ವಿದ್ಯುತ್ ತಂತಿ ಹರಿದುಬಿದ್ದು ಕಬ್ಬು ಬೆಂಕಿಗೆ ಆಹುತಿ

ಕಬ್ಬೂರ: ಸಮೀಪದ ಕೆಂಚನಟ್ಟಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಗುರುವಾರ ಬೆಂಕಿ ಹೊತ್ತಿಕೊಂಡು ಸುಮಾರು ಒಂದೂವರೆ ಎಕರೆಯಲ್ಲಿ ಬೆಳೆದು ನಿಂತಿದ್ದ ಅಂದಾಜು 65 ಟನ್ ಕಬ್ಬು ಬೆಂಕಿಗೆ ಆಹುತಿಯಾಗಿದೆ.

ವಿದ್ಯುತ್ ತಂತಿ ಹರಿದು ಬಿದ್ದು ಕಬ್ಬಿಗೆ ಬೆಂಕಿ ತಗುಲಿದೆ ಎಂದು ಗೊತ್ತಾಗಿದೆ. ಸುಭಾಷ ಮಲ್ಲಪ್ಪ ಕಾಮಗೌಡ,ಭೀಮಪ್ಪ ಬಸವಂತ ಖೋತ, ಪೂರ್ಣಿಮಾ ಕಾಮಗೌಡ ಎಂಬುವವರ ಕಬ್ಬಿನ ಗದ್ದೆ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ವಾಹನ ಬರುವವರೆಗೂ ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸಪಟ್ಟರಲ್ಲದೇ, ಹೆಚ್ಚಿನ ಅನಾಹುತ ತಪ್ಪಿಸಿದರು. ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ವಿ.ಎಸ್.ಢವಳೇಶ್ವರ ಹಾಗೂ ಕಬ್ಬೂರ ಉಪ ಠಾಣೆಯ ಎಎಸ್‌ಐ ಎಸ್.ಎಲ್.ಹೂಗಾರ ಹಾಗೂ ಸಿಬ್ಬಂದಿ ಬೇಟಿ ನೀಡಿ ಪರಿಶೀಲಿಸಿದರು.

ಬೆಂಕಿ ದುರಂತದಲ್ಲಿ ಕಬ್ಬು ಭಸ್ಮ

ಎಂ.ಕೆ.ಹುಬ್ಬಳ್ಳಿ: ಇಲ್ಲಿಯ ಹೊರವಲಯದ ಹೊಲವೊಂದರಲ್ಲಿ ಗುರುವಾರ ಮಧ್ಯಾಹ್ನ ವಿದ್ಯುತ್ ತಂತಿಗಳಿಂದ ಬೆಂಕಿ ತಗುಲಿ ಸುಮಾರು 2ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ.

ಪಟ್ಟಣದ ಮಹೇಶ ಕಲ್ಲಪ್ಪ ಡೂಗನವರ ಎಂಬುವರಿಗೆ ಸೇರಿದ ಕಬ್ಬಿನ ಗದ್ದೆ ಬೆಂಕಿಗೆ ಆಹುತಿಯಾಗಿದೆ. ಗದ್ದೆ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಗಳಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ.

ಸ್ಥಳೀಯರು ಸಮಯ ಪ್ರಜ್ಞೆ ಮೆರೆದು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದು, ಅಕ್ಕ-ಪಕ್ಕದ ಕಬ್ಬಿನ ಗದ್ದೆಗಳಿಗೆ ಬೆಂಕಿ ಹರಡದಂತೆ ತಡೆದಿದ್ದಾರೆ. ಸಂಭವಿಸಬಹುದಾದ ಹೆಚ್ಚಿನ ಅನಾಹುತ ಗ್ರಾಮಸ್ಥರ ಸಕಾಲಿಕ, ಶೀಘ್ರ ಪ್ರಯತ್ನದಿಂದ ತಪ್ಪಿದೆ.
ಪೊಲೀಸರು ಸಂಜೆಯವರೆಗೂ ಪ್ರಕರಣ ದಾಖಲಿಸಿಕೊಂಡಿರಲಿಲ್ಲ.