ದಿಢೀರ್ ವಿದ್ಯುತ್ ಬಳಕೆ ಪ್ರಮಾಣ ಏರಿಕೆ

ವೇಣುವಿನೋದ್ ಕೆ.ಎಸ್, ಮಂಗಳೂರು

ಕರಾವಳಿಯಲ್ಲಿ ಏರುತ್ತಿರುವ ಸೆಖೆಯೊಂದಿಗೆ ವಿದ್ಯುತ್ ಬಳಕೆಯೂ ಹೆಚ್ಚಿದೆ. ಆದರೆ ಅದೃಷ್ಟವಷಾತ್ ರಾಜ್ಯದಲ್ಲಿ ಎಲ್ಲ ಮೂಲಗಳಿಂದ ಲಭ್ಯವಿರುವ ವಿದ್ಯುತ್ ಪ್ರಮಾಣ ಸಾಕಷ್ಟಿರುವುದರಿಂದ ಈ ಬಾರಿ ಲೋಡ್‌ಶೆಡ್ಡಿಂಗ್‌ನ ಭೀತಿ ಇಲ್ಲ.

ಸದ್ಯದ ಮಾಹಿತಿ ಪ್ರಕಾರ ಈ ವರ್ಷ ಪವರ್ ಕಟ್ ಮಾಡುವಂತಹ ಯಾವುದೇ ಪರಿಸ್ಥಿತಿ ರಾಜ್ಯದಲ್ಲಿಲ್ಲ, ವಿವಿಧ ಜಲಾಶಯಗಳಲ್ಲಿ ನೀರಿನ ಸಂಗ್ರಹ ಸಾಕಷ್ಟಿರುವುದರಿಂದ ಜಲವಿದ್ಯುತ್, ಉಷ್ಣ ವಿದ್ಯುತ್ ಮತ್ತು ಸೌರ ವಿದ್ಯುತ್ ಮೂಲಗಳಿಂದ ವಿದ್ಯುತ್ ಅಗತ್ಯ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ.

ದಿಢೀರ್ ಡಿಮ್ಯಾಂಡ್ ಏರಿಕೆ: ಮೆಸ್ಕಾಂ ವ್ಯಾಪ್ತಿಯಲ್ಲಿ(ನಾಲ್ಕು ಜಿಲ್ಲೆ) ಸಾಮಾನ್ಯವಾಗಿ ದೈನಿಕ ಸರಾಸರಿ ವಿದ್ಯುತ್ ಬಳಕೆಯಾಗುವುದು 850ರಿಂದ 950 ಮೆಗಾ ವ್ಯಾಟ್. ಆದರೆ ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಬಳಕೆ 1050-1080 ಮೆಗಾ ವ್ಯಾಟ್‌ಗೇರಿದೆ. ಸೆಖೆಯಿಂದ ಪಾರಾಗಲು ಜನ ಎಸಿ, ಫ್ಯಾನ್ ಬಳಕೆ ಹೆಚ್ಚಾಗಿಸುವ ಪರಿಣಾಮವಿದು. ಬಳಕೆಯ ಪ್ರಮಾಣದಲ್ಲಿ ಹೇಳುವುದಾದರೆ 19 ಮಿಲಿಯನ್ ಯುನಿಟ್ ಸರಾಸರಿಯಾಗಿ ಮೆಸ್ಕಾಂ ವ್ಯಾಪ್ತಿಯಲ್ಲಿ ಬೇಡಿಕೆ ಇದೆ. ಆದರೆ ಕಳೆದ ತಿಂಗಳಿಂದ ಇದು 24 ಮಿಲಿಯನ್ ಯುನಿಟ್‌ಗೆ ಏರಿಕೆಯಾಗಿದೆ.

ಸಾಕಷ್ಟಿದೆ ರಾಜ್ಯದಲ್ಲಿ ಪವರ್:  ರಾಜ್ಯದಲ್ಲಿ ಪ್ರಸ್ತುತ ಸರಾಸರಿ 12,340 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಜಲ, ಉಷ್ಣವಿದ್ಯುತ್, ಪವನ ಶಕ್ತಿ ಅಷ್ಟೇ ಅಲ್ಲದೆ ಈ ಬಾರಿ ದೊಡ್ಡ ಕೊಡುಗೆ ನೀಡುತ್ತಿರುವುದು ಸೋಲಾರ್ ಪವರ್. ಸೋಲಾರ್ ಪವರ್‌ವೊಂದರಿಂದಲೇ ರಾಜ್ಯಕ್ಕೆ 4,719 ಮೆಗಾವ್ಯಾಟ್ ವಿದ್ಯುತ್ ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಸೋಲಾರ್ ಪವರ್ ಕೊಡುಗೆ ಜಾಸ್ತಿಯಾಗುತ್ತಲೇ ಹೋಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಕೃಷಿಯದ್ದೇ ಸಮಸ್ಯೆ:  ಮೆಸ್ಕಾಂ ವ್ಯಾಪ್ತಿಯಲ್ಲಿ ಸಾಮಾನ್ಯ ವಿದ್ಯುತ್ ವಿಷಯದಲ್ಲಿ ಸಮಸ್ಯೆಯಿಲ್ಲ, ಆದರೆ ಪುತ್ತೂರು ಸುಳ್ಯ ಹಾಗೂ ಶಿವಮೊಗ್ಗದ ಸೊರಬದಲ್ಲಿ ಒಂದಷ್ಟು ಮೂಲಭೂತ ಸಮಸ್ಯೆಗಳಿವೆ, ಹಾಗಾಗಿ ಅಲ್ಲಿ ಕೃಷಿ ಪಂಪ್‌ಸೆಟ್ ಬಳಕೆದಾರರು ವಿದ್ಯುತ್ ಅಭಾವ ಎದುರಿಸುತ್ತಿದ್ದಾರೆ.

ಕೆಪಿಟಿಸಿಎಲ್‌ನವರು ಮಾಡಾವು ಎಂಬಲ್ಲಿ ವಿತರಣಾ ಕೇಂದ್ರವೊಂದನ್ನು ಸ್ಥಾಪಿಸಲು ಹೊರಟಿದ್ದು, ಅದಕ್ಕೆ ವಿವಿಧ ಅಡ್ಡಿಗಳು ಬಂದಿರುವುದೇ ಪುತ್ತೂರು, ಕಡಬ, ಸುಳ್ಯ ಭಾಗಗಳಿಗೆ ಗುಣಮಟ್ಟದ ವಿದ್ಯುತ್ ನೀಡಲು ಸಮಸ್ಯೆಯಾಗಿದೆ. ಪರಿಣಾಮವಾಗಿ ಅಲ್ಲಿನ ತ್ರೀಫೇಸ್ ಪಂಪ್‌ಸೆಟ್‌ಗೆ ರೇಷನಿಂಗ್ ಮಾಡಲಾಗಿದೆ. ಬೆಳಗ್ಗೆ 6ರಿಂದ ಸಾಯಂಕಾಲ 6ರ ವರೆಗೆ ಮೂರು ಗಂಟೆ ಮಾತ್ರ ತ್ರೀಫೇಸ್ ವಿದ್ಯುತ್ ಕೊಡಲಾಗುತ್ತಿದೆ. ರಾತ್ರಿ ಸಾಧ್ಯವಾದರೆ ಎರಡು ಗಂಟೆ ತ್ರೀಫೇಸ್. ಉಳಿದಂತೆ 9 ಗಂಟೆ ಕಾಲ ಸಿಂಗಲ್ ಫೇಸ್ ನೀಡಲಾಗುತ್ತಿದೆ.

ಪುತ್ತೂರು ಸುಳ್ಯದ ಒತ್ತಡ: ಪ್ರಸ್ತುತ ವಾರಾಹಿಯಿಂದ ನೆಟ್ಲಮುಡ್ನೂರು ವಿತರಣಾ ಕೇಂದ್ರಕ್ಕೆ ವಿದ್ಯುತ್ ಬರುತ್ತಿದೆ. ಇಲ್ಲಿಂದ ಒಂದು 33 ಕೆವಿ ಲೈನ್ ಸವಣೂರು, ನೆಲ್ಯಾಡಿ, ಕಡಬ ಹಾಗೂ ಸುಬ್ರಹ್ಮಣ್ಯ ವರೆಗೆ ಹೋಗುತ್ತದೆ. ಇನ್ನೊಂದು 33 ಕೆವಿ ಲೈನ್ ಬೆಳ್ಳಾರೆ, ಕುಂಬ್ರ ಕಡೆಗೆ ಹೋದರೆ ಇನ್ನೊಂದು ಲೈನ್ ಕ್ಯಾಂಪ್ಕೊ, ಸುಳ್ಯ ಕಡೆಗೆ ಇದೆ. ಇದರಿಂದಾಗಿ ಪುತ್ತೂರು ಭಾಗದಲ್ಲಿ ತೀವ್ರ ಒತ್ತಡ ಸ್ಥಿತಿ ಎದುರಾಗಿದೆ.
ಇದು ಬಗೆಹರಿಯಬೇಕಾದರೆ ಕೆಪಿಟಿಸಿಎಲ್‌ನ ಮಾಡಾವು ವಿತರಣಾ ಕೇಂದ್ರ ಚಾರ್ಜ್ ಆಗಬೇಕಿದೆ. ಅದುವರೆಗಿನ ತಾತ್ಕಾಲಿಕ ಕ್ರಮವಾಗಿ ಒಂದಷ್ಟು ಒತ್ತಡ ಸಡಿಲಗೊಳಿಸುವುದಕ್ಕಾಗಿ ಕರಾಯದಿಂದ ನೀರಕಟ್ಟೆ ವರೆಗೆ ಒಟ್ಟು 29 ಕಿ.ಮೀ. 33 ಕೆ.ವಿ ಲೈನ್ ಎಳೆಯುವುದಕ್ಕೆ ಟೆಂಡರ್ ನೀಡಲಾಗಿದೆ.

ಕೆಪ್ಯಾಸಿಟರ್ ಅಳವಡಿಸಿ: ಬೇಸಿಗೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಲೋ ವೋಲ್ಟೇಜ್ ಸಮಸ್ಯೆ ಕಾಡುತ್ತದೆ, ಅದಕ್ಕಾಗಿ ಆದಷ್ಟೂ ಪಂಪ್‌ಸೆಟ್‌ಗಳಿಗೆ ಕೆಪ್ಯಾಸಿಟರ್ ಅಳವಡಿಸುವಂತೆ ಇದೇ ಏಪ್ರಿಲ್‌ನಿಂದ ಮನೆ ಮನೆಗೆ ಮೆಸ್ಕಾಂನಿಂದ ಸೂಚನೆ ನೀಡಲಾಗಿದೆ. ಕೆಪ್ಯಾಸಿಟರ್‌ಗಳು ಲೋಡ್ ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ಇದಲ್ಲದೆ ಎಲ್ಲ ಮೆಸ್ಕಾಂ ವಿತರಣಾ ಕೇಂದ್ರಗಳಲ್ಲೂ ಕೆಪ್ಯಾಸಿಟರ್ ಅಳವಡಿಸುವ ಕಾರ್ಯ ನಡೆಯುತ್ತಿದೆ.

ಈ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇರಲಿಕ್ಕಿಲ್ಲ, ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಚೆನ್ನಾಗಿದೆ, ಕಳೆದ ವರ್ಷ ಇದೇ ವೇಳೆಗೆ 11 ಸಾವಿರ ಮೆಗಾ ವ್ಯಾಟ್ ಉತ್ಪಾದನೆಯಾಗುತ್ತಿದ್ದರೆ, ಈಗ 12,340 ಮೆ.ವ್ಯಾ ಆಗುತ್ತಿದೆ, ಕೊರತೆ ಇಲ್ಲ.
|ರಘುಪ್ರಕಾಶ್ ಎನ್, ನಿರ್ದೇಶಕರು (ತಾಂತ್ರಿಕ), ಮೆಸ್ಕಾಂ