ರಟ್ಟಿಹಳ್ಳಿ: ಬೈಂದೂರು- ರಾಣೆಬೆನ್ನೂರ (766ಸಿ) ರಾಷ್ಟ್ರೀಯ ಹೆದ್ದಾರಿಯ ಪಟ್ಟಣದ ವ್ಯಾಪ್ತಿಯಲ್ಲಿ ಅಳವಡಿಸಿರುವ ಸಿಂಗಲ್ ಆಮ್ರ್ ಬ್ರಾಕೇಟ್ ಲೈಟ್ ಮತ್ತು ವಿವಿಧೆಡೆ ಹೈಮಾಸ್ಕ್ ದೀಪಗಳು ಬೆಳಗಲು ಆರಂಭಿಸಿದ್ದು, ವಾಹನ ಹಾಗೂ ಜನರ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.
ಪಟ್ಟಣದ ವ್ಯಾಪ್ತಿಯ ಹೆದ್ದಾರಿಯ 2 ಕಿ.ಮೀ. ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು, ಭಗತ್ಸಿಂಗ್ ಮತ್ತು ಫ್ರೆಂಡ್ಸ್ ಸರ್ಕಲ್ ವೃತ್ತದಲ್ಲಿ ತಲಾ ಒಂದು ಹೈಮಾಸ್ಕ್ ವಿದ್ಯುತ್ ಕಂಬ, ಮಾಸೂರು ಗ್ರಾಮದ 2 ಕಿ.ಮೀ. ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಮತ್ತು ಶಿಕಾರಿಪುರ ಕ್ರಾಸ್ ಬಳಿ ಒಂದು ಹೈಮಾಸ್ಕ್ ವಿದ್ಯುತ್ ಕಂಬ ಮತ್ತು ರಾಣೆಬೆನ್ನೂರ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ 0.5 (ಅರ್ಧ) ಕಿ.ಮೀ. ರಸ್ತೆಯ ಬದಿ ಲೈಟ್ಗಳನ್ನು ಅಳವಡಿಸಲಾಗಿತ್ತು. ರಸ್ತೆ ಕಾಮಗಾರಿ ಮುಕ್ತಾಯವಾಗಿ 23 ತಿಂಗಳು ಗತಿಸಿದರೂ ಈ ವಿದ್ಯುದ್ದೀಪಗಳು ಬೆಳಗುತ್ತಿರಲಿಲ್ಲ. ಪಟ್ಟಣದಲ್ಲಿ ಏಪ್ರಿಲ್ನಲ್ಲಿ ಜರುಗಿದ ಜಾತ್ರಾ ಮಹೋತ್ಸವದ ವೇಳೆ ಹೆದ್ದಾರಿಯಲ್ಲಿನ ವಿದ್ಯುತ್ ದೀಪಗಳಿಗೆ ಚಾಲನೆ ನೀಡಿ ಬಳಿಕ 3 ತಿಂಗಳು ಸ್ಥಗಿತಗೊಳಿಸಲಾಗಿತ್ತು. ಈ ಕುರಿತು ವಿಜಯವಾಣಿಯಲ್ಲಿ ಜು. 6ರಂದು ‘ಕಾಮಗಾರಿ ಮುಗಿದರೂ ಬೆಳಗದ ವಿದ್ಯುದ್ದೀಪ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ಹೆದ್ದಾರಿ ಕಾಮಗಾರಿ ನಿರ್ವಹಿಸಿದ ದಾವಣಗೆರೆ ಉದಯ ಕನ್ಸ್ಟಕ್ಸನ್ ಕಂಪನಿ ಗುತ್ತಿಗೆದಾರರು, ಹೆದ್ದಾರಿ ವಿಭಾಗ ಮತ್ತು ಹೆಸ್ಕಾಂ ಇಲಾಖೆ ಅಧಿಕಾರಿಗಳೊಂದಿಗೆ ರ್ಚಚಿಸಿ, ಪಟ್ಟಣ ಪಂಚಾಯಿತಿಯಿಂದ ನಿರಾಪೇಕ್ಷಣಾ ಪತ್ರ ಪಡೆದುಕೊಂಡು ವಿವಿಧೆಡೆ ಮೀಟರ್ಗಳನ್ನು ಅಳವಡಿಸಲಾಗಿದೆ. ಇತ್ತೀಚೆಗೆ ಶಾಸಕ ಯು.ಬಿ. ಬಣಕಾರ ಅವರು ವಿದ್ಯುದ್ದೀಪಗಳ ಆರಂಭಕ್ಕೆ ಚಾಲನೆ ನೀಡಿದ್ದಾರೆ.
ಪಟ್ಟಣದ ಹೆದ್ದಾರಿ ಬದಿಯ ವಿದ್ಯುತ್ ಕಂಬಗಳು ಮತ್ತು ಹೈಮಾಸ್ಕ್ ವಿದ್ಯುದ್ದೀಪಗಳು ಬೆಳಗದಿರುವ ಬಗ್ಗೆ ಪಟ್ಟಣ ಪಂಚಾಯಿತಿಗೆ ಹಲವು ದೂರು ಬಂದಿದ್ದವು. ಸಂಬಂಧಿಸಿದ ಗುತ್ತಿಗೆದಾರರು ಶೀಘ್ರವೇ ಅನುಮತಿ ಪಡೆದು ವಿದ್ಯುದ್ದೀಪಗಳು ಬೆಳಗಲು ಚಾಲನೆ ಕೊಡಿಸಿದ್ದಾರೆ.
| ಸಂತೋಷ ಚಂದ್ರಿಕೇರ, ಪಪಂ ಮುಖ್ಯಾಧಿಕಾರಿ ರಟ್ಟಿಹಳ್ಳಿ