ವಿದ್ಯುತ್ ಯೋಜನೆಗೆ 172 ಕೋಟಿ ರೂ.

ಚಿಕ್ಕಮಗಳೂರು: ದೇಶದಲ್ಲಿ ಸುಮಾರು 18 ಸಾವಿರ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ ದೀನ್​ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಮೂರೂವರೆ ವರ್ಷದಲ್ಲಿ 172 ಕೋಟಿ ರೂ. ವಿನಿಯೋಗಿಸಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

ನಗರದ ವಿದ್ಯುತ್ ಪ್ರಸರಣ ನೌಕರರ ಸಂಘದ ಸಮುದಾಯ ಭವನದಲ್ಲಿ ಮೆಸ್ಕಾಂನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೀನ್​ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಹಾಗೂ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ವಿದ್ಯುದೀಕರಣ, ಸಂಸದರ ಆದರ್ಶ ಗ್ರಾಮ ಮಾಪಕೀಕರಣ, ನಿರಂತರ ಜ್ಯೋತಿಗೆ 172.28 ಕೋಟಿ, ವ್ಯವಸ್ಥೆಯ ಬಲವರ್ಧನೆ ಮಾಪಕೀಕರಣ, ಸೋಲಾರ್ ರೂಫ್​ಟಾಪ್ ಕಾಮಗಾರಿಗೆ ಐಪಿಡಿಎಸ್ ಯೋಜನೆಯಲ್ಲಿ 28.96 ಕೋಟಿ ರೂ. ವೆಚ್ಚವಾಗಿದೆ ಎಂದರು.

ಕೇಂದ್ರ ಸರ್ಕಾರ ಶೇ.60, ರಾಜ್ಯ ಸರ್ಕಾರ ಶೇ.40 ಅನುದಾನದಲ್ಲಿ ವಿದ್ಯುತ್ ಕಂಪನಿಗಳಿಗೆ ಆರ್ಥಿಕ ನೆರವು ನೀಡಿ ಎಲ್ಲೆಡೆ ವಿದ್ಯುತ್ ಜಾಲ ಸದೃಢಗೊಳಿಸಲಾಗುತ್ತಿದೆ. ಗ್ರಾಮಾಂತರದಲ್ಲಿ ಆರ್ಥಿಕವಾಗಿ ಹಿಂದುಳಿದವರು ಮತ್ತು ದೂರದ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ಕಂಬಗಳನ್ನು ಹೆಚ್ಚು ಖರೀದಿಸಿ ಅಳವಡಿಸುವುದು ಕಷ್ಟಸಾಧ್ಯ. ಹಾಗಾಗಿ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ ಎಂದು ಹೇಳಿದರು.