ಫುಟ್​ಬಾಲ್, ಕ್ರಿಕೆಟ್, ಓಟದ ಸ್ಪರ್ಧೆಯಲ್ಲಿ ಆನೆಗಳ ಪೈಪೋಟಿ

ಶಿವಮೊಗ್ಗ: ಆನೆಗಳ ಫುಟ್​ಬಾಲ್, ಕ್ರಿಕೆಟ್, ಓಟದ ಸ್ಪರ್ಧೆ, ಆನೆಗಳ ತುಂಟಾಟ, ಜನರ ಮೇಲೆ ನೀರೆರೆಚುವುದು ಸೇರಿ ಆನೆಗಳು ವೈವಿಧ್ಯ ಆಟೋಟಗಳ ಮೂಲಕ ಸಾರ್ವಜನಿಕರಿಗೆ ಮನರಂಜನೆ ನೀಡಿದವು.

ಅರಣ್ಯ ಇಲಾಖೆ ವನ್ಯಜೀವಿ ಸಪ್ತಾಹದ ಸಮಾರೋಪದ ಪ್ರಯುಕ್ತ ಸಕ್ರೆಬೈಲು ಆನೆ ಬಿಡಾರದಲ್ಲಿ ಆಯೋಜಿಸಿದ್ದ ‘ಆನೆ ಹಬ್ಬ’ ಪ್ರೇಕ್ಷಕರ ಮನಸೂರೆಗೊಂಡಿತು. ಆನೆ ಹಬ್ಬ ನೋಡಲು ಆಗಮಿಸಿದ್ದ ಪ್ರವಾಸಿಗರು ಸಂಭ್ರಮಪಟ್ಟರು. ಸಿಂಗಾರಗೊಂಡಿದ್ದ ಆನೆಗಳು ಆಟೋಟಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಮನರಂಜಿಸಿದವು.

ಸಕ್ರೆಬೈಲು ಬಿಡಾರದ 10 ಆನೆಗಳು ಸುಡು ಬಿಸಿಲಿನಲ್ಲಿಯೂ ದಣಿವಣಿಯರಿದೇ ಜನರ ರಂಜಿಸಿದವು. ಮಕ್ಕಳು ಸೇರಿ ಎಲ್ಲ ವಯೋಮಾನದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಆರಂಭದಲ್ಲಿ ಎಲ್ಲ ಆನೆಗಳು ಜನರಿಗೆ ನಮಸ್ಕಾರ ಮಾಡಿ ಸರದಿ ಸಾಲಿನಲ್ಲಿ ಮಾರ್ಚ್ ಫಾಸ್ಟ್ ನಡೆಸಿದವು. ಬಾಲ ಹಿಡಿದು ಸಾಗುವ ಸರದಿಯಲ್ಲಿ ಹೇಮಾವತಿ ಬಾಲ ಹಿಡಿಯಲು ತಕರಾರು ಮಾಡಿದಳು. ಹಾಗೇ ಸಾಲಿನಲ್ಲಿ ಮುನ್ನಡೆದಳು.

ಆನೆಗಳಿಗಾಗಿ ಮಾರ್ಚ್​ಫಾಸ್ಟ್, ಓಟದ ಸ್ಪರ್ಧೆ, ಬಾಲ ಹಿಡಿದು ಸಾಗುವ ಸ್ಪರ್ಧೆ, ಬಾಳೆ ಹಾಗೂ ಕಬ್ಬು ತಿನ್ನುವ ಸ್ಪರ್ಧೆ, ಜಲ ಸಿಂಚನ, ಕ್ರಿಕೆಟ್, ಫುಟ್​ಬಾಲ್, ಹಿಮ್ಮುಖ ನಡಿಗೆ, ಕಿವಿ ಹಿಂಡುವ ಸ್ಪರ್ಧೆ, ಬಾಸ್ಕೆಟ್ ಬಾಲ್ ಸೇರಿ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. ಕಾವಾಡಿಗರನ್ನು ಸೊಂಡಿಲ ಮೇಲೆ ಕೂರಿಸಿ ಆನೆಗಳು ಪ್ರದಕ್ಷಿಣೆ ಹಾಕಿದವು.

ಫುಟ್​ಬಾಲ್, ಕ್ರಿಕೆಟ್ ಆಟದಲ್ಲಿ ಸೂರ್ಯ ಹಾಗೂ ಆಲೆ ಉತ್ತಮ ಪ್ರದರ್ಶನ ನೀಡಿದವು. ಹೇಮಾವತಿ ಹಾಗೂ ಶಿವ ಆನೆಗಳು ಶಾರದೆಯನ್ನು ಕಿವಿ ಹಿಡಿದು ಸುತ್ತು ಹಾಕಿದವು. ಹೇಮಾವತಿ ಜಲ ಸಿಂಚನ ಮಾಡಲು ಕರೆಸಿದರೆ ಬಿಸಿಲಿನಿಂದ ದಣಿದಿದ್ದರಿಂದ ನೀರು ಕುಡಿಯಲು ಶುರುವಿಟ್ಟುಕೊಂಡಿತು. ಒಮ್ಮೆ ಜನರ ಮೇಲೆ ನೀರು ಚಿಮುಕಿಸಿದರೆ ಮತ್ತೆರಡು ಬಾರಿ ನೀರು ಕುಡಿಯುತ್ತಿತ್ತು.

ಓಟದಲ್ಲಿ ಹೇಮಾವತಿ ಪ್ರಥಮ: ಆನೆ ಹಬ್ಬದ ಆಟೋಟ ಸ್ಪರ್ಧೆಗಳಲ್ಲಿ ಸಾಗರ, ಸೂರ್ಯ, ಶಾರದೆ, ಹೇಮಾವತಿ ಸೇರಿ ಇತರೆ ಆನೆಗಳು ತುಂಟಾಟ ಪ್ರದರ್ಶಿಸಿ ಪ್ರೇಕ್ಷಕರ ಚಪ್ಪಾಳೆ, ಕೇಕೆ ಹಾಗೂ ಶಿಳ್ಳೆ ಗಿಟ್ಟಿಸಿಕೊಂಡವು. ಸೂರ್ಯ, ಆಲೆ ಆನೆಗಳು ಕ್ರಿಕೆಟ್​ನಲ್ಲಿ ಮಿಂಚಿದರೆ, ಶಾರದೆ, ಹೇಮಾವತಿ ಆನೆಗಳು ಫುಟ್​ಬಾಲ್​ನಲ್ಲಿ ರಂಜಿಸಿದವು. ಓಟದ ಸ್ಪರ್ಧೆಯಲ್ಲಿ ಹೇಮಾವತಿ ಪ್ರಥಮ ಸ್ಥಾನ ಗಳಿಸಿತು. ಸೂರ್ಯ ದ್ವಿತೀಯ ಸ್ಥಾನ ಗಳಿಸಿತು. ಕಬ್ಬು ಹಾಗೂ ಬಾಳೆ ತಿನ್ನುವ ಸ್ಪರ್ಧೆಯಲ್ಲಿ ಸಾಗರ ಪ್ರಥಮ, ಸೂರ್ಯ ದ್ವಿತೀಯ ಹಾಗೂ ಶಾರದೆ ತೃತೀಯ ಸ್ಥಾನ ಗಳಿಸಿದವು. ಆನೆಗಳ ಸ್ಪರ್ಧೆ ವೀಕ್ಷಕರಲ್ಲಿ ಸಂತಸ ಮೂಡಿಸಿತು.

10 ಆನೆಗಳು ಭಾಗಿ: ಸಕ್ರೆಬೈಲು ಆನೆ ಬಿಡಾರದ 24 ಆನೆಗಳ ಪೈಕಿ 10 ಆನೆಗಳು ಮಾತ್ರ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದವು. ಸಾಗರ, ಗೀತಾ, ಸೂರ್ಯ, ಅರ್ಜುನ, ಗಂಗೆ, ಆಲೆ, ಹೇಮಾವತಿ, ಶಿವ, ಶಾರದೆ, ಸುಭದ್ರೆ ಆನೆಗಳು ಭಾಗವಹಿಸಿದ್ದವು. ಮರಿಯಾನೆ ಎಲ್ಲ ಪ್ರೇಕ್ಷಕರ ಆಕರ್ಷಣೆಗೆ ಪಾತ್ರವಾಯಿತು.

ಧನುಷ್ ಕೇಂದ್ರಬಿಂದು: 3 ತಿಂಗಳ ಹಿಂದೆ ಜನಿಸಿರುವ ಮರಿಯಾನೆ ಧನುಷ್ ಎಲ್ಲರ ಕೇಂದ್ರ ಬಿಂದು ಆಗಿತ್ತು. ತಾಯಿ ಆನೆಯೊಂದಿಗೆ ಬಿಡಾರದಲ್ಲಿ ಬಿಡಲಾಗಿತ್ತು. ಪುಟ್ಟ ಆನೆ ಹಾಗೂ ತಾಯಿ ಆನೆ ಜತೆಗೆ ಜನ ಸೆಲ್ಪಿ ಕ್ಲಿಕ್ಕಿಸಿಕೊಂಡರು. ಇನ್ನು ಬಿಡಾರದ ಅಕ್ಕಪಕ್ಕದಲ್ಲಿ ಕಟ್ಟಲಾಗಿದ್ದ ಎಲ್ಲ ಆನೆಗಳ ಬಳಿ ಜನರು ಫೋಟೋ ತೆಗೆಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಓಟದ ಸ್ಪರ್ಧೆ

1. ಹೇಮಾವತಿ

2. ಸೂರ್ಯ

ಕಬ್ಬು ಹಾಗೂ ಬಾಳೆ ತಿನ್ನುವ ಸ್ಪರ್ಧೆ

1. ಸಾಗರ

2. ಸೂರ್ಯ

3. ಶಾರದೆ