More

    ಲಕ್ಷ್ಮೇಶ್ವರದಲ್ಲಿ ಗ್ರಾಮಲೆಕ್ಕಾಧಿಕಾರಿಗಳ ಕಾರ್ಯಾಲಯದಲ್ಲಿ ಕತ್ತಲಲ್ಲೇ ಕಾರ್ಯ ನಿರ್ವಹಣೆ !

    ಲಕ್ಷ್ಮೇಶ್ವರ: ಪಟ್ಟಣದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯದ ವಿದ್ಯುತ್ ಬಿಲ್ ಪಾವತಿಸದ್ದರಿಂದ ತಿಂಗಳಿಂದ ಗ್ರಾಮ ಲೆಕ್ಕಾಧಿಕಾರಿಗಳು ಕತ್ತಲೆಯಲ್ಲಿಯೇ ಕಾರ್ಯ ನಿರ್ವಹಿಸುವಂತಾಗಿದೆ.

    ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯದಿಂದ ಪಾವತಿ ಸಬೇಕಿದ್ದ ಒಂದು ವರ್ಷದ ಬಿಲ್ ಮೊತ್ತ 2024 ರೂ. ಪಾವತಿಸದ್ದರಿಂದ ಕಳೆದ ಒಂದು ತಿಂಗಳ ಹಿಂದೆಯೇ ಹೆಸ್ಕಾಮ್ವರು ವಿದ್ಯುತ್ ಕಡಿತಗೊಳಿಸಿದ್ದಾರೆ.

    ಪಟ್ಟಣ ವ್ಯಾಪ್ತಿಯ ಹಿರೇಬಣ, ಪೇಠಬಣ, ದೇಸಾಯಿಬಣ, ಬಸ್ತಿಬಣ ಹಾಗೂ ಹುಲಗೇರಿಬಣಗಳ 5 ಜನ ಗ್ರಾಮ ಲೆಕಾಧಿಕಾರಿಗಳು ಕಾರ್ಯ ನಿರ್ವಹಿಸುವ ಈ ಕಾರ್ಯಾಲಯವು ಈಗ ಕತ್ತಲೆಯ ಕೂಪವಾಗಿದೆ. ನಿತ್ಯ ನೂರಾರು ಸಂಖ್ಯೆಯಲ್ಲಿ ಕಚೇರಿ ಕಾರ್ಯಕ್ಕಾಗಿ ಆಗಮಿಸುವ ಜನರ ಕೆಲಸ ಮಾಡಿಕೊಡಲು ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ಮೊಬೈಲ್ ಬೆಳಕಿನಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಮೊದಲೇ ಈಗಲೂ ಆಗಲೂ ಬೀಳುವ ಸ್ಥಿತಿಯಲ್ಲಿರುವ ಈ ಕಟ್ಟಡದಲ್ಲಿ 4 ಚಿಕ್ಕದಾದ ಕೊಠಡಿಗಳಿದ್ದು, ಹಗಲು ಹೊತ್ತಿನಲ್ಲಿಯೂ ಕತ್ತಲೆಯಿಂದ ಕೂಡಿರುತ್ತವೆ. ಸುತ್ತಲೂ ಗಲೀಜಿನಿಂದ ಕೂಡಿರುವ ಕಟ್ಟಡದಲ್ಲಿ ಬೆಳಕಿಲ್ಲದ್ದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಒಂದು ಕಡೆ ಸೊಳ್ಳೆಯ ಕಾಟ, ಇನ್ನೊಂದು ಕಡೆ ಕಟ್ಟಡ ಬೀಳುವ ಭೀತಿ, ಇನ್ನೊಂದಡೆ ಕತ್ತಲಲ್ಲಿ ಕಾರ್ಯ ನಿರ್ವಹಿಸುವ ಸಂಕಷ್ಟ ಗ್ರಾಮ ಲೆಕ್ಕಾಧಿಕಾರಿಗಳದ್ದು. ಚಾವಡಿಯದೊಂದು ಕಥೆಯಾದರೆ ತಹಸೀಲ್ದಾರ್ ಕಚೇರಿಯ ಕಥೆಯೂ ಇದಕ್ಕೆ ಹೊರತಾಗಿಲ್ಲ. ಕಳೆದ 8 ತಿಂಗಳಿಂದ 21 ಸಾವಿರ ರೂ. ವಿದ್ಯುತ್ ಬಾಕಿ ಉಳಿಸಿಕೊಂಡಿದ್ದಾರೆ. ಬಿಲ್ ಪಾವತಿಸದಿದ್ದರೆ ಕಚೇರಿಯ ಸಂಪರ್ಕ ವನ್ನೂ ಕಡಿತ ಮಾಡುವುದಾಗಿ ಹೆಸ್ಕಾಮ್ವರು ನೋಟಿಸ್ ನೀಡಿದ್ದಾಗಿ ತಿಳಿಸಿದ್ದಾರೆ.

    ಲಕ್ಷ್ಮೇಶ್ವರದ ತಹಸೀಲ್ದಾರ್ ಕಚೇರಿ ಕಾರ್ಯಾ ರಂಭಗೊಂಡು 2 ವರ್ಷ ಕಳೆದರೂ ಪೂರ್ಣ ಪ್ರಮಾಣದ ಅಧಿಕಾರಿ ಮತ್ತು ಅನುದಾನ ಇಲ್ಲದ್ದ ರಿಂದ ಕಚೇರಿ ನಾಮಕಾವಸ್ತೆ ಆಗಿದೆ. ಒಂದು ರೂ. ಖರ್ಚು ಮಾಡಬೇಕಾದರೂ ಶಿರಹಟ್ಟಿ ತಹಸೀಲ್ದಾರರಿಂದಲೇ ಅನುಮತಿ ಪಡೆಯಬೇಕು. ಸರ್ಕಾರಕ್ಕೆ ವಿದ್ಯುತ್ ಬಿಲ್ ಪಾವತಿಸಲೂ ಹಣ ಇಲ್ಲವೆಂದಾದರೆ ನಾಚಿಕೆ ಗೇಡಿನ ಸಂಗತಿ.

    | ಚನ್ನಪ್ಪ ಜಗಲಿ ತಾಪಂ ಮಾಜಿ ಸದಸ್ಯ

    ತಹಸೀಲ್ದಾರ್ ಕಚೇರಿಯ 8 ತಿಂಗಳ ಬಿಲ್ 21 ಸಾವಿರ ರೂ. ಮತ್ತು ಕಂದಾಯ ಇಲಾಖೆಯ ವರ್ಷದ ಬಿಲ್ 2024 ರೂ. ಪಾವತಿಸಿಲ್ಲ. ಈ ಬಗ್ಗೆ ಅನೇಕ ಬಾರಿ ಬಿಲ್ ಪಾವತಿಸುವಂತೆ ತಿಳಿಸಿದ್ದೇವೆ. ಆದರೂ ಸ್ಪಂದಿಸದ್ದರಿಂದ ಹಿರಿಯ ಅಧಿಕಾರಿಗಳ ಆದೇಶದಂತೆ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯದ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದೇವೆ.

    | ಎಂ.ಟಿ. ದೊಡ್ಡಮನಿ ಹೆಸ್ಕಾಂ ಎಇಇ

    ಕಂದಾಯ ಇಲಾಖೆಯ ವಿದ್ಯುತ್, ಪೇಪರ್ ಸೇರಿ ಕಚೇರಿಯ ಎಲ್ಲ ಖರ್ಚು ವೆಚ್ಚಗಳ ಬಿಲ್ ಅನ್ನು ಶಿರಹಟ್ಟಿಯ ತಹಸೀಲ್ದಾರ್ ಕಚೇರಿಗೆ ಹಾಜರುಪಡಿಸಲಾಗುತ್ತದೆ. ಅನುದಾನ ಲಭ್ಯತೆಯ ಆಧಾರದ ಮೇಲೆ ಬಿಲ್ ಪಾವತಿಯಾಗುತ್ತವೆ. ತಹಸೀಲ್ದಾರ್ ಮತ್ತು ಗ್ರಾಮಲೆಕ್ಕಾಧಿಕಾರಿಗಳ ಕಾರ್ಯಾಲಯದ ವಿದ್ಯುತ್ ಬಿಲ್​ಗಳನ್ನು ಶಿರಹಟ್ಟಿ ತಹಸೀಲ್ದಾರ್ ಕಚೇರಿಗೆ ಸಲ್ಲಿಸಲಾಗಿದೆ.

    | ಎಂ.ಜಿ. ದಾಸಪ್ಪನವರ ಉಪ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts