ದಸರಾ ಆನೆ ದ್ರೋಣ ಸಾವು ಪ್ರಕರಣ: ಸರ್ಕಾರ, ಅರಣ್ಯ ಇಲಾಖೆಗೆ ಹೈಕೋರ್ಟ್ ನೋಟಿಸ್​

ಬೆಂಗಳೂರು: ವಿಶ್ವವಿಖ್ಯಾತ ದಸರಾ ವೈಭವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದ ಗಜಪಡೆಯ ಸದಸ್ಯರಲ್ಲಿ ಒಬ್ಬನಾಗಿದ್ದ ದ್ರೋಣ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಮಂಗಳವಾರ ನೋಟಿಸ್​ ನೀಡಿದೆ.

ವಕೀಲ ಅಮೃತೇಶ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​ನ ರಜೆದಿನ ದ್ವಿಸದಸ್ಯ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸಲು ನೋಟಿಸ್ ನೀಡಿದೆ. ನ್ಯಾಯಾಧೀಶರಾದ ಮೈಕಲ್ ಕುನ್ನಾ ಹಾಗೂ ಎಚ್.ಟಿ.ನರೇಂದ್ರ ಪ್ರಸಾದ್ ಅವರು ಪ್ರಕರಣ ಸಂಬಂಧ ಮೇ 21ಕ್ಕೆ ಸಮಗ್ರ ವರದಿ ನೀಡುವಂತೆ ಆದೇಶ ಹೊರಡಿಸಿದ್ದಾರೆ.

ಆನೆ ಸಾವಿನ ಪ್ರಕರಣದ ತನಿಖಾ ಕಮಿಟಿ ರಚನೆ ಮಾಡಲು ಸಾಧ್ಯನಾ? ಮತ್ತಿಗೋಡು ಆನೆ ಶಿಬಿರದಲ್ಲಿ ಯಾವೆಲ್ಲಾ ವ್ಯವಸ್ಥೆ ಇದೆ? ಆನೆಗಳಿಗೆ ಯಾವೆಲ್ಲಾ ಆಹಾರವನ್ನು ನೀಡಲಾಗುತ್ತಿದೆ? ಆನೆಗಳ ಚಿಕಿತ್ಸೆಗೆ ಯಾವ ವೈದ್ಯಕೀಯ ವ್ಯವಸ್ಥೆ ಇದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಮೇತ ಸಮಗ್ರ ವರದಿಯನ್ನು ಮೇ 21ರಂದು ನೀಡುವಂತೆ ಕೋರ್ಟ್​ ತಾಕೀತು ಮಾಡಿದೆ.

ಪ್ರಕರಣದ ಹಿನ್ನೆಲೆ
ಏಪ್ರಿಲ್ 26ರಂದು ದಸರಾ ಆನೆ ದ್ರೋಣ(37) ಸಾವನ್ನಪ್ಪಿದ್ದ. ಕಾಯಿಲೆಗೆ ತುತ್ತಾಗಿ ನಾಗರಹೊಳೆಯ ಆಭಯಾರಣ್ಯದ ಮತ್ತಿಗೊಡು ಶಿಬಿರದಲ್ಲಿ ಮೃತಪಟ್ಟಿತ್ತು. ನಾಡಿಗೆ ನುಗ್ಗುತ್ತಿದ್ದ ಆನೆಗಳನ್ನು ಹಿಡಿಯುವಲ್ಲಿ ದ್ರೋಣಾ ನಿಸ್ಸೀಮನಾಗಿದ್ದ. ಹೃದಯಾಘಾತದಿಂದ ಸಾವನ್ನಪ್ಪಿರಬಹುದೆಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದರು. ಆದರೆ, ಈ ಬಗ್ಗೆ ಹಿರಿಯ ವಕೀಲ ಅಮೃತೇಶ್​ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿ, ಮತ್ತಿಗೋಡು ಶಿಬಿರದಲ್ಲಿ ಆನೆಗಳಿಗೆ ಸೂಕ್ತವಾದ ವ್ಯವಸ್ಥೆಗಳಿಲ್ಲ. 24 ಗಂಟೆಯೊಳಗೆ ಅಲ್ಲಿಗೆ ಸೂಕ್ತ ವ್ಯದ್ಯರ ನೇಮಕ ಮಾಡಬೇಕು. ಆನೆಗಳಿಗೆ ಬೇಕಾದ ಸೂಕ್ತ ಪೌಷ್ಟಿಕ ಆಹಾರವನ್ನು ಒದಗಿಸಬೇಕು. 24 ಗಂಟೆಗಳ ಕಾಲ ಆನೆಯನ್ನು ನೋಡಿಕೊಳ್ಳುವಂತೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಸೂಚಿಸಲು ಕೋರ್ಟ್​ಗೆ ಮನವಿ ಮಾಡಿದ್ದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *