ಜೂನ್ ಮೊದಲ ವಾರ ಜನತೆಗೆ ಕರೆಂಟ್ ಶಾಕ್?

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಜೂನ್ ಮೊದಲ ವಾರದಲ್ಲಿ ವಿದ್ಯುತ್ ದರ ಪರಿಷ್ಕರಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ (ಕೆಇಆರ್​ಸಿ) ಸಿದ್ಧತೆ ನಡೆಸಿದೆ.

ಕೆಇಆರ್​ಸಿ ನಿಯಮಾವಳಿ ಪ್ರಕಾರ ಪ್ರತಿ ವರ್ಷ ಏಪ್ರಿಲ್​ನಲ್ಲಿ ವಿದ್ಯುತ್ ಪರಿಷ್ಕೃತ ದರ ಪ್ರಕಟವಾಗಿ ಜಾರಿಗೆ ಬರಬೇಕು. ಆದರೆ, ಅಷ್ಟರೊಳಗಾಗಿ ಲೋಕಸಭೆ ಚುನಾವಣೆ ಘೋಷಣೆಯಾಗಿ ನೀತಿಸಂಹಿತೆ ಜಾರಿಗೆ ಬಂದ ಕಾರಣ ದರ ಪರಿಷ್ಕರಣೆಯನ್ನು ಮುಂದೂಡಲಾಗಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುತ್ತಿರುವ ಕಾರಣ ಮಾಸಾಂತ್ಯದ ತನಕ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಜೂನ್ ಮೊದಲ ವಾರದಲ್ಲಿ ಪರಿಷ್ಕೃತ ದರ ಪ್ರಕಟ ಮಾಡಲು ಕೆಇಆರ್​ಸಿ ಮುಂದಾಗಿದೆ.

ಎಸ್ಕಾಂಗಳು ಪ್ರತಿ ಯುನಿಟ್​ಗೆ 1 ರೂ ಏರಿಕೆ ಕೇಳಿವೆ. ಕಳೆದ ವರ್ಷ ಪ್ರತಿ ಯುನಿಟ್​ಗೆ ಸರಾಸರಿ 26 ಪೈಸೆ ಹೆಚ್ಚಳ ಮಾಡಲಾಗಿತ್ತು. ಈ ಬಾರಿ ಪ್ರತಿ ಯುನಿಟ್​ಗೆ 25 ರಿಂದ 40 ಪೈಸೆ ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ.