ಮಳೆ ಗಾಳಿಗೆ ನೆಲಕ್ಕುರುಳಿದ ವಿದ್ಯುತ್ ಕಂಬಗಳು

ಕೊಳ್ಳೇಗಾಲ: ಪಟ್ಟಣದ ಬೆಂಗಳೂರು ರಸ್ತೆ ಮಗ್ಗುಲಲ್ಲಿರುವ ಕೃಷಿ ಜಮೀನೊಂದರಲ್ಲಿ ಗಾಳಿ ಸಹಿತ ಬಂದ ಮಳೆಗೆ 3 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಕೆ.ಜೆ.ಜವರಪ್ಪ ಹಾಗೂ ಸಾಕಮ್ಮ ಎಂಬುವರಿಗೆ ಸೇರಿದ ಸರ್ವೇ ನಂಬರ್ 62ರ ಜಮೀನಿನಲ್ಲಿ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಏ.8 ರಂದು ಮಧ್ಯಾಹ್ನ ಹೆಣ್ಣಾಳುಗಳ ತಂಡ ಭತ್ತದ ನಾಟಿ ಮಾಡುತ್ತಿದ್ದ ವೇಳೆ ಗಾಳಿ ಸಹಿತ ಮಳೆ ಆರಂಭವಾಗಿದೆ. ಪರಿಣಾಮ ಜಮೀನಿನ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಳವಡಿಸಿದ್ದ 3 ವಿದ್ಯುತ್ ಕಂಬಗಳು ದಿಢೀರ್ ನೆಲಕ್ಕುರುಳಿವೆ.

ಈ ಕುರಿತು ಸೆಸ್ಕ್ ಎಇಇ ಲಿಂಗರಾಜು ಅವರಿಗೆ ದೂರು ನೀಡಿರುವ ಜಮೀನಿನ ಮಾಲೀಕರು, ನೆಲಕ್ಕುರುಳಿರುವ ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿದ್ದಾರೆ.