ತಾಲೂಕು ಆರೋಗ್ಯ ಅಧಿಕಾರಿ ಡಾ.ಟಿ.ರವಿಕುಮಾರ್ ಮಾಹಿತಿ
ಎಚ್.ಡಿ.ಕೋಟೆ : ಫ್ಯೆಲೇರಿಯ ಎಂದರೆ ಆನೆ ಕಾಲುರೋಗ. ಈ ಕಾಯಿಲೆಯು ಒಂದು ಸೂಕ್ಷ್ಮಾಣು ಜೀವಿಯಿಂದ ಉಂಟಾಗುವ ಕಾಯಿಲೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.
ತಾಲೂಕಿನ ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಮಾದಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಬುಧವಾರ ಆಯೋಜಿಸಿದ್ದ ಆನೆಕಾಲು ರೋಗ ಪತ್ತೆ ಹಚ್ಚುವ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ನಾಲ್ಕು ಗ್ರಾಮಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಗುರುತಿಸಿದ್ದು, ಅದರಂತೆ ಮಾದಾಪುರ ಗ್ರಾಮದಲ್ಲಿ ಫ್ಯೆಲೇರಿಯ ರಾತ್ರಿ ರಕ್ತ ಲೇಪನ ತೆಗೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಫ್ಯೆಲೇರಿಯ ಸೋಂಕು ತಗುಲಿದ ಕ್ಯುಲೆಕ್ಸ್ ಹೆಣ್ಣು ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಸಾಮಾನ್ಯವಾಗಿ ಈ ಸೊಳ್ಳೆಗಳು ರಾತ್ರಿಹೊತ್ತಿನಲ್ಲಿ ಕಚ್ಚುತ್ತವೆ. ಈ ರೋಗದ ಮುನ್ನೆಚ್ಚರಿಕೆಯಾಗಿ ಇಲಾಖೆ ವತಿಯಿಂದ ರಾತ್ರಿ ರಕ್ತಲೇಪನ ಸಂಗ್ರಹಿಸಿ, ಅದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ. ಈ ರೋಗ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಅತಿ ಮುಖ್ಯ. ಮಾದಾಪುರ ಗ್ರಾಮದಲ್ಲಿ 5 ತಂಡಗಳನ್ನು ರಚಿಸಿ ಮನೆ ಮನೆಗೆ ಹೋಗಿ ರಾತ್ರಿ ರಕ್ತಲೇಪನ ತೆಗೆಯಲಾಗುತ್ತದೆ ಎಂದು ತಿಳಿಸಿದರು.
ಆನೆಕಾಲು ರೋಗದ ಲಕ್ಷಣಗಳು:ಸಾಮಾನ್ಯವಾಗಿ ಸೋಂಕು ತಗುಲಿದ ಸೊಳ್ಳೆ ಕಚ್ಚಿದ ಒಂದು ವಾರದಲ್ಲಿ ಜ್ವರ, ಮೈಕೈ ನೋವು, ದುಗ್ಧ ಗ್ರಂಥಿಗಳಲ್ಲಿ ನೋವು ಕಾಣಿಸುತ್ತದೆ. ನಂತರ ಯಾವುದೇ ಲಕ್ಷಣಗಳು ಇರುವುದಿಲ್ಲ.ಆದರೆ 8-10 ವರ್ಷ ಕಳೆದ ಮೇಲೆ ಮನುಷ್ಯರ ಕಾಲು ಆನೆಯ ಕಾಲಿನಂತೆ ದಪ್ಪಗಾಗುತ್ತದೆ. ಇದನ್ನು ವಾಸಿ ಮಾಡಲು ಆಗುವುದಿಲ್ಲ. ಚರ್ಮದಲ್ಲಿ ಬಿರುಕುಗಳು ಆಗುವುದು ಮತ್ತು ಗಾಯ ಬೇಗ ವಾಸಿಯಾಗದೇ ಇರುವುದು, ಗಂಡಸರಿಗೆ ಬೀಜ ಚೀಲ ನೀರು ತುಂಬಿ ದಪ್ಪವಾಗುವುದು, ನಂತರದ ದಿನಗಳಲ್ಲಿ ನಡೆಯಲು ಕಷ್ಟವಾಗುತ್ತದೆ. ಇತರೆ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆರಂಭಿಕ ಹಂತದಲ್ಲಿ ರಕ್ತಲೇಪನ ಸಂಗ್ರಹಿಸಿ ಅದರಲ್ಲಿ ಪರಾವಲಂಬಿ ಜೀವಿ ಕಂಡುಬಂದರೆ 12 ದಿನ ಚಿಕಿತ್ಸೆ ನೀಡಿ ಪೂರ್ಣ ಗುಣಪಡಿಸಬಹುದು. ಇಲ್ಲವಾದಲ್ಲಿ 8-10 ವರ್ಷಗಳ ಬಳಿಕ ಮನುಷ್ಯನ ಕಾಲು ಆನೆಕಾಲಿನ ಮಾದರಿಯಲ್ಲಿ ಊದಿಕೊಳ್ಳುತ್ತದೆ. ಈ ಸೊಳ್ಳೆಗಳು ಗಲೀಜು ನೀರಿನಲ್ಲಿ (ಚರಂಡಿ, ಕೊಳಚೆ ನೀರು, ಶೇಖರಣಾ ಸ್ಥಳ, ಶೌಚಗುಂಡಿ) ಬೆಳೆಯುವುದರಿಂದ, ಮನುಷ್ಯವಾಸಿಸುವ ಕನಿಷ್ಠ ಮೂರು ಕಿ.ಮೀ.ವ್ಯಾಪ್ತಿಯಲ್ಲಿ ಗಲೀಜು ನೀರು ಇಲ್ಲದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ.ಸುರ್ವರ್ಣ, ಮಾದಾಪುರ ಆಸ್ಪತ್ರೆಯ ಡಾ.ಚಂದ್ರಕಲಾ, ಎಚ್.ಎಸ್. ಕಾಂತರಾಜು, ಗ್ರಾಮ ಪಂಚಾಯತಿ ಸದಸ್ಯರಾದ ನಾಗೇಶ್, ತಾಲೂಕು ಮೇಲ್ವಿಚಾರಕ ನಾಗೇಂದ್ರ ಸೇರಿದಂತೆ ಇತರರು ಇದ್ದರು.