ನಾಡಹಬ್ಬ ದಸರಾ ಸಡಗರ ಮುಗಿದ ಮೇಲೆ…

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಶುಕ್ರವಾರ ವಿಜಯದಶಮಿಯೊಂದಿಗೆ ತೆರೆ ಬಿದ್ದಿದ್ದು, ಗಜಪಡೆ ಕೂಡ ರಿಲ್ಯಾಕ್ಸ್ ಮೂಡ್​ಗೆ ಜಾರಿದೆ. ಕಳೆದ ಕೆಲದಿನಗಳಿಂದ ಜಂಬೂಸವಾರಿಯ ತಾಲೀಮು, ಬಳಿಕ ಜಂಬೂಸವಾರಿಯಲ್ಲಿ ಭಾಗವಹಿಸುವ ಮೂಲಕ ನಿರಂತರ ಚಟುವಟಿಕೆಯಲ್ಲಿದ್ದ ‘ಕ್ಯಾಪ್ಟನ್’ ಅರ್ಜುನ ನೇತೃತ್ವದ ಗಜಪಡೆ ಶನಿವಾರ ಅರಮನೆ ಅಂಗಳದಲ್ಲಿ ನಿರಾಳವಾಗಿದ್ದವು. ಯಶಸ್ವಿಯಾಗಿ ಅಂಬಾರಿ ಹೊತ್ತ ಅರ್ಜುನ ಹಾಗೂ ಇನ್ನಿತರ 12 ಆನೆಗಳಿಗೆ ಶನಿವಾರ ಬೆಳಗ್ಗೆ ಎಣ್ಣೆ ತೀಡಿ, ಬಿಸಿ ನೀರಿನ ಮಜ್ಜನ ಮಾಡಿಸಿ ಬೆಲ್ಲ, ಕುಸುರೆ, ಸೊಪ್ಪು, ಬೇಯಿಸಿದ ಧಾನ್ಯ ನೀಡಲಾಯಿತು. ಈ ಆನೆಗಳು ಭಾನುವಾರ ಬೆಳಗ್ಗೆ 10ಕ್ಕೆ ಸ್ವಸ್ಥಾನಕ್ಕೆ ಹೊರಡಲಿವೆ.

ಕೇಂದ್ರ ಸಚಿವರ ನಗರ ಪರ್ಯಟನೆ: ನಾಡಹಬ್ಬ ದಸರಾ ವೀಕ್ಷಣೆಗೆ ಬಂದಿದ್ದ ಕೇಂದ್ರ ಸಚಿವ ಸುರೇಶ್​ಪ್ರಭು ಅವರು ಶನಿವಾರವೂ ನಗರದಲ್ಲೇ ಉಳಿದು ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು.

ಅಧಿಕಾರಿಗಳ ದರ್ಬಾರ್: ದಸರಾದಲ್ಲಿ ಈ ಸಲವೂ ಅವ್ಯವಸ್ಥೆ- ಗೊಂದಲ ತಪ್ಪಲಿಲ್ಲ. ಹತ್ತು ದಿನಗಳ ವಿವಿಧ ಕಾರ್ಯಕ್ರಮದಲ್ಲಿ ಅಚ್ಚುಕಟ್ಟು, ಹೊಸತನ, ಗುಣಮಟ್ಟ ಇರಲಿಲ್ಲ. ಅಧಿಕಾರೇತರರನ್ನು ಒಳಗೊಂಡ ದಸರಾ ಉಪಸಮಿತಿ ರಚಿಸದ್ದರಿಂದ ಅಧಿಕಾರಿಗಳ ಅಧಿಪತ್ಯಕ್ಕೆ ಅಂಕುಶ ಇಲ್ಲದಂತಾಯಿತು.

ಜಿಟಿಡಿ ವಿರುದ್ಧ ತನ್ವೀರ್ ವಾಗ್ದಾಳಿ: ದಸರಾ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ನೇರವಾಗಿ ಸಚಿವ ಜಿ.ಟಿ. ದೇವೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರತಿ ಹಂತದಲ್ಲೂ ಶಿಷ್ಟಾಚಾರ ಉಲ್ಲಂಘನೆ ಆಗಿದೆ. ಎಲ್ಲ ಹಂತದಲ್ಲೂ ಗೊಂದಲ ಉಂಟಾದ್ದರಿಂದ ಇದು ನಾಡಿನ ಸಂಸ್ಕೃತಿ-ಪರಂಪರೆಗೆ ಕಪ್ಪುಚುಕ್ಕೆ ಯಾಗಿದೆ. ಅವ್ಯವಸ್ಥೆಗೆ ಕಾರಣ ಯಾರು ಎನ್ನುವುದನ್ನು ಪತ್ತೆ ಮಾಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿ, ಅನೇಕ ಆರೋಪಗಳನ್ನು ಮಾಡಿದರು.

ಆನೆಯೇ ಸುಮ್ನಿದೆ, ನೀನೇನು ಕೂಗ್ತಿ?

ಗಜಪಡೆ ಸಮೀಪ ತೆರಳಿ ಉದ್ಧಟತನ ತೋರಿದ ಯುವಕರಿಗೆ ಮಾವುತ ಹಾಗೂ ಕಾವಾಡಿಗಳು ಕಪಾಳಮೋಕ್ಷ ಮಾಡಿ ಬುದ್ಧಿ ಕಲಿಸಿದರು. ಶನಿವಾರ ಅರಮನೆ ಅಂಗಳದಲ್ಲಿ ಬೀಡುಬಿಟ್ಟಿರುವ ದಸರಾ ಆನೆಗಳ ಹತ್ತಿರ ಹೋದ ಮೂವರು ಯುವಕರು ಬಲರಾಮ ಆನೆಯ ಬಳಿ ಹೋಗಿದ್ದಲ್ಲದೆ, ಕಬ್ಬು ನೀಡಿ ಆ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯುತ್ತಿದ್ದರು. ಇದನ್ನು ನೋಡಿ ಓಡಿ ಬಂದ ಮಾವುತ ತಿಮ್ಮ ಆಕ್ಷೇಪಿಸಿದಾಗ ಯುವಕನೊಬ್ಬ, ‘ಆನೆಯೇ ಸುಮ್ಮನಿದೆ ನೀನೇನು ಕೂಗುತ್ತೀಯಾ, ಫೋಟೋ ತೆಗೆಯುವವರೆಗೆ ಸುಮ್ಮನಿರು’ ಎಂದು ಉದ್ಘಟತನದಿಂದ ಹೇಳಿದ. ಕೆರಳಿದ ತಿಮ್ಮ ಆನೆಗಳ ಬಳಿ ಹೋಗಬೇಡಿ ಎಂದು ತಳ್ಳಿದಾಗ ಮೂವರೂ ಹಲ್ಲೆಗೆ ಮುಂದಾದರು. ಇತರ ಮಾವುತರು-ಕಾವಾಡಿಗಳು ಒಗ್ಗೂಡಿ ಯುವಕರಿಗೆ ಬುದ್ಧಿ ಹೇಳಿದರೂ ಕೇಳದಿದ್ದಾಗ, ಕಪಾಳಮೋಕ್ಷ ಮಾಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಎರಡು ಗುಂಪನ್ನು ಸಮಾಧಾನಪಡಿಸಿ ಕಳುಹಿಸಿದರು.