲ್ಲಿ ಸಾಕಾರ, ನಿರಾಕಾರ ಉಪಾಸನೆಸನಾತನ ಧರ್ಮ ಹೇಳುವಂತೆ, ಒಂದು ಕಲ್ಲು ಕೂಡ ಪರಮಾತ್ಮನೇ; ಆದರೆ ಪರಮಾತ್ಮನು ಕೇವಲ ಕಲ್ಲು ಅಲ್ಲ. ಸಾಕಾರ ಹಾಗೂ ನಿರಾಕಾರಗಳೆರಡರ ಸತ್ಯದರ್ಶನವನ್ನು ಮಾಡಿದ ಮಹಾನುಭಾವರು ಈ ಎರಡು ಪಥಗಳನ್ನೂ ಅಂಗೀಕರಿಸುತ್ತಾರೆ. ಸನಾತನ ಧರ್ಮ ಅಧ್ಯಾತ್ಮ ಪಥದ ಯಾತ್ರಿಕನನ್ನು ಸಾಕಾರದಿಂದ ಕ್ರಮಕ್ರಮೇಣ ನಿರಾಕಾರದೆಡೆಗೆ ನಡೆಸುತ್ತದೆ.

    ಭಗವಂತನನ್ನು ಸಾಕಾರವಾಗಿ ಪೂಜಿಸಬೇಕೋ ಅಥವಾ ನಿರಾಕಾರವನ್ನು ಆರಾಧಿಸಬೇಕೋ ಎಂಬ ವಿಷಮ ಅನಾದಿಕಾಲದಿಂದಲೂ ರ್ಚಚಿಸಲ್ಪಡುತ್ತಿದೆ. ಸನಾತನ ಧರ್ಮವನ್ನು ಅನುಸರಿಸುವ ಜನಸಾಮಾನ್ಯರಿಂದ ಹಿಡಿದು ಪ್ರಕಾಂಡ ಪಂಡಿತರವರೆಗೆ ಈ ಕುರಿತಾಗಿ ವಾದ-ವಿವಾದಗಳು ನಡೆಯುತ್ತಲೇ ಇವೆ. ಈ ಬಗ್ಗೆ ಸನಾತನ ಧರ್ಮದ ಗ್ರಂಥಗಳು ಏನು ಹೇಳುತ್ತವೆಯೆಂಬುದನ್ನು ತಿಳಿದುಕೊಳ್ಳೋಣ.

    ರೂಪ-ನಾಮಗಳನ್ನು ಹೊಂದಿರುವ ಮಾನವರಿಗೆ ರೂಪ-ನಾಮಗಳನ್ನು ಹೊಂದಿರುವ ಭಗವಂತನನ್ನು ಗ್ರಹಿಸುವುದು ಸುಲಭಸಾಧ್ಯ. ರೂಪ-ನಾಮಗಳಿಗೆ ಸೀಮಿತರಾದವರಿಗೆ ಯಾವುದೇ ಆಕಾರವಿಲ್ಲದ ನಿರಾಕಾರ ಭಗವಂತನ ಕಲ್ಪನೆಯನ್ನು ತಿಳಿದುಕೊಳ್ಳುವುದು ಕಷ್ಟಕರ. ಸನಾತನ ಧರ್ಮ ಹೇಗೆ ವ್ಯವಹಾರ್ಯ ಹಾಗೂ ನಮ್ಯವೆಂಬುದನ್ನು ಹಿಂದಿನ ಅನೇಕ ಲೇಖನಗಳಲ್ಲಿ ತಿಳಿದುಕೊಂಡಿದ್ದೇವೆ; ಸರ್ವರಿಗೂ ಅನ್ವಯವಾಗುವ ಸುಲಭ ಸಾಧನಾ-ವಿಧಾನಗಳನ್ನು ಅದು ಒಳಗೊಂಡಿದೆ. ಆದ್ದರಿಂದ ಸನಾತನ ಧರ್ಮ ಸರ್ವರಿಗೂ ಸಾಕಾರ ಹಾಗೂ ನಿರಾಕಾರಗಳ ನಡುವೆ ತಮಗೆ ಪ್ರಿಯವಾದುದನ್ನು ಆರಿಸಿಕೊಳ್ಳಲು ಸ್ವಾತಂತ್ರ್ಯವನ್ನು ಕೊಡುತ್ತದೆ.

    ಭಕ್ತಿಯೋಗದಲ್ಲಿ ಮನೋಗೊಂದಲಕ್ಕೀಡಾದ ಅರ್ಜುನನು, ‘ಸಾಕಾರ ರೂಪಿ ಭಗವಂತನನ್ನು ಆರಾಧಿಸುವ ಭಕ್ತನು ಶ್ರೇಷ್ಠನೋ ಅಥವಾ ನಿರಾಕಾರ ಭಗವಂತನನ್ನು ಉಪಾಸನೆ ಮಾಡುವ ಭಕ್ತನು ಶ್ರೇಷ್ಠನೋ?’ಎಂದು ಭಗವಾನ್ ಶ್ರೀಕೃಷ್ಣನನ್ನು ಕೇಳುತ್ತಾನೆ. ಇದಕ್ಕೆ ಉತ್ತರವಾಗಿ ಗೀತಾಚಾರ್ಯನು, ‘ಯಾರು ನನ್ನಲ್ಲಿಯೇ ಮನಸ್ಸನ್ನು ಇಟ್ಟು ನಿತ್ಯಯುಕ್ತರಾಗಿ ಪರಮ ಶ್ರದ್ಧೆಯಿಂದ ಉಪಾಸನೆ ಮಾಡುತ್ತಾರೆಯೋ ಅವರು ಶ್ರೇಷ್ಠರು ಎಂದು ನನ್ನ ಅಭಿಮತ. ಆದರೆ ಯಾರು ಇಂದ್ರಿಯಗಳನ್ನು ನಿಗ್ರಹಿಸಿ ಎಲ್ಲ ಕಾಲದಲ್ಲಿಯೂ ಸಮ-ಬುದ್ಧಿಯುಳ್ಳವರಾಗಿ ಸರ್ವಜೀವಿಗಳ ಹಿತದಲ್ಲಿ ನಿರತರಾಗಿ, ನಿರ್ದೇಶಿಸಲು ಅಶಕ್ಯವೂ, ಅವ್ಯಕ್ತವೂ, ಸರ್ವವ್ಯಾಪಿಯೂ, ಚಿಂತನೆಗೆ ಅಸಾಧ್ಯವೂ, ಕೂಟಸ್ಥವೂ, ಶಾಶ್ವತವೂ ಹಾಗೂ ಜನ್ಮರಹಿತವೂ ಆದ ಅಕ್ಷರವನ್ನು (ನಿರಾಕಾರ) ಉಪಾಸನೆ ಮಾಡುತ್ತಾರೆಯೋ ಅವರೂ ನನ್ನನ್ನೇ ಹೊಂದುತ್ತಾರೆ’ ಎಂದು ಹೇಳುತ್ತಾನೆ (ಭಗವದ್ಗೀತೆ 12ನೇ ಅಧ್ಯಾಯ ಭಕ್ತಿಯೋಗದಲ್ಲಿ 2, 3 ಮತ್ತು 4 ನೇ ಶ್ಲೋಕಗಳು). ಮುಂದುವರಿದು, ‘ಅವ್ಯಕ್ತ ಸ್ವರೂಪದಲ್ಲಿ ಆಸಕ್ತರಾದವರು ಹೆಚ್ಚು ಕ್ಲೇಶಗಳನ್ನು ಎದುರಿಸುತ್ತಾರೆ. ಏಕೆಂದರೆ ದೇಹಧಾರಿಗಳಾದ ಮಾನವರಿಗೆ ರೂಪರಹಿತವಾದ ಅವ್ಯಕ್ತದ ಉಪಾಸನೆ ಬಹಳ ಕಷ್ಟ’ ಎಂದು ತನ್ನ ನಿಶ್ಚಿತವಾದ ಅಭಿಮತವನ್ನು ವ್ಯಕ್ತಪಡಿಸುತ್ತಾನೆ (5ನೇ ಶ್ಲೋಕ). ಆದರೆ ಸಾಕಾರ-ನಿರಾಕಾರಗಳ ನಡುವಿನ ಆಯ್ಕೆಯ ಸ್ವಾತಂತ್ರ್ಯ ಭಕ್ತನದೇ. ‘ಯಾವ ಭಕ್ತನು ಯಾವ ರೂಪಗಳನ್ನು ಭಕ್ತಿ-ಶ್ರದ್ಧೆಗಳಿಂದ ಅರ್ಚಿಸಲು ಇಚ್ಛಿಸುತ್ತಾನೆಯೋ ಆವನಿಗೆ ಆಯಾ ರೂಪಗಳಲ್ಲೇ ಭಕ್ತಿ-ವಿಶ್ವಾಸಗಳನ್ನು ಸ್ಥಿರಗೊಳಿಸುತ್ತೇನೆ’ ಎಂಬ ಆಶ್ವಾಸನೆಯನ್ನು ಶ್ರೀಕೃಷ್ಣನು ನೀಡಿದ್ದಾನೆ (7ನೇ ಅಧ್ಯಾಯ- ಜ್ಞಾನ ವಿಜ್ಞಾನ ಯೋಗ, 21ನೇ ಶ್ಲೋಕ).

    ಸನಾತನ ಧರ್ಮ ಅಧ್ಯಾತ್ಮ ಪಥದ ಯಾತ್ರಿಕನನ್ನು ಸಾಕಾರದಿಂದ ಕ್ರಮಕ್ರಮೇಣ ನಿರಾಕಾರದೆಡೆಗೆ ನಡೆಸುತ್ತದೆ. ಪ್ರಾರಂಭದಲ್ಲಿ ಅವನು ತನಗೆ ಪ್ರಿಯವಾದ ಯಾವುದೇ ಪರಮಾತ್ಮನ ರೂಪ-ನಾಮಗಳನ್ನು ಆರಿಸಿಕೊಳ್ಳಬಹುದು. ಉದಾಹರಣೆಗೆ, ಈಗ ತಾನೇ ತನ್ನ ಕಾಲುಗಳ ಮೇಲೆ ನಿಂತು ನಡೆಯಲು ಕಲಿಯುತ್ತಿರುವ ಮಗುವಿಗೆ ಇತರರ ಸಹಾಯ ಬೇಕು; ನಡೆಯುವುದನ್ನು ಕಲಿತ ನಂತರ ಯಾರ ಸಹಾಯವೂ ಅದಕ್ಕೆ ಬೇಕಾಗಿಲ್ಲ. ಅದೇ ರೀತಿಯಲ್ಲಿ ಭಕ್ತನು ಪ್ರಾರಂಭದಲ್ಲಿ ರೂಪ-ನಾಮಗಳ ಸಹಾಯದಿಂದ ಮುನ್ನಡೆದು ಅಂತಿಮವಾಗಿ ನಿರಾಕಾರ ಸ್ವರೂಪವನ್ನು ಅರಿಯಲು ಶಕ್ತನಾಗುತ್ತಾನೆ. ಭಕ್ತಿಮಾರ್ಗವನ್ನು ಆಶ್ರಯಿಸಿ ಗುರಿ ಮುಟ್ಟಿದ ಬಹುತೇಕ ಸಂತರು ಸಾಕಾರ ಸ್ವರೂಪದ ಉಪಾಸನೆಯಿಂದ ಪ್ರಾರಂಭಿಸಿ, ಕೊನೆಯಲ್ಲಿ ತಮ್ಮ ಇಷ್ಟದೇವತೆಯ ಸತ್ಯಸ್ವರೂಪ ನಿರಾಕಾರ ಬ್ರಹ್ಮವೇ ಎಂದು ಘೊಷಿಸಿದ್ದಾರೆ. ಆಧುನಿಕ ಕಾಲದಲ್ಲಿ ಶ್ರೀರಾಮಕೃಷ್ಣ ಪರಮಹಂಸರು ಇಂತಹ ಒಂದು ಉಜ್ವಲ ನಿದರ್ಶನ. ರಾಮಕೃಷ್ಣರು ಕಾಳಿಮಾತೆಯ ಅಪ್ರತಿಮ ಭಕ್ತರು. ತೋತಾಪುರಿಯವರು ನಿರಾಕಾರ ಉಪಾಸಕರು. ಅವರು ರಾಮಕೃಷ್ಣರನ್ನು ವಿಗ್ರಹಾರಾಧನೆಯ ಕುರಿತಾಗಿ ಪ್ರಶ್ನಿಸಿದಾಗ, ಯಾವುದೇ ಅಂಜುಅಳುಕಿಲ್ಲದೆ, ‘ಮಾತೆಯು ನಿರಾಕಾರ ಪರಬ್ರಹ್ಮದ ವ್ಯಕ್ತ ರೂಪವೇ’ ಎಂದು ಹೇಳಿದ್ದಾರೆ. ಒಂದು ಉದಾಹರಣೆ ಕೊಡುತ್ತ, ‘ಸುರುಳಿ ಸುತ್ತಿಕೊಂಡು ಒಂದೆಡೆಯಲ್ಲಿಯೇ ಕುಳಿತಿರುವ ಸರ್ಪವಾಗಲೀ, ಚಲಿಸುತ್ತಿರುವ ಸರ್ಪವಾಗಲೀ ಎರಡೂ ಒಂದೇ’ ಎಂದು ಹೇಳುತ್ತಾರೆ. ಒಂದೆಡೆ ಕುಳಿತ ಸರ್ಪ ನಿರಾಕಾರ ಬ್ರಹ್ಮದ ಸಂಕೇತವಾದರೆ, ಚಲಿಸುತ್ತಿರುವ ಸರ್ಪ ಸಾಕಾರ ರೂಪದ ಪ್ರತೀಕವಾಗಿದೆ. ಅದೈ ್ವ ಸಿದ್ಧಾಂತದ ಅನುಪಮ ಪ್ರತಿಪಾದಕರಾದ ಶ್ರೀಆದಿ ಶಂಕರಾಚಾರ್ಯರು ಎಂಟನೆಯ ಶತಮಾನದಲ್ಲಿ ಅದೈ ್ವ ಸಿದ್ಧಾಂತದ ಬಗ್ಗೆ ಅಮೂಲ್ಯ ಗ್ರಂಥಗಳನ್ನು ರಚಿಸಿರುವುದು ಮಾತ್ರವಲ್ಲದೆ, ಭಗವಂತನ ಅನೇಕ ರೂಪಗಳಾದ ದೇವ-ದೇವಿಯರ ಉಪಾಸನೆಗೆ ನೆರವಾಗುವ ಉತ್ಕಟ ಭಕ್ತಿಪೂರ್ಣ ಸ್ತೋತ್ರಗಳನ್ನೂ ಜಗತ್ತಿಗೆ ನೀಡಿದ್ದಾರೆ.

    ಪ್ರಬಲ ದೇಹಾಭಿಮಾನದಿಂದ ಕೂಡಿದ ಮಾನವರು ಕ್ರಮೇಣ ಅದರಿಂದ ಬಿಡಿಸಿಕೊಳ್ಳಬೇಕಾದರೆ, ಮೊದಲಿಗೆ ಒಲವನ್ನು ತಮ್ಮ ರೂಪ-ನಾಮಗಳಿಂದ ಭಗವಂತನ ಒಂದು ರೂಪದೆಡೆಗೆ ತಿರುಗಿಸಬೇಕು. ತದನಂತರ ರೂಪ-ನಾಮಗಳಿಗಾಚಿನ ಅವ್ಯಕ್ತ ಸ್ವರೂಪವನ್ನು ಅರಿಯಬಹುದು. ಇದು ಹೇಗೆಂದರೆ ನಮ್ಮ ಪಾದವನ್ನು ಹೊಕ್ಕಿರುವ ಒಂದು ಮುಳ್ಳನ್ನು ತೆಗೆಯಲು ಇನ್ನೊಂದು ಮುಳ್ಳನ್ನು ಉಪಯೋಗಿಸಿ, ಕೊನೆಗೆ ಎರಡನ್ನೂ ನಾವು ತೊರೆಯುವಂತೆ. ದೇಹಾಭಿಮಾನದಿಂದ ಉಂಟಾಗಿರುವ ಅಹಂಕಾರ-ಮಮಕಾರಗಳನ್ನು ಗೆಲ್ಲಲು ಭಕ್ತನು ತನ್ನ ದೃಷ್ಟಿಯನ್ನು ಭಗವಂತನ ಒಂದು ರೂಪದಲ್ಲಿ ಮೊದಲು ನೆಡಬೇಕಾಗುತ್ತದೆ. ಸಾಧನೆಯಲ್ಲಿ ಮುಂದುವರಿದಂತೆ ಅವನಿಗೆ ಅಂತ್ಯದಲ್ಲಿ ನಿರಾಕಾರ ಭಗವಂತನ ಅರಿವುಂಟಾಗುತ್ತದೆ. ಹಲವರು ಸಾಕಾರೋಪಾಸನೆಯಿಂದ ನಿರಾಕಾರದೆಡೆಗೆ ನಡೆಯುವ ಈ ಪಥವನ್ನು ಅರ್ಥಹೀನವೆಂದು ಅಪಹಾಸ್ಯ ಮಾಡುತ್ತಾರೆ. ಇಂತಹವರಿಗೆ ಸನಾತನ ಧರ್ಮದ ಆಳ-ವೈಶಾಲ್ಯಗಳು ಅರ್ಥವಾಗಿಲ್ಲವೆಂದೇ ಹೇಳಬೇಕು. ಒಮ್ಮೆ ಸ್ವಾಮಿ ವಿವೇಕಾನಂದರು ತಮ್ಮ ಪರಿವ್ರಾಜಕ ಜೀವನದಲ್ಲಿ ವಿಗ್ರಹಾರಾಧನೆಯನ್ನು ಖಂಡಿಸುತ್ತಿದ್ದ ಒಬ್ಬ ರಾಜನನ್ನು ಸಂಧಿಸುತ್ತಾರೆ. ಆ ರಾಜನು, ಭಗವಂತನ ಸಾಕಾರೋಪಾಸನೆ ಮೂಢನಂಬಿಕೆಯೆಂದು ಹೇಳಿದಾಗ, ವಿವೇಕಾನಂದರು ಚಮತ್ಕಾರಿಕವಾಗಿ ಅದಕ್ಕೆ ಪ್ರತ್ಯುತ್ತರ ಕೊಡುತ್ತಾರೆ. ಅಲ್ಲಿದ್ದ ಮಂತ್ರಿಗೆ ಅಲ್ಲಿಯೇ ಗೋಡೆಯನ್ನು ಅಲಂಕರಿಸಿದ ರಾಜನ ಚಿತ್ರದ ಮೇಲೆ ಉಗುಳಲು ಹೇಳುತ್ತಾರೆ. ಮಂತ್ರಿ ಭಯದಿಂದ ಹಿಂಜರಿದ; ರಾಜನಾದರೋ ಕ್ರೋಧಾವೃತನಾದ. ಆಗ ವಿವೇಕಾನಂದರು, ‘ನಿಮಗೆ ನಾನು ರಾಜನ ಮೇಲೆ ಉಗುಳಲು ಹೇಳಲಿಲ್ಲ. ಕೇವಲ ಗೋಡೆಯ ಮೇಲಿರುವ ಒಂದು ಕಾಗದದ ಹಾಳೆಯ ಮೇಲೆ ಉಗುಳಲು ಹೇಳಿದ್ದಷ್ಟೇ!’ ಎಂದು ನಗುತ್ತಲೇ ಹೇಳಿದರು. ಆಗ ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ಗೋಡೆಯ ಮೇಲಿನ ರಾಜನ ಚಿತ್ರವು ರಾಜನ ಪ್ರತೀಕವಾಗಿದ್ದು, ಅದರ ಮೇಲೆಯೂ ಗೌರವ ಭಾವನೆ ಸಹಜವಾಗಿ ಉಂಟಾಗುತ್ತದೆ. ಅದೇ ರೀತಿಯಲ್ಲಿ ಭಗವಂತನ ಒಂದು ರೂಪ ನಿರಾಕಾರ ಸ್ವರೂಪನಾದ ಅವನನ್ನು ನೆನಪು ಮಾಡಿಕೊಡುತ್ತದೆ.

    ಇಂತಹ ಪ್ರತೀಕೋಪಾಸನೆ ಸನಾತನ ಧರ್ಮದಲ್ಲಿ ಮಾತ್ರವಲ್ಲದೆ, ಜಗತ್ತಿನ ಬಹುತೇಕ ಪ್ರಾಚೀನ ಸಂಸ್ಕೃತಿಗಳಲ್ಲಿ ಕಂಡುಬರುತ್ತವೆ. ಇನ್ನೊಂದು ನಿದರ್ಶನವೆಂದರೆ, ಒಂದು ದೇಶಕ್ಕೆ ಪ್ರತೀಕವಾದ ರಾಷ್ಟ್ರಧ್ವಜದೆಡೆಗೆ ಅಗೌರವ ತೋರಿದರೆ ಅದನ್ನು ರಾಷ್ಟ್ರದೆಡೆಗಿನ ಅಗೌರವವೆಂದೇ ಭಾವಿಸುತ್ತಾರೆ. ದೇಗುಲಗಳಲ್ಲಿ ದೇವ-ದೇವಿಯರ ವಿಗ್ರಹಗಳನ್ನು ಪ್ರತಿಷ್ಠಾಪಿಸುವಾಗ ‘ಪ್ರಾಣ-ಪ್ರತಿಷ್ಠೆ’ಯೆಂಬ ಕ್ರಿಯೆಯನ್ನು ಶ್ರದ್ಧೆಯಿಂದ ಮಾಡುತ್ತಾರೆ. ನಂತರ ಈ ವಿಗ್ರಹಗಳನ್ನು ನಿರಾಕಾರಸ್ವರೂಪನಾದ ಪರಮಾತ್ಮನ ಪ್ರತಿರೂಪಗಳೆಂದೇ ಪೂಜಿಸುತ್ತಾರೆ. ಶ್ರೇಷ್ಠ ತರಬೇತಿ ಪಡೆದ ಅರ್ಚಕರು ಪ್ರತಿನಿತ್ಯ ಈ ವಿಗ್ರಹಗಳಿಗೆ ಷೋಡಶೋಪಚಾರ ಪೂಜೆಯನ್ನು ಮಾಡುತ್ತಾರೆ. ಇಂತಹ ದೇಗುಲಗಳಿಗೆ ಹೋದಾಗ ಭಕ್ತರಿಗೆ ಅಂತರಂಗದಲ್ಲಿಯೇ ಇರುವ ಪರಮಾತ್ಮನೊಂದಿಗೆ ಅನುಸಂಧಾನ ಮಾಡಲು ಸಹಾಯವಾಗುತ್ತದೆ. ಇಂತಹ ದೇವಾಲಯಗಳು ನಮಗೆ ಅಂತರಂಗದ ಪಯಣಕ್ಕೆ ದಾರಿ ತೋರಿಸುವ ನಾಮಫಲಕಗಳಿದ್ದಂತೆ. ಆದರೆ ಕಾಲಕ್ರಮೇಣ ಇಂತಹ ಆಳವಾದ ಆರಾಧನೆಯ ಪರಿಕಲ್ಪನೆ ಮಾಯವಾಗಿ ಪೂಜೆ-ಪುನಸ್ಕಾರಗಳು ಶುಷ್ಕ ಬಾಹ್ಯಾಚರಣೆಗಳಾಗಿ ಮಾರ್ಪಟ್ಟಿರುವುದು ದುರದೃಷ್ಟಕರ. ಇದು ಹೇಗೆಂದರೆ, ಪಾದವನ್ನು ಹೊಕ್ಕ ಒಂದು ಮುಳ್ಳನ್ನು ಇನ್ನೊಂದು ಮುಳ್ಳಿನ ಸಹಾಯದಿಂದ ತೆಗೆಯಲು ಹೋಗಿ ಎರಡು ಮುಳ್ಳುಗಳೂ ಪಾದದಲ್ಲಿ ಸಿಕ್ಕಿಹಾಕಿಕೊಂಡಂತೆ! ಹೀಗೆ ದೇವ-ಮಂದಿರಗಳು ಕೇವಲ ನ್ಯಾಯಾಲಯಗಳಾಗಿ ಮಾರ್ಪಟ್ಟು, ಪರಮಾತ್ಮನು ಕೇವಲ ವರ ಅಥವಾ ಶಿಕ್ಷೆಯನ್ನು ನೀಡುವ ನ್ಯಾಯಾಧೀಶನಾಗಿ ಮಾರ್ಪಟ್ಟಿರುವುದು ವಿಪರ್ಯಾಸವೇ ಸರಿ.

    ಸನಾತನ ಧರ್ಮ ಹೇಳುವಂತೆ, ಒಂದು ಕಲ್ಲು ಕೂಡ ಪರಮಾತ್ಮನೇ; ಆದರೆ ಪರಮಾತ್ಮನು ಕೇವಲ ಕಲ್ಲು ಅಲ್ಲ. ಗತಿಸಿಹೋದ ತಂದೆಯ ಭಾವಚಿತ್ರ ತಂದೆಯ ಸಂಕೇತ ಮಾತ್ರ; ಆದರೆ ತಂದೆಯೆಂದರೆ ಕಾಗದದ ಹಾಳೆ ಮೇಲೆ ಮುದ್ರಿಸಲ್ಪಟ್ಟ ಚಿತ್ರವಲ್ಲವಷ್ಟೇ! ಸಾಕಾರ ಹಾಗೂ ನಿರಾಕಾರಗಳೆರಡರ ಸತ್ಯದರ್ಶನವನ್ನು ಮಾಡಿದ ಮಹಾನುಭಾವರು ಈ ಎರಡು ಪಥಗಳನ್ನೂ ಅಂಗೀಕರಿಸುತ್ತಾರೆ. ಆದ್ದರಿಂದ ನಮ್ಮ ಆಧ್ಯಾತ್ಮಿಕ ಪಯಣದ ಪ್ರಾರಂಭದಲ್ಲಿ ಉಪಾಸನೆಗಾಗಿ ರೂಪ-ನಾಮಗಳನ್ನು ಅಥವಾ ಇತರ ಪ್ರತೀಕಗಳನ್ನು ಆಶ್ರಯಿಸಬಹುದು. ಆದರೆ ಪಯಣದ ಅಂತ್ಯದಲ್ಲಿ ಪರಮಾತ್ಮನು ರೂಪ-ನಾಮರಹಿತನೆಂಬ ಸತ್ಯದ ದರ್ಶನವಾಗುತ್ತದೆ. ಸಹಸ್ರಾರು ವರ್ಷಗಳ ಹಿಂದೆ ಸನಾತನ ಧರ್ಮದ ಋಷಿಪುಂಗವರು, ಸಾಮಾನ್ಯ ಮಾನವರು ಕೂಡ ಅತ್ಯುನ್ನತ ಆಧ್ಯಾತ್ಮಿಕ ಅನುಭವಗಳನ್ನು ಪಡೆಯಲು ಸಹಾಯವಾಗುವ ಇಂತಹ ಮಾರ್ಗಗಳನ್ನು ತೋರಿದ್ದಾರೆ. ಆದರೆ ಸಾಕಾರ ಭಕ್ತಿ ವಿಗ್ರಹಾರಾಧನೆಯಲ್ಲಿಯೇ ಅಂತ್ಯವಾದರೆ, ಅದು ಈ ಋಷಿ-ಮುನಿಗಳಿಗೆ ಮಾಡಿದ ಅಪಚಾರವಾಗುತ್ತದೆ. ನಾವು ಸಾಕಾರದಿಂದ ಪ್ರಾರಂಭಿಸಿ ಕ್ರಮೇಣ ನಿರಾಕಾರವನ್ನು ತಲುಪಬೇಕು.

    ಈಶಾವಾಸ್ಯೋಪನಿಷತ್ತು ಪ್ರಥಮ ಶ್ಲೋಕದಲ್ಲಿಯೇ ಪರಮಾತ್ಮನು ಚರಾಚರ ಜಗತ್ತೆಲ್ಲವನ್ನೂ ವ್ಯಾಪಿಸಿದ್ದಾನೆಂದು ಘೊಷಿಸುತ್ತದೆ. ಇದೇ ಉಪನಿಷತ್ತಿನಲ್ಲಿ 12, 13 ಹಾಗೂ 14ನೇ ಶ್ಲೋಕಗಳಲ್ಲಿ ಸಾಕಾರ-ನಿರಾಕಾರಗಳ ಪ್ರಸ್ತಾಪವೂ ಇದೆ. ಇಲ್ಲಿ ಸಾಕಾರವನ್ನು ‘ಸಂಭೂತಿ’ಯೆಂದೂ, ನಿರಾಕಾರವನ್ನು ‘ಅಸಂಭೂತಿ’ಯೆಂದೂ ಕರೆಯುತ್ತಾರೆ. ಇದನ್ನೇ 9, 10 ಹಾಗೂ 11ನೇ ಶ್ಲೋಕಗಳಲ್ಲಿ ‘ವಿದ್ಯೆ’ ಹಾಗೂ ‘ಅವಿದ್ಯೆ’ಯೆಂದು ಕರೆದಿದ್ದಾರೆ. ವಿದ್ಯೆಯೆಂದರೆ ಪರಮಾತ್ಮನ ನಿರಾಕಾರ ಸ್ವರೂಪದ ಜ್ಞಾನ. ಅವಿದ್ಯೆಯೆಂದರೆ ನಿರಾಕಾರ ಸ್ವರೂಪದ ಅಜ್ಞಾನ ಹಾಗೂ ಅದರಿಂದಾಗಿ ಕೇವಲ ಮೂರ್ತಿ-ಪೂಜೆಯನ್ನು ಆಶ್ರಯಿಸುವುದು. ಈ ಅರ್ಥದಲ್ಲಿ ಅಸಂಭೂತಿಯ ಆಶ್ರಯ ವಿದ್ಯೆಯಾದರೆ ಸಂಭೂತಿಯ ಆಶ್ರಯ ಅವಿದ್ಯೆ. ಇಂತಹ ಅವಿದ್ಯೆಯನ್ನು ಅವಲಂಬಿಸುವುದು ಉಪಾಸಕನನ್ನು ಅಂಧಕಾರಕ್ಕೆ ತಳ್ಳುತ್ತದೆ. ಎಂದರೆ ವಿಗ್ರಹಾರಾಧನೆ ವಿಗ್ರಹಾರಾಧನೆಯಲ್ಲಿಯೇ ಅಂತ್ಯವಾದರೆ, ಅದು ಅಂಧಕಾರವೇ ಸರಿ. ಅದೇ ರೀತಿಯಲ್ಲಿ ನಿರಾಕಾರದ ಉಪಾಸಕರು ನಿರಾಕಾರ ಮಾತ್ರವೇ ಸತ್ಯವೆಂದು, ಅವರ ಅಂತರಂಗದ ಸಿದ್ಧತೆ ಇನ್ನು ಪೂರ್ಣವಾಗದೇ ಇದ್ದಾಗ, ಅದನ್ನು ಮಾತ್ರ ಅವಲಂಬಿಸುವುದು ಘೊರ ಅಂಧಕಾರಕ್ಕೆ ಆಹ್ವಾನವಾಗುತ್ತದೆ. ವಿದ್ಯೆ-ಅವಿದ್ಯೆ ಹಾಗೂ ಅಸಂಭೂತಿ-ಸಂಭೂತಿ- ಇವೆರಡರ ಸುಂದರ ಸಮನ್ವಯವನ್ನು ಈ ಉಪನಿಷತ್ತು ನೀಡಿದೆ. ಅವಿದ್ಯೆ ಅಥವಾ ಸಂಭೂತಿ (ಸಾಕಾರ)ಯಿಂದ ಮೃತ್ಯುವನ್ನು ಗೆದ್ದು, ವಿದ್ಯೆ ಅಥವಾ ಅಸಂಭೂತಿ (ನಿರಾಕಾರ)ಯಿಂದ ಅಮೃತತ್ವವನ್ನು ಪಡೆಯಬಹುದೆಂದು ಹೇಳಲಾಗಿದೆ. ಇದರರ್ಥ, ಸಾಕಾರೋಪಾಸನೆ ಕೊನೆಯಲ್ಲಿ ನಿರಾಕಾರದಲ್ಲಿ ಪರ್ಯವಸಾನಗೊಳ್ಳಬೇಕು.

    ನಿರಾಕಾರನಾದ ಭಗವಂತನು ಭಕ್ತರನ್ನು ಅನುಗ್ರಹಿಸಲು ನಾನಾ ರೂಪಗಳಲ್ಲಿ ಅಭಿವ್ಯಕ್ತಗೊಳ್ಳುತ್ತಾನೆ ಎಂಬುದನ್ನು ಎಲ್ಲರೂ ಅರಿಯಬೇಕು. ಸರ್ವಶಕ್ತ ಹಾಗೂ ಸರ್ವತಂತ್ರ- ಸ್ವತಂತ್ರನಾದ ಭಗವಂತನನ್ನು ನಮ್ಮ ಬಾಲಿಶ ಕಲ್ಪನೆಗಳ ಚೌಕಟ್ಟಿನಲ್ಲಿ ಬಂಧಿಸಿ, ಆತನು ಕೇವಲ ಸಾಕಾರನು ಅಥವಾ ನಿರಾಕಾರನು ಎಂದು ಹೇಳುವುದು ಅಜ್ಞಾನದ ಪರಮಾವಧಿಯೇ ಸರಿ!

    (ಲೇಖಕರು ವಿದ್ವಾಂಸರು, ಸಂಸ್ಕೃತಿ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts