ಮತದಾನ ಹೆಚ್ಚಳಕ್ಕೆ ಸಾಕ್ಷರತಾ ಸಂಘ

ಬೀದರ್: ಜಿಲ್ಲೆಯಲ್ಲಿ ಪ್ರತಿಶತ ಮತದಾನ ನಡೆಯಬೇಕೆಂಬುದು ಜಿಲ್ಲಾಡಳಿತದ ದೃಢ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ಶಾಲೆ, ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತಾ ಸಂಘ(ಎಲೆಕ್ಟ್ರಾಲ್ ಲಿಟ್ರಸಿ ಕ್ಲಬ್) ಸ್ಥಾಪಿಸಲಾಗಿದೆ ಎಂದು ಮತದಾನ ಜಾಗೃತಿ ಅಭಿಯಾನದ ನೋಡಲ್ ಅಧಿಕಾರಿ ಡಾ.ಗೌತಮ ಅರಳಿ ಹೇಳಿದರು.
ಹಾಲಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಯುವ ಸಮಾವೇಶದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 70 ಸಾವಿರ ಯುವ ಮತದಾರರಿದ್ದಾರೆ. ಅದರಲ್ಲಿ ಕೇವಲ 20 ಸಾವಿರ ಮತದಾರರು ಹೆಸರು ನೋಂದಾಯಿಸಿದ್ದಾರೆ. ಇನ್ನುಳಿದವರ ನೋಂದಣಿ ಉದ್ದೇಶದಿಂದ ಈ ಸಂಘ ಸ್ಥಾಪಿಸಲಾಗಿದೆ. ತಮ್ಮ ಕುಟುಂಬ ಹಾಗೂ ನೆರೆ ಹೊರೆಯವರನ್ನು ಮತದಾನದಲ್ಲಿ ಭಾಗವಹಿಸಲು ಜಾಗೃತಿ ಮೂಡಿಸಲು ಪೂರಕವಾಗಿ ಸಂಘ ಕೆಲಸ ಮಾಡಲಿದೆ ಎಂದರು.
ಮತದಾನದ ಪಾರದರ್ಶಕತೆಗೆ ಚುನಾವಣಾ ಆಯೋಗ ಅನೇಕ ಯೋಜನೆ ಜಾರಿಗೆ ತಂದಿದೆ. ಹಾಕಿದ ಮತ ಖಾತ್ರಿಪಡಿಸಿಕೊಳ್ಳಲು ಮತದಾನ ಖಾತ್ರಿ ಯಂತ್ರ(ವಿವಿಪ್ಯಾಟ್) ಅಳವಡಿಸಲಾಗುತ್ತಿದೆ. ಸುರಕ್ಷತೆ ದೃಷ್ಟಿಯಿಂದ ಮತದಾನದ ಯಂತ್ರ ತರುವ ವಾಹನಗಳಿಗೆ ಜಿಪಿಎಸ್ ಇರಲಿದೆ. ಹೆಚ್ಚಿನ ಸುರಕ್ಷತೆಗಾಗಿ ಸ್ಟ್ರಾಂಗ್ ರೂಮ್ಗಳಿಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಯುವಕರು ಮತದಾನ ಹೆಚ್ಚಿನ ಪ್ರಮಾಣದಲ್ಲಿ ನಡೆಯುವ ಅಭಿಯಾನಕ್ಕೆ ಕೈಜೋಡಿಸಬೇಕೆಂದು ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಡಾ. ರವೀಂದ್ರನಾಥ ಗಬಾಡಿ ಮಾತನಾಡಿ, ಒಂದು ಮತವೂ ಬಹಳ ಮುಖ್ಯವಾಗಿದೆ. ಒಬ್ಬೊಬ್ಬರ ಒಂದೊಂದು ಮತ ಈ ದೇಶದ ಭವಿಷ್ಯ ನಿರ್ಧರಿಸುತ್ತದೆ. ದೇಶದ ಆಂತರಿಕ, ಬಾಹ್ಯ ಸುರಕ್ಷತೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಸುಭದ್ರ ಸರ್ಕಾರದ ಅಗತ್ಯವಿದೆ. ಯಾವುದೋ ಆಮೀಷಕ್ಕೊಳಗಾಗಿ ಸಂವಿಧಾನ ನಮಗೆ ನೀಡಿದ ಪ್ರಬಲ ಅಸ್ತ್ರ ಮಾರಿಕೊಳ್ಳದೇ ಯೋಗ್ಯರಿಗೆ ಮತ ಚಲಾಯಿಸಬೇಕು ಎಂದರು.
ಗುಲ್ಬರ್ಗ ವಿವಿ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ.ಸಿದ್ದಪ್ಪ ಉದ್ಘಾಟಿಸಿದರು. ಜಿಪಂ ಯೋಜನಾ ಸಹಾಯಕ ನಿರ್ದೇಶಕ ರವೀಂದ್ರಸಿಂಗ್ ಇದ್ದರು. ನೆಹರು ಯುವ ಕೇಂದ್ರ ಜಿಲ್ಲಾ ಯುವ ಸಮನ್ವಯಾಧಿಕಾರಿ ಪಿ. ಶ್ರೀನಿವಾಸ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ. ರಾಮಚಂದ್ರ ಗಣಾಪುರ ನಿರೂಪಣೆ ಮಾಡಿದರು. ಪ್ರೊ. ಶಾಂತಕುಮಾರ ಚಿದ್ರಿ ವಂದಿಸಿದರು. ನೆಹರು ಯುವ ಕೇಂದ್ರ, ಸ್ನಾತಕೋತ್ತರ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಸಮಾವೇಶ ನಡೆಯಿತು.

Leave a Reply

Your email address will not be published. Required fields are marked *