ಗಾಯಗೊಂಡ ಕಾಡಾನೆಗೆ ಶ್ರುಶ್ರೂಷೆ

>

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಸುಬ್ರಹ್ಮಣ್ಯ ವಲಯಾರಣ್ಯ ವ್ಯಾಪ್ತಿಗೆ ಬರುವ ಬಾಳುಗೋಡು ಮಿತ್ತಡ್ಕ ಕಿರಿಭಾಗ ರಕ್ಷಿತಾರಣ್ಯದಲ್ಲಿ ಗಾಯಗೊಂಡಿದ್ದ ಕಾಡಾನೆಗೆ ಶುಕ್ರವಾರ ನಾಗರಹೊಳೆ ಅಭಯಾರಣ್ಯದ ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ನೋವಿನಿಂದ ಬಳಲುತ್ತಿದ್ದ ಆನೆಗೆ ಶುಕ್ರವಾರ ಅರವಳಿಕೆ ಚುಚ್ಚುಮದ್ದು ನೀಡಿದ ಚಿಕಿತ್ಸೆ ನೀಡಲಾಯಿತು. ಸಂಜೆ ವೇಳೆಗೆ ಆನೆ ಎಚ್ಚರಗೊಂಡು ಒಡಾಡಲು ಆರಂಭಿಸಿದೆ.
ನಾಗರಹೊಳೆ ಅಭಯಾರಣ್ಯದ ವೈದ್ಯಾಧಿಕಾರಿ ಡಾ.ಮುಜೀಬ್, ಗುತ್ತಿಗಾರು ಪಶುವೈದ್ಯಾಧಿಕಾರಿ ಡಾ.ವೆಂಕಟಾಚಲಪತಿ, ಸುಳ್ಯ ಎಸಿಎಫ್ ಆಸ್ಟಿನ್ ಸೋನ್ಸ್, ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ತ್ಯಾಗರಾಜ್ ಮೊದಲಾದವರ ತಂಡ ಆನೆ ಬಳಿಗೆ ತೆರಳಿತು. ಆನೆ ಮುಂಗಾಲನ್ನು ಎತ್ತಿ ಕುಟುಂತ್ತ ನಡೆಯುತ್ತಿತ್ತು. ಮೂರು ದಿನಗಳಿಂದ ಇದೇ ಸ್ಥಿತಿಯಲ್ಲಿ ನೋವಿನಿಂದ ಇರುವ ಆನೆಯನ್ನು ಕಂಡು ವೈದ್ಯಾಧಿಕಾರಿಗಳು ಅರವಳಿಕೆ ನೀಡಿ, ಗಾಯಕ್ಕೆ ಶುಶ್ರೂಷೆ ನೀಡಲು ನಿರ್ಧರಿಸಿದರು.

ಅರಿವಳಿಕೆ ನೀಡಿ ಚಿಕಿತ್ಸೆ:  ಯಾರಾದರೂ ಪಕ್ಕಕ್ಕೆ ತೆರಳಿದರೆ ಆನೆ ಕೋಪಗೊಳ್ಳುತ್ತಿತ್ತು. ಹಾಗಾಗಿ ಅರಿವಳಿಕೆ ಅನಿವಾರ್ಯವಾಗಿತ್ತು. ಆನೆಗೆ 3 ಗಂಟೆ ಜ್ಞಾನ ತಪ್ಪಿಸಿ ವೈದ್ಯರು ಚಿಕಿತ್ಸೆ ನೀಡಿದರು. ಮುಂಭಾಗದ ಎಡಕಾಲಿನ ಮೇಲ್ಭಾಗದಲ್ಲಿ ಗಾಯವಾಗಿತ್ತು. ಗಾಯದಲ್ಲಿ ಕೀವು ತುಂಬಿಕೊಂಡಿತ್ತು. ವೈದ್ಯರು ಕೀವನ್ನು ತೆಗೆದು ಗಾಯಕ್ಕೆ ಔಷಧಿ ಹಚ್ಚಿ, ರೋಗ ನಿರೋಧಕ ಚುಚ್ಚುಮದ್ದು ನೀಡಿದರು. ಶುಶ್ರೂಷೆಯ ಬಳಿಕ ಮತ್ತೆ ಆನೆಗೆ ಎಚ್ಚರಗೊಳ್ಳಲು ಚುಚ್ಚುಮದ್ದು ನೀಡಲಾಯಿತು. ಆನೆ ಸಂಪೂರ್ಣ ಗುಣಮುಖವಾಗಿ ನಡೆದಾಡುವವರೆಗೆ ಸುಬ್ರಹ್ಮಣ್ಯ ಅರಣ್ಯ ಇಲಾಖಾ ಸಿಬ್ಬಂದಿ ನಿಗಾ ವಹಿಸಲಿದ್ದಾರೆ. ಕಾಡಿನಲ್ಲಿ ಆನೆಗಳು ಕಾದಾಟ ನಡೆಸಿದ ಕಾರಣ, ಸುಮಾರು 17 ವರ್ಷ ವಯಸ್ಸಿನ ಈ ಗಂಡಾನೆ ಗಾಯಗೊಂಡಿದೆ. ಇನ್ನೊಂದು ಆನೆಯ ದಂತ ಇದಕ್ಕೆ ತಾಗಿದೆ. ನೈಸರ್ಗಿಕವಾಗಿಯೇ ಗಾಯ ಗುಣಮುಖವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಸ್ಥಳೀಯರ ವಿಶೇಷ ಕಾಳಜಿ:  ಬುಧವಾರದಿಂದ ಶುಕ್ರವಾರದ ತನಕ ಗಾಯಗೊಂಡು ನೋವನ್ನು ಅನುಭವಿಸುತ್ತಿದ್ದ ಆನೆಗೆ ವಿಶೇಷ ಚಿಕಿತ್ಸೆ ನೀಡಿ ಶುಶ್ರೂಷೆ ನೀಡುವಲ್ಲಿ ಅರಣ್ಯ ಇಲಾಖೆ ಮತ್ತು ಸ್ಥಳೀಯರು ಕಾಳಜಿ ವಹಿಸಿ ಮಾನವೀಯತೆ ಮೆರೆದರು. ಮೂರು ದಿನಗಳಿಂದ ಊರವರು ಆನೆಗೆ ದೂರದಿಂದಲೇ ಆಹಾರ ನೀಡುತ್ತಿದ್ದರು. ಕಾಡಿಗೆ ತೆರಳಿ ಆನೆ ಇರುವ ಸ್ಥಳ ಗುರುತಿಸಿ ಅದಕ್ಕೆ ಬೈನೆ ಸೊಪ್ಪು, ಹಲಸು ಇತ್ಯಾದಿ ತಿನಿಸುಗಳನ್ನು ನೀಡುತ್ತಿದ್ದರು.

Leave a Reply

Your email address will not be published. Required fields are marked *