ಮಡಿಕೇರಿ:
ಕಾವೇರಿ ಉಗಮ ಸ್ಥಾನ ತಲಕಾವೇರಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಡ ಹಗಲೇ ಕಾಡಾನೆಗಳು ಸುತ್ತಾಡಿ ಆತಂಕ ಮೂಡಿಸಿವೆ. ಸೋಮವಾರ ಮುಂಜಾನೆ ೬ ಗಂಟೆಯ ಸುಮಾರಿಗೆ ಕೈಲಾಶ ಆಶ್ರಮ ಬಳಿಯ ತಲಕಾವೇರಿ ದ್ವಾರದ ಭಾಗದಲ್ಲಿ ಆನೆಗಳು ತಿರುಗಾಡಿದ ಕುರುಹು ಕಂಡು ಬಂದಿದೆ. ದ್ವಾರದ ಗೇಟ್ ಬಂದ್ ಮಾಡಿದ್ದರಿಂದ ಆನೆಗಳು ತಲಕಾವೇರಿ ಕಡೆಗೆ ತೆರಳಲು ಸಾಧ್ಯವಾಗಿಲ್ಲ. ಯಾವ ಕಡೆಗೆ ತೆರಳಿವೆ ಎನ್ನುವ ಮಾಹಿತಿಯೂ ಸಿಕ್ಕಿಲ್ಲ.ಇದು ತುಲಾಮಾಸ ಕಾವೇರಿ ಜಾತ್ರೆಯ ಅವಧಿಯಾಗಿದ್ದು, ದಿನಂಪ್ರತಿ ಸಾವಿರಾರು ಭಕ್ತರು ತಲಕಾವೇರಿಗೆ ಆಗಮಿಸುತ್ತಿದ್ದರೆ. ಸುತ್ತಲೂ ಬೆಟ್ಟ, ಕಾಡುಗಳಿಂದ ಆವೃತ್ತವಾಗಿರುವ ಈ ಪ್ರದೇಶದಲ್ಲಿ ಒಮ್ಮಿಂದೊಮ್ಮೆಲೆ ಕಾಡಾನೆಗಳು ನುಗ್ಗಿ ಬಂದರೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಸ್ಥಳೀಯರು. ಈ ವ್ಯಾಪ್ತಿಯಲ್ಲಿ ಕೃಷಿ ಜಮೀನು ಕೂಡ ಇದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ದೂರದ ಕಾಡಿಗೆ ಈ ಆನೆಗಳನ್ನು ಓಡಿಸುವಂತೆ ಈ ಭಾಗದ ನಿವಾಸಿಗಳು ಒತ್ತಾಯಿಸಿದ್ದಾರೆ.
ಈ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆ ಪಕ್ಕದ ಕಾಡಿನಲ್ಲಿ ಇರುವುದನ್ನು ಪತ್ತೆ ಹಚ್ಚಿದರು. ಸ್ಥಳೀಯರ ಸಹಕಾರದಿಂದ ಆ ಆನೆಯನ್ನು ಮರಳಿ ಕಾಡಿಗೆ ಅಟ್ಟಲಾಗಿದೆ.