More

    ವಿದ್ಯುತ್ ವೆಚ್ಚ ತಗ್ಗಿಸಿದ ಸೌರಶಕ್ತಿ- ಜಿಲ್ಲಾಸ್ಪತ್ರೆ ಛಾವಣಿ ಮೇಲೆ ಅಳವಡಿಕೆ

    ಬಳ್ಳಾರಿ: ಇಲ್ಲಿನ ಜಿಲ್ಲಾಸ್ಪತ್ರೆಗೆ ಪ್ರತಿ ತಿಂಗಳು ಬರುವ ವಿದ್ಯುತ್ ಬಿಲ್ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿತ್ತು. ಈ ಖರ್ಚು ತಗ್ಗಿಸಲು ಆರೋಗ್ಯ ಇಲಾಖೆ ಸೌರಶಕ್ತಿ ಪ್ರಯೋಗ ಮಾಡಿ ಯಶ ಕಂಡಿದ್ದು, ಪ್ರತಿ ತಿಂಗಳು ಲಕ್ಷಕ್ಕೂ ಅಧಿಕ ಹಣ ಉಳಿತಾಯವಾಗುತ್ತಿದೆ.

    ಇದನ್ನೂ ಓದಿ: ಭಾರತದ ಮೊದಲ 100% ಸೌರಶಕ್ತಿ ಅವಲಂಬಿತ ಹಳ್ಳಿಯ ಬಗ್ಗೆ ಗೊತ್ತಾ?

    ಜಿಲ್ಲಾಸ್ಪತ್ರೆ ಮೇಲ್ಛಾವಣಿ ಮೇಲೆ 50 ಕೆವಿಯ ಎರಡು ಸೋಲಾರ್ ಪ್ಯಾನಲ್‌ಗಳನ್ನು 2021ರ ಆಗಸ್ಟ್‌ನಲ್ಲಿ 13ನೇ ಹಣಕಾಸು ಆಯೋಗದಿಂದ 50 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾಗಿದೆ. ಒಟ್ಟು 100 ಕೆ.ವಿ ಸೌರ ಪ್ಯಾನಲ್‌ಗಳಲ್ಲಿ ಪ್ರತಿ ತಿಂಗಳು 12 ಸಾವಿರ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಪ್ರತಿ ಯೂನಿಟ್‌ಗೆ 8.50 ರೂ. ದರ ನಿಗದಿಪಡಿಸಲಾಗಿದೆ. ಫ್ಯಾನ್, ಲೈಟ್, ಫ್ರಿಜ್ ಬಳಕೆಗೆ ಅನುಕೂಲವಾಗಿದೆ.

    ಪ್ರತಿ ತಿಂಗಳು 1.50 ಲಕ್ಷ ರೂ. ಉಳಿತಾಯ

    ಜಿಲ್ಲಾಸ್ಪತ್ರೆಗೆ ಪ್ರತಿ ತಿಂಗಳು 5.28 ಲಕ್ಷ ರೂ. ವಿದ್ಯುತ್ ಬಿಲ್ ಬರುತ್ತದೆ. ಅದರಲ್ಲಿ 1.50 ಲಕ್ಷ ರೂ. ಸೌರ ವಿದ್ಯುತ್‌ನಿಂದ ಉಳಿತಾಯವಾಗುತ್ತಿದೆ. ಪ್ರತಿದಿನ ನೂರಾರು ಸಂಖ್ಯೆಯಲ್ಲಿ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ.

    ವಾರ್ಡ್‌ಗಳು, ವಿಶೇಷ ನಿಗಾ ಘಟಕ, ಶಸ್ತ್ರಚಿಕಿತ್ಸೆ ಕೊಠಡಿಗಳಿದ್ದು, ಅಲ್ಲಿ ವಿದ್ಯುತ್ ಬಳಕೆ ನಿರಂತರವಾಗಿರಬೇಕಾಗುತ್ತದೆ. ಅದಕ್ಕಾಗಿ ಜೆಸ್ಕಾಂನಿಂದ ವಿದ್ಯುತ್ ಪೂರೈಸಲಾಗುತ್ತಿದ್ದರೂ, ಅದರ ಜತೆಗೆ ಸೌರ ವಿದ್ಯುತ್‌ಗೂ ಆದ್ಯತೆ ನೀಡಲಾಗಿದೆ. ಇದರಿಂದಾಗಿ ಸರ್ಕಾರದ ಖಜಾನೆಗೆ ಅನುಕೂಲವಾಗಿದೆ.

    ನಿರ್ವಹಣೆ ವೆಚ್ಚ ಕಡಿಮೆ

    ಸೌರಶಕ್ತಿ ಫಲಕಗಳ ನಿರ್ವಹಣಾ ವೆಚ್ಚ ತುಂಬ ಕಡಿಮೆ ಇದ್ದು, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಬಹುದು. ಮೇಲ್ಛಾವಣಿಯಲ್ಲಿ ಸೌರ ಸ್ಥಾವರ ಸ್ಥಾಪಿಸಿರುವುದರಿಂದ ವಿದ್ಯುತ್ ಮಾರಾಟ ಮಾಡಿ ಹಣ ಗಳಿಸಬಹುದು. ಆದರೆ ಆಸ್ಪತ್ರೆಗೆ ಹೆಚ್ಚಿನ ವಿದ್ಯುತ್ ಬೇಕಾಗುತ್ತದೆ.

    ಸೌರ ಫಲಕಗಳು ಕನಿಷ್ಠ 25 ವರ್ಷಗಳವರೆಗೆ ಹಾಳಾಗುವುದಿಲ್ಲ. ಹಾಗಾಗಿ ಮುಂದಿನ 20 ವರ್ಷ ಉಚಿತ ವಿದ್ಯುತ್ ಪಡೆಯಬಹುದು. ಇದರಿಂದ ವಿದ್ಯುತ್ ಕಡಿತದ ಸಮಸ್ಯೆಯೂ ಇರುವುದಿಲ್ಲ. ಸೌರಶಕ್ತಿಯು ಹಸಿರು ಶಕ್ತಿಯಾಗಿದ್ದು, ಮಾಲಿನ್ಯ ಉಂಟುಮಾಡದೆ ಪರಿಸರ ಸ್ನೇಹಿಯಾಗಿದೆ.

    ಸೋಲರ್ ಪ್ಯಾನಲ್‌ಗೆ ಸಬ್ಸಿಡಿ

    ಕೇಂದ್ರ ಸರ್ಕಾರದ ಸೌರಗೃಹ ಯೋಜನೆಯಡಿ ಮನೆಯ ಮೇಲ್ಛಾವಣಿ ಮೇಲೆ ಸೌರ ಫಲಕ (ಸೋಲಾರ್ ಪ್ಯಾನಲ್) ಅಳವಡಿಸಲು ಶೇ.40 ಸಬ್ಸಿಡಿ ಸಿಗಲಿದೆ. ವಿದ್ಯುತ್ ದರ ಹೆಚ್ಚುತ್ತಿರುವುದರಿಂದ ರೂಫ್‌ಟಾಪ್ ಸೋಲಾರ್ ಯೋಜನೆ ಉತ್ತಮ ಪರಿಹಾರ ಕ್ರಮವಾಗಿದೆ. ಈ ಯೋಜನೆಯಿಂದ ಉಚಿತ ವಿದ್ಯುತ್ ಪಡೆಯುವುದಲ್ಲದೆ ಆದಾಯವನ್ನೂ ಪಡೆಯಬಹುದು.

    ಮನೆಯ ಮೇಲ್ಛಾವಣಿ ಮೇಲೆ ಸೋಲಾರ್ ಅಳವಡಿಸುವ ಮೂಲಕ ಶೇ.30 ರಿಂದ 50 ವಿದ್ಯುತ್ ವೆಚ್ಚ ಉಳಿಸಬಹುದು. ಈ ಫಲಕ ಅಳವಡಿಸಲು ಹೆಚ್ಚಿನ ಸ್ಥಳಾವಕಾಶ ಬೇಕಿಲ್ಲ. ಜಾಗಕ್ಕೆ ತಕ್ಕಂತೆ ಸೌರಶಕ್ತಿ ಫಲಕ ಅಳವಡಿಸಬಹುದು. ಒಂದು ಮನೆಯ ಮೇಲೆ ಒಂದು ಕಿಲೋ ವಾಟ್‌ನಿಂದ ಐದ್ನೂರು ಕಿಲೋ ವಾಟ್‌ವರೆಗೂ ವಿದ್ಯುತ್ ಉತ್ಪಾದನೆ ಮಾಡಬಹುದು ಎನ್ನುತ್ತಾರೆ ಜೆಸ್ಕಾಂ ಅಧಿಕಾರಿಗಳು.

    ವಿದ್ಯುತ್ ವೆಚ್ಚ ತಗ್ಗಿಸಿದ ಸೌರಶಕ್ತಿ- ಜಿಲ್ಲಾಸ್ಪತ್ರೆ ಛಾವಣಿ ಮೇಲೆ ಅಳವಡಿಕೆ

    ಎರಡು ವರ್ಷಗಳ ಹಿಂದೆ ಜಿಲ್ಲಾಸ್ಪತ್ರೆ ಮೇಲ್ಛಾವಣಿಯ ಖಾಲಿ ಜಾಗದಲ್ಲಿ ಸೌರ ಘಟಕವನ್ನು ನಿರ್ಮಿಸಲಾಗಿದ್ದು, ಅದರಿಂದ ಆಸ್ಪತ್ರೆಗೆ ವಿದ್ಯುತ್ ಪೂರೈಸಲಾಗುತ್ತಿದೆ. ಪ್ರತಿ ತಿಂಗಳು 1.50 ಲಕ್ಷ ರೂ. ಬಿಲ್ ಕಡಿಮೆ ಆಗುತ್ತಿದೆ.
    | ಡಾ.ಎನ್.ಬಸರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ, ಬಳ್ಳಾರಿ

    ಸೋಲಾರ್ ರೂಫ್‌ಟಾಪ್ ಯೋಜನೆಯಡಿ ಮನೆ ಛಾವಣಿಯ ಮೇಲೆ ಸೌರ ಫಲಕ ಅಳವಡಿಸಬಹುದು. ಇದರಿಂದ ವಿದ್ಯುತ್ ಬಿಲ್ ಉಳಿತಾಯವಾಗುತ್ತದೆ.
    | ಅಶೋಕ್ ರೆಡ್ಡಿ, ಎಇಇ, ಜೆಸ್ಕಾಂ, ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts