ಆನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಿ

ಹಾಸನ: ಆನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸದ ರಾಜ್ಯ ಸರ್ಕಾರ ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನೂ ನೀಡುತ್ತಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ. ಶಿವರಾಮು ಆರೋಪಿಸಿದರು.
ಸಕಲೇಶಪುರ, ಆಲೂರು, ಅರಕಲಗೂಡು ಹಾಗೂ ಬೇಲೂರು ತಾಲೂಕುಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಕಾಡಾನೆ ದಾಳಿಯಿಂದ ವ್ಯಕ್ತಿ ಮೃತಪಟ್ಟರೆ 10 ಲಕ್ಷ ರೂ. ಪರಿಹಾರ ಹಾಗೂ ಬೆಳೆ ನಾಶವಾದರೆ ವೈಜ್ಞಾನಿಕ ಬೆಲೆ ನೀಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕಾಡಾನೆ ದಾಳಿಯಿಂದ 2001ರಿಂದ ಇಲ್ಲಿವರೆಗೆ 63 ಜನ ಮೃತಪಟ್ಟಿದ್ದಾರೆ. 221 ಜನ ಗಾಯಗೊಂಡಿದ್ದಾರೆ. 31,528 ಬೆಳೆ ನಷ್ಟ ಪ್ರಕರಣಗಳು ನಡೆದಿವೆ. ಆದರೆ 18 ವರ್ಷದಿಂದ ಬಿಡುಗಡೆಯಾಗಿರುವ ಪರಿಹಾರ 7.75 ಕೋಟಿ ರೂ.ಮಾತ್ರ. 40 ಕೋಟಿ ರೂ.ಬೆಳೆ ಪರಿಹಾರ ನೀಡಬೇಕಾಗಿದೆ. ಆನೆ ದಾಳಿಯಿಂದ ಗಾಯಗೊಂಡ ವ್ಯಕ್ತಿಗೆ 41 ಸಾವಿರ ರೂ.ಮಾತ್ರ ನೀಡಲಾಗುತ್ತದೆ. ಇದುವರೆಗೆ ಮೃತರ ಕುಟುಂಬಗಳಿಗೆ 1,79,47,389 ರೂ.ಗಳನ್ನು ಮಾತ್ರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಅಪಾರ ಶ್ರಮವಹಿಸಿ ಬೆಳೆಯುವ ಒಂದು ಕಾಫಿಗಿಡಕ್ಕೆ ಕೇವಲ 200 ರೂ.ಪರಿಹಾರ ನೀಡಲಾಗುತ್ತದೆ. ಹಾನಿಗೊಳಲಾಗುವ ರೈತರನ್ನು ಇಷ್ಟೊಂದು ಹೀನವಾಗಿ ಕಂಡರೆ ಅವರ ಭವಿಷ್ಯ ಏನಾಗಬೇಕೆಂದು ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡರು.
ಪ್ರತಿಭಟನೆಗೆ ಬಗ್ಗದ ಸರ್ಕಾರ:
ಕಾಡಾನೆ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಬಾಳ್ಳುಪೇಟೆಯಲ್ಲಿ 6 ದಿನಗಳ ನಿರಂತರ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ವಾಗ್ದಾನ ನೀಡಿದ್ದ ಸಿಎಂ ಕುಮಾರಸ್ವಾಮಿ ಅದರ ಕುರಿತು ಮಾತೇ ಆಡುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಒಂದೂ ಕಾಡಾನೆ ಸೆರೆ ಹಿಡಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಐದು ಬಾರಿ ಸಂಸದರಾಗಿ ಆಯ್ಕೆಯಾದರೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಮಲೆನಾಡಿನ ಸಮಸ್ಯೆ ಗೊತ್ತಾಗಲಿಲ್ಲವೆ?. ಇಷ್ಟು ದಿನಗಳವರೆಗೆ ಇವರು ಏನು ಮಾಡಿದ್ದಾರೆ. ನೈಸ್ ರಸ್ತೆ ಬಗ್ಗೆ ಹೊಂದಿರುವ ಕಾಳಜಿಯನ್ನು ಕಾಡಾನೆ ಹಾವಳಿ ವಿಚಾರವಾಗಿ ತೋರಬೇಕಿತ್ತು ಎಂದು ಟೀಕಿಸಿದರು.
ರಾಜ್ಯ ಸರ್ಕಾರದ ಬಳಿ ಹಣ ಇಲ್ಲವಾದರೆ ಇದಕ್ಕಾಗಿ ಕೇಂದ್ರ ಸರ್ಕಾರದ ಕಾಂಪಾ (ಕಾಂಪೆನ್ಸೆಂಟರಿ ಅಫೋರಿಸ್ಟೆಷನ್ ಫಂಡ್ ಮ್ಯಾನೇಜ್‌ಮೆಂಟ್ ಆ್ಯಂಡ್ ಪ್ಲಾನಿಂಗ್ ಅಥಾರಿಟಿ) ಮೂಲಕ ಹಣ ಪಡೆಯಬಹುದಾಗಿದೆ. ಈ ರೀತಿಯ ಪ್ರಕರಣಗಳಿಗಾಗಿಯೇ ಕಾಂಪಾದಲ್ಲಿ ಸುಮಾರು 36 ಸಾವಿರ ಕೋಟಿ ರೂ. ಹಣವಿದೆ. ಅಲ್ಲಿಂದ ಆನೆ ಕಾರಿಡಾರ್ ನಿರ್ಮಾಣಕ್ಕೆ ಹಣ ಪಡೆಯಬೇಕು ಎಂದು ಒತ್ತಾಯಿಸಿದರು.