ಆನೆ ಹಿಂಡಿನಿಂದಲೇ ನಾಲ್ಕು ವರ್ಷದ ಬಾಲಕಿಯನ್ನು ಕಾಪಾಡಿದ ಆನೆ

ಜಲ್ಪೈಗುರಿ: ಸ್ಕೂಟರ್‌ನಿಂದ ಕೆಳಗೆ ಬಿದ್ದಿದ್ದ ನಾಲ್ಕು ವರ್ಷದ ಬಾಲಕಿಯನ್ನು ಇತರೆ ಆನೆಗಳ ಹಿಂಡಿನಿಂದ ಆನೆಯೊಂದು ರಕ್ಷಿಸಿದ್ದು, ಅಚ್ಚರಿಗೆ ಕಾರಣವಾಗಿದೆ.

ಗಾರುಮಾರಾದ ಅರಣ್ಯ ಪ್ರದೇಶದ ಸಮೀಪವಿರುವ ರಾಷ್ಟ್ರೀಯ ಹೆದ್ದಾಗಿ 31ರಲ್ಲಿ ಒಂದೇ ಕುಟುಂಬದ ಮೂವರು ಅರಣ್ಯ ಪ್ರದೇಶದ ಒಳಗಿರುವ ಲತಾಗುರಿಯಲ್ಲಿರುವ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಹಿಂತಿರುಗುತ್ತಿದ್ದರು.

ಗಾರುಮಾರ ಅರಣ್ಯದ ಮಧ್ಯೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 31 ರಲ್ಲಿ ಅರಣ್ಯದೊಳಗಿನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಲತಗುರಿಗೆ ತೆರಳುತ್ತಿದ್ದ ನಿತು ಘೋಷ್‌ ಎಂಬ ಉದ್ಯೋಗಿ ತನ್ನ ಪತ್ನಿ ತಿತ್ಲಿ ಮತ್ತು ಮಗಳು ಅಹಾನಾ ಜತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಆನೆಗಳ ಹಿಂಡು ರಸ್ತೆ ದಾಟುತ್ತಿದ್ದದ್ದನ್ನು ನೋಡಿ ಗಾಡಿಯನ್ನು ನಿಲ್ಲಿಸಿದ್ದಾರೆ.

ಸ್ವಲ್ಪ ಸಮಯದ ನಂತರ ಆನೆಗಳು ಕಾಡಿನ ಇನ್ನೊಂದು ಕಡೆಗೆ ಹೋದ ನಂತರ ಘೋಷ್ ತನ್ನ ಪ್ರಯಾಣವನ್ನು ಮುಂದುವರಿಸಿದ್ದಾರೆ. ಆದರೆ ಅಲ್ಲಿ ಮತ್ತೊಂದು ಆನೆ ಹಿಂಡು ಕಾಡಿನೊಳಗಿಂದ ರಸ್ತೆಗೆ ಬರುತ್ತಿರುವುದು ಕಾಣಿಸಿದೆ. ಅಷ್ಟರಲ್ಲಾಗಲೇ ಸ್ಕೂಟರ್‌ ಆನೆ ಹಿಂಡಿನ ಸಮೀಪಕ್ಕೆ ತಲುಪಿತ್ತು. ಇದರಿಂದ ಇದ್ದಕ್ಕಿಂದ್ದಂತೆ ಬ್ರೇಕ್‌ ಹಾಕಿದ್ದರಿಂದ ಸ್ಕೂಟರ್‌ನಲ್ಲಿದ್ದ ಮೂವರು ಕೆಳಗೆ ಬಿದ್ದಿದ್ದಾರೆ.

ಹಿಂಡಿನಲ್ಲಿದ್ದ ಆನೆಯೊಂದು ಕೂಡಲೇ ಬಂದು ನಾಲ್ಕು ವರ್ಷದ ಬಾಲಕಿಯನ್ನು ತನ್ನ ಕಾಲಿನ ನಡುವಿನ ಜಾಗದಲ್ಲಿ ಇಟ್ಟುಕೊಂಡು ನಿಂತಿದೆ. ಆದರೆ, ಗುಂಪಿನ ಇತರೆ ಆನೆಗಳು ತಮ್ಮ ಪ್ರಯಾಣವನ್ನು ಮುಂದುವರಿಸಿವೆ.

ಈ ಎಲ್ಲ ಘಟನಾವಳಿಗಳನ್ನು ಗಮನಿಸುತ್ತಿದ್ದ ಟ್ರಕ್‌ ಚಾಲಕ ಸ್ಥಳಕ್ಕೆ ಬಂದು ಜೋರಾಗಿ ಹಾರನ್‌ ಮಾಡಿದ್ದಾರೆ. ಇದರಿಂದ ಹೆದರಿದ ಬಾಲಕಿಯನ್ನು ಕೆಳಗಿಟ್ಟುಕೊಂಡು ನಿಂತಿದ್ದ ಆನೆ ಅಲ್ಲಿಂದ ಕಾಲು ಕಿತ್ತಿದ್ದು, ಅಹಾನಾ ಮತ್ತೆ ಅಮ್ಮನ ಮಡಿಲು ಸೇರಿದ್ದಾಳೆ.

ಟ್ರಕ್‌ ಚಾಲಕನೇ ಮೂವರನ್ನು ಲತಗುರಿಗೆ ಬಿಟ್ಟಿದ್ದು, ಗಾಯಗೊಂಡಿರುವ ಘೋಷ್‌ ಮತ್ತು ಆತನ ಪತ್ನಿಯು ಜಲ್ಪೈಗುರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಘಟನೆಯಿಂದಾಗಿ ಆಘಾತಕ್ಕೊಳಗಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಗಾರುಮರ ದಕ್ಷಿಣದ ರೇಂಜರ್‌ ಅಯನ್‌ ಚಕ್ರಬೊರ್ತಿ ಮಾತನಾಡಿ, ಆನೆಗಳು ಕೆಲವೊಮ್ಮೆ ಆಕಡೆಯಿಂದ ಈಕಡೆ, ಈಕಡೆಯಿಂದ ಆಕಡೆಗೆ ಚಲಿಸುತ್ತಿರುತ್ತವೆ. ಈ ಕುರಿತು ಅರಣ್ಯ ಇಲಾಖೆಗೆ ತಿಳಿಸಿದರೆ ಪಟಾಕಿಯನ್ನು ಬಳಸಿ ಅವುಗಳನ್ನು ಓಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)