ಚಿಕ್ಕಮಗಳೂರಿನ 630 ಹಳ್ಳಿಗಳಲ್ಲಿ ಕಗ್ಗತ್ತಲು

ಚಿಕ್ಕಮಗಳೂರು: ತಿಂಗಳಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆ, ಗಾಳಿಗೆ ಸಾವಿರಾರು ವಿದ್ಯುತ್ ಕಂಬಗಳು ಧರೆಗುರುಳಿ 22.12 ಕೋಟಿ ರೂ. ನಷ್ಟವಾಗಿದ್ದು, 630ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.

ಒಟ್ಟು 1,661 ಕಂಬ, 35 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದ್ದು, ಪುನರ್ ವಿದ್ಯುತ್ ಸಂಪರ್ಕ ಕಲ್ಪಿಸುವುದು ಮೆಸ್ಕಾಂಗೆ ಸವಾಲಿನ ಕೆಲಸವಾಗಿದೆ. ಮೆಸ್ಕಾಂ ಅಧಿಕಾರಿ, ಸಿಬ್ಬಂದಿ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಂಡಿದ್ದರೂ ಮಳೆ, ಇಂಬಳದ ಕಾಟ ಹಾಗೂ ನುರಿತ ಕಾರ್ವಿುಕರು ಸಿಗದೆ ನೂರಾರು ಹಳ್ಳಿಗಳು ಕತ್ತಲಲ್ಲಿ ಮುಳುಗಿವೆ.

ಸತತ ಮಳೆಯಿಂದ ತೇವಾಂಶ ಹೆಚ್ಚಾಗಿದೆ. ಭಾರವಾದ ಕಂಬಗಳನ್ನು ಎತ್ತಲು ದೈಹಿಕವಾಗಿ ಸಮರ್ಥ ಕಾರ್ವಿುಕರ ಅಗತ್ಯವಿದೆ. ಆದರೆ ಕೆಸರು ಗದ್ದೆಯಾಗಿರುವ ನೆಲದ ಮೇಲೆ ನಿಂತು ಕಂಬ ಎತ್ತಿ ನಿಲ್ಲಿಸುವುದು ಅಪಾಯಕಾರಿ. ಹೀಗಾಗಿ ಕೆಲ ಕಾರ್ವಿುಕರು ಮೆಸ್ಕಾಂ ಕೆಲಸಕ್ಕೆ ಬರುತ್ತಿಲ್ಲ.

ದಾರಿ ಪಕ್ಕದಲ್ಲಿ ಬಿದ್ದ ಕಂಬ ನಿಲ್ಲಿಸಲು ಯಂತ್ರಗಳನ್ನು ಬಳಸಲಾಗುತ್ತದೆ. ಕಾಡಿನ ಮಧ್ಯ, ಗದ್ದೆ, ತೋಟದಲ್ಲಿ ಬಿದ್ದ ಕಂಬ ಬದಲಾಯಿಸುವುದು ಕಠಿಣ ಕೆಲಸವಾಗಿದೆ. ಈಗಾಗಲೇ ಬಿದ್ದಿರುವ 1,661ಕಂಬಗಳಲ್ಲಿ 1,586 ಹೊಸ ಕಂಬಗಳನ್ನು ಅಳವಡಿಸಿದರೂ ಇನ್ನೂ ಹಲವು ಹಳ್ಳಿಗಳಿಗೆ ವಿದ್ಯುತ್ ಪೂರೈಸಲು ಸಾಧ್ಯವಾಗಿಲ್ಲ.

ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು, ಶಿರವಾಸೆ, ದತ್ತಪೀಠ, ಮಲ್ಲೇನಹಳ್ಳಿ, ಜಾಗರ, ಮೂಡಿಗೆರೆಯ ಗೋಣಿಬೀಡು, ಜನ್ನಾಪುರ, ಬಣಕಲ್, ಶೃಂಗೇರಿ ತಾಲೂಕಿನ ಕಿಗ್ಗಾ, ಕಾವಡಿ, ಅತ್ತಿಗದ್ದೆ, ಹಗಲಗಡ್ಡಿ, ಸಂತೆಕೊಳಲು, ಕೊಪ್ಪ ತಾಲೂಕಿನ ಗಡಿಕಲ್ಲು, ಕೊಮ್ಲಾಪುರ, ಮೇಲ್ಪಾಲ್, ಲೋಕನಾಥಪುರ, ಬಾಳೆಗದ್ದೆ, ಜಯಪುರ, ಹರಿಹರಪುರ, ಶಾಂತಿಗ್ರಾಮ, ಕೊಗ್ರೆ, ಬಸರೀಕಟ್ಟೆ, ಹೇರೂರು, ಎನ್.ಆರ್.ಪುರ ತಾಲೂಕಿನ ಬಿ.ಎಚ್.ಕೈಮರ, ಮುತ್ತಿನಕೊಪ್ಪ, ಶೆಟ್ಟಿಕೊಪ್ಪ, ಕೈಮರ ಕ್ರಾಸ್, ಕುದುರೆಗುಂಡಿ, ಸುತ್ತ ಮತ್ತಿತರ ಪ್ರದೇಶದ ನೂರಾರು ಹಳ್ಳಿಗಳಲ್ಲಿ ಇನ್ನೂ ಕತ್ತಲು ಆವರಿಸಿದೆ.