ವಿದ್ಯುತ್ ತಗುಲಿ ಟ್ರ್ಯಾಕ್ಟರ್ ಚಾಲಕ ಸಾವು

ಘಟಪ್ರಭಾ: ಸಮೀಪದ ತುಕ್ಕನಟ್ಟಿ-ಕಲ್ಲೋಳಿ ಹದ್ದಿಯಲ್ಲಿ ಕಬ್ಬು ತುಂಬಿಸಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರಿಗೆ ವಿದ್ಯುತ್ ತಂತಿ ತಗಲಿದ್ದರಿಂದ ಟ್ರ್ಯಾಕ್ಟರ್ ಚಾಲಕ ಮೃತಪಟ್ಟಿದ್ದು, ಈ ಬಗ್ಗೆ ಹೆಸ್ಕಾಂ ಇಲಾಖೆ ಮೇಲೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ.

ಗೋಕಾಕ ತಾಲೂಕಿನ ತುಕ್ಕನಟ್ಟಿ ಗ್ರಾಮದ ನಿವಾಸಿ ಕಲ್ಲಪ ದುಂಡಪ್ಪ ಗದಾಡಿ (28) ಮೃತ. ಮೃತನು ಟ್ರ್ಯಾಕ್ಟರ್‌ನಲ್ಲಿ ಕಬ್ಬು ತುಂಬಿಕೊಂಡು ಕೊಳವಿ ಸಕ್ಕರೆ ಕಾರ್ಖಾನೆಗೆ ಹೋಗುವಾಗ ಕಲ್ಲೋಳಿ ಹತ್ತಿರ ಕಿನಾಲ್ ದಂಡೆಯಲ್ಲಿ ಬರುತ್ತಿರುವಾಗ ಜೋತು ಬಿದ್ದ ವಿದ್ಯುತ್ ತಂತಿಗೆ ಕಬ್ಬಿನ ಟ್ರ್ಯಾಕ್ಟರ್ ಸಿಕ್ಕಿಕೊಂಡಿದೆ.

ಈ ಸಂದರ್ಭದಲ್ಲಿ ಕಲ್ಲಪ್ಪನಿಗೆ ವಿದ್ಯುತ್ ತಗುಲಿ ಕೆಳಗೆ ಬಿದ್ದಿದ್ದ. ಇದನ್ನು ಕಂಡ ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ, ಮಾರ್ಗ ಮಧ್ಯೆದಲ್ಲಿ ಕಲ್ಲಪ್ಪ ಮೃತಪಟ್ಟಿದ್ದ.

ಹಲವು ಬಾರಿ ಕಲ್ಲೋಳಿಯಲ್ಲಿ ಜೋತು ಬಿದ್ದ ತಂತಿ ಬದಲಿಸುವಂತೆ ಈ ಸಂಬಂಧ ಹೆಸ್ಕಾಂ ಇಲಾಖೆಗೆ ಲಿಖಿತ ರೂಪದಲ್ಲಿ ಮನವಿ ಮಾಡಿದ್ದರು. ತಂತಿ ಸರಿಪಡಿಸದೆ ಇರುವುದರಿಂದ ಈ ಅವಘಡ ಸಂಭವಿಸಿದೆ ಎಂದು ಮೃತನ ಅಣ್ಣ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೃತನ ಸಂಬಂಧಿಕರು ಕೊಟ್ಟ ದೂರಿನಂತೆ ಘಟಪ್ರಭಾ ಹೆಸ್ಕಾಂ ಇಲಾಖೆಯ ಮೇಲೆ ಎಫ್‌ಐಆರ್ ಮಾಡಿ ತನಿಖೆಯನ್ನು ನಡೆಸುತ್ತಿದ್ದೇವೆ.

| ರಮೇಶ ಪಾಟೀಲ ಪಿಎಸ್‌ಐ, ಘಟಪ್ರಭಾ ಪೊಲೀಸ್ ಠಾಣೆ

ನಾವು ತನಿಖೆ ಕೈಗೊಂಡಿದ್ದು, ಈ ಅವಘಡಕ್ಕೆ ನಮ್ಮ ಇಲಾಖೆ ನಿರ್ಲಕ್ಷೃವೇ ಕಾರಣವಾದರೆ ಮೃತನ ಕುಟುಂಬಕ್ಕೆ ಇಲಾಖೆಯಿಂದ ಧನಸಹಾಯ ಮಾಡಲಾಗುವುದು.

| ಎಂ.ಎಸ್.ನಾಗಣ್ಣನ್ನವರ ಘಟಪ್ರಭಾ ಹೆಸ್ಕಾಂ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ